Revathi: "ಕಾಸ್ಟಿಂಗ್ ಕೌಚ್‌ಗೆ ಕಾರಣ ಏನು ಗೊತ್ತಾ? ನಾನು ಆ ಸಂದರ್ಭಗಳಲ್ಲಿ ನಕ್ಕು ಸುಮ್ಮನಾಗುತ್ತಿದ್ದೆ": ರೇವತಿ
ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಕರಾಳಮುಖವನ್ನು ಸಾಕಷ್ಟು ನಟ-ನಟಿಯರು ತೆರೆದಿಟ್ಟಿದ್ದಾರೆ. ಪಾತ್ರಕ್ಕಾಗಿ ಪಲ್ಲಂಗ ಎನ್ನುವ ಹೀನ ಸಂಸ್ಕೃತಿ ಬಣ್ಣದಲೋಕದಲ್ಲಿದೆ ಎಂದು ಹಲವರು ಹೇಳಿದ್ದಾರೆ. ಮೀಟು ಅಭಿಮಾನದ ಅಡಿಯಲ್ಲಿ ಹಲವು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.
ಬಹುಭಾಷಾ ನಟಿ ರೇವತಿ ಕಾಸ್ಟಿಂಗ್ ಕೌಚ್ ವಿಚಾರವಾಗಿ ಎಬಿಪಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಕೇರಳದ ಕೊಚ್ಚಿ ಮೂಲದ ರೇವತಿ ಬಹಳ ಚಿಕ್ಕವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದರು. ಮಲಯಾಳಂ, ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡ ಸೇರಿ 5 ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪೋಷಕ ಪಾತ್ರಗಳಲ್ಲಿ ಆಕೆ ಮಿಂಚುತ್ತಿದ್ದಾರೆ. ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ರೀತಿಯ ವಿಚಾರಗಳಿಗೆ ಮೊಬೈಲ್ ಫೋನ್ ಹೆಚ್ಚು ಕಾರಣ ಎಂದು ರೇವತಿ ಹೇಳಿದ್ಧಾರೆ.

ಚಿತ್ರರಂಗದಲ್ಲಿ ತಾವು ಎದುರಿಸಿದ ಕಹಿ ಘಟನೆಗಳ ಬಗ್ಗೆಯೂ ಮಾತನಾಡಿರುವ ಮಲಯಾಳಂ ಹಿರಿಯ ನಟಿ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. "80, 90ರ ದಶಕಗಳಲ್ಲಿ ನಮ್ಮ ಬಳಿ ಮೊಬೈಲ್ ಫೋನ್ ಇರಲಿಲ್ಲ. ಮೊಬೈಲ್ ಫೋನ್ ಹಾಗೂ ಮೆಸೇಜ್‌ಗಳಿಂದಲೇ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಎಂದು ನನಗೆ ಅನ್ನಿಸುತ್ತದೆ. ಯಾಕಂದರೆ ಒಬ್ಬ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೀನು ನನಗೆ ಬೇಕು, ನನ್ನೊಟ್ಟಿಗೆ ಇರು ಎಂದು ಕೆಟ್ಟ ಉದ್ದೇಶದಿಂದ ಕೇಳುವುದು ಕಷ್ಟ" ಎಂದು ಅವತ್ತಿನ ಕಾಲದಲ್ಲಿ ಇದೆಲ್ಲ ಅಷ್ಟು ಸುಲಭ ಇರಲಿಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ಧಾರೆ.
"ಈ ಕಾಲದಲ್ಲಿ ಒಂದು ಮಸೇಜ್ ಮಾಡಿ ಬಂದು ಭೇಟಿ ಮಾಡು, ಕಾಫಿಗೆ ಹೋಗೋಣ ಹೀಗೆ ನೂರಾರು ಮೆಸೇಜ್‌ಗಳು ಹೋಗುತ್ತವೆ. ಈ ಕಾಲದಲ್ಲಿ ಮೊಬೈಲ್ ಫೋನ್‌ಗಳಿಂದಲೇ ಹೆಚ್ಚು ಸಮಸ್ಯೆಗಳು ಬರುತ್ತದೆ. ಮೊಬೈಲ್ ಫೋನ್‌ಗಳಿಂದ ಎಮೋಜಿ ಬಳಸುವುದು ಹೆಚ್ಚಾಗಿದೆ. ಅದೇ ದೊಡ್ಡ ಸಮಸ್ಯೆಯಾಗಿದೆ. ಎಮೋಜಿಗಳ ಅರ್ಥ ಸರಿಯಾಗಿ ಅರ್ಥವಾಗುವುದಿಲ್ಲ. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಬಳಸಬೇಕು" ಎಂದು ಹಿರಿಯ ನಟಿ ರೇವತಿ ಸಲಹೆ ನೀಡಿದ್ದಾರೆ.
ಎಮೋಜಿಗಳನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಇಲ್ಲದಿದ್ದರೆ ಆ ಕಡೆ ಇರುವ ವ್ಯಕ್ತಿಗೆ ತಪ್ಪಾಗಿ ಅರ್ಥವಾಗಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಪ್ರೊಫೆಷನಲ್ ಆಗಿ ಮಾತನಾಡುವಾಗ ಎಮೋಜಿಗಳನ್ನು ಬಳಸಲೇಬಾರದು. ಒಂದು ಕಾಲದಲ್ಲಿ ಹೆಣ್ಣು ಗಂಡು ಒಂದುಕಡೆ ಇದ್ದಾಗ ಸಹಜವಾಗಿ ಆಗಿ ಮಾತನಾಡುತ್ತಿದ್ದರು. ಆದರೆ ಅದನ್ನು ಮೀರಿ ಹೋಗಬೇಕು ಅಂದರೆ ಅನುಮತಿ ಬೇಕು. ಆ ಅನುಮತಿ ಇಂಡಸ್ಟ್ರಿಯಲ್ಲಿ ಇರಲಿಲ್ಲ"
"ಆ ಕಾಲದಲ್ಲಿ ನನಗೆ ಏನಾದರೂ ಇಂತಹ ಕೆಟ್ಟು ಸಂದರ್ಭಗಳು ಎದುರಾದರೆ ನಕ್ಕು ನೋ ಎಂದು ಹೇಳುತ್ತಿದ್ದೆ. ಆ ಬಳಿಕ ಆಪ್ತರ ಜೊತೆ ಆ ವಿಷಗಳನ್ನು ಹೇಳಿಕೊಳ್ಳುತ್ತಿದ್ದೆ. ಯಾಕಂದರೆ ಇಂಡಸ್ಟ್ರಿಯಲ್ಲಿ ಯಾರನ್ನೂ ನಂಬುವುದು ಕಷ್ಟ. ವಿಚಾರ ಹರಡಿಬಿಡುತ್ತಿತ್ತು. ವೈಯಕ್ತಿಕವಾಗಿ ನಮ್ಮ ತಾಯಿ ನನ್ನೊಟ್ಟಿಗೆ ಬಹಳ ಓಪನ್ ಆಗಿ ಇರುತ್ತಿದ್ದರು. ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಹೇಳುತ್ತಿದ್ದರು"
"ನಾನು 17 ವರ್ಷಕ್ಕೆ ಚಿತ್ರರಂಗಕ್ಕೆ ಬಂದೆ. ಮಕ್ಕಳನ್ನು ಆ ಕಾಲದಲ್ಲಿ ಆ ರೀತಿ ಬೆಳೆಸುತ್ತಿದ್ದರು. ಹೇಗೆ ಮಾತನಾಡಬೇಕು ಎಂದು ಗೊತ್ತಾಗುತ್ತದೆ. ಆ ಕಾಲದಲ್ಲೂ ಗಂಡು- ಹೆಣ್ಣು ಹೇಗೆ ಮಾತನಾಡಬೇಕು ಎಂದು ಗೊತ್ತಾಗುತ್ತಿರಲಿಲ್ಲ. ನಮ್ಮನ್ನು ಹೇಗೆ ಬೆಳೆಸುತ್ತಾರೆ ಎನ್ನುವುದರ ಮೇಲೆ ಅದು ನಿರ್ಧಾರವಾಗುತ್ತದೆ. ಪೋಷಕರು ಧೈರ್ಯ ತುಂಬಬೇಕು. ಆದರೂ ಕೆಲವೊಮ್ಮೆ ಅಂತಹ ಸಂದರ್ಭಗಳು ಎದುರಾಗುತ್ತಿತ್ತು. ಆ ಕ್ಷಣಕ್ಕೆ ಏನಾದರೂ ಹೇಳಿಬಿಡಬೇಕು ಎನಿಸುತ್ತಿತ್ತು. ಆದರೆ ನಕ್ಕು ಸುಮ್ಮನಾಗುತ್ತಿದ್ದೆ. ಈಗಿನ ರೀತಿ ಆಗ ಇದ್ದಿದ್ದರೆ ನನಗೆ ಇಷ್ಟವಿಲ್ಲ ಎಂದು ನೇರವಾಗಿ ಹೇಳುತ್ತಿದ್ದೆ" ಎಂದು ರೇವತಿ ತಿಳಿಸಿದ್ದಾರೆ.
"ಈಗ ಇರುವ ಮೆಸೇಜ್ ಕಾರಣದಿಂದ ಯಾರು ಯಾರನ್ನು ಬೇಕಾದರೂ ಏನು ಬೇಕಾದರೂ ಕೇಳಬಹುದು. ಎಲ್ಲೆ ಮೀರಿ ಕೇಳಬಹುದು. ಎಮೋಜಿಗಳ ಅರ್ಥ ತಿಳಿಯಬೇಕು ಎಂದು ಇತ್ತೀಚೆಗೆ WCC ಬಳಿ ಕೇಳಲಾಯಿತು. ಎಮೋಜಿಗಳಿಂದ ತಪ್ಪು ಅರ್ಥ ರವಾನೆ ಆಗುತ್ತದೆ. ನೀವು ಏನು ಹೇಳಬೇಕು ಅದನ್ನು ಬರೆದು ಕಳುಹಿಸಿ. ನಾವು ಬೆಳೆದು ಬಂದ ಸಮಯಕ್ಕಿಂತ ಈ ಕಾಲ ಮಕ್ಕಳಿಗೆ ಕಷ್ಟಕರವಾಗುತ್ತಿದೆ" ಎಂದಿದ್ದಾರೆ.


Click it and Unblock the Notifications










