Shivarajkumar: ಹೊಂಬಾಳೆ ಫಿಲ್ಮ್ಸ್ ಚಿತ್ರದಲ್ಲಿ ಶಿವಣ್ಣ ಕನ್ಫರ್ಮ್, ಅನಿರುದ್ಧ್ ಮ್ಯೂಸಿಕ್.. ಆದ್ರೆ..
ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ಜೋರಾಗಿದೆ. ದಕ್ಷಿಣದ ಕಲಾವಿದರು ಬಾಲಿವುಡ್‌ನಲ್ಲಿ ಬಿಟೌನ್ ನಟನಟಿಯರು ತೆಲುಗು, ತಮಿಳು, ಕನ್ನಡದಲ್ಲಿ ನಟಿಸೋದು ಕಾಮನ್ ಆಗಿಬಿಟ್ಟಿದೆ. ಸ್ಯಾಂಡಲ್‌ವುಡ್ ಸ್ಟಾರ್ಸ್ ಕೂಡ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸೋಕೆ ಮುಂದಾಗಿದ್ದಾರೆ. ಈಗಾಗಲೇ 'ಜೈಲರ್' ನರಸಿಂಹನಾಗಿ ಶಿವಣ್ಣನ ಆರ್ಭಟ ಜೋರಾಗಿದೆ.
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕ್ರೇಜ್ ಈಗ ಟಾಲಿವುಡ್, ಕಾಲಿವುಡ್‌ನಲ್ಲೂ ಶುರುವಾಗಿದೆ. ನಿಧಾನವಾಗಿ ಮಾಲಿವುಡ್‌ಗೂ ವಿಸ್ತರಿಸುತ್ತಿದೆ. ರಜನಿಕಾಂತ್ ನಟನೆಯ 'ಜೈಲರ್' ಚಿತ್ರದ ಸಣ್ಣ ಪಾತ್ರದಲ್ಲಿ ಶಿವಣ್ಣ ಮ್ಯಾಜಿಕ್ ಮಾಡಿದ್ದಾರೆ. ತೆಲುಗು, ತಮಿಳು, ಮಲಯಾಳಂ ಪ್ರೇಕ್ಷಕರು ಕೂಡ ನರಸಿಂಹ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಕಣ್ಣಲ್ಲೇ ಕೊಲ್ಲುವ ಶಿವಣ್ಣನ ಅಭಿನಯಕ್ಕೆ ಮಾರೂ ಹೋಗಿದ್ದಾರೆ. ಹ್ಯಾಟ್ರಿಕ್ ಹೀರೊ ಹಳೇ ಸಿನಿಮಾಗಳನ್ನು ನೋಡಲು ಮುಗಿಬಿದ್ದಿದ್ದಾರೆ. ಇದರ ಬೆನ್ನಲ್ಲೇ ಶಿವಣ್ಣ ಪರಭಾಷೆ ಸಿನಿಮಾಗಳಲ್ಲಿ ಹೆಚ್ಚು ನಟಿಸಲು ಆಸಕ್ತಿ ತೋರಿಸಿದ್ದಾರೆ.

'ಜೈಲರ್' ಬಳಿಕ ಧನುಷ್ ನಟನೆಯ ತಮಿಳುನ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಮುಖ್ಯಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ಇನ್ನು ಒಂದಷ್ಟು ತಮಿಳು ಕಥೆಗಳನ್ನು ಕೇಳುತ್ತಿದ್ದಾರೆ. ಅಜಿತ್, ಕಮಲ್ ಹಾಸನ್ ಜೊತೆ ನಟಿಸೋ ಹಂಬಲ ವ್ಯಕ್ತಪಡಿಸಿದ್ದಾರೆ. ತಾಜಾ ಸಮಾಚಾರ ಏನಪ್ಪ ಅಂದ್ರೆ ಶಿವಣ್ಣ ಮಲಯಾಳಂ ಚಿತ್ರದಲ್ಲಿ ನಟಿಸೋ ಬಗ್ಗೆ ಚರ್ಚೆ ನಡೀತಿದೆ. ಈ ಬಗ್ಗೆ ಎದುರಾದ ಪ್ರಶ್ನೆಗೆ ಸೆಂಚುರಿ ಸ್ಟಾರ್ ಪಾಸಿಟಿವ್ ಆಗಿ ಉತ್ತರಿಸಿದ್ದಾರೆ.
ಮಲಯಾಳಂ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ನಟಿಸುತ್ತಾರೆ ಎನ್ನಲಾಗ್ತಿದೆ. ಪೃಥ್ವಿರಾಜ್ ನಿರ್ದೇಶಿಸಿ ನಟಿಸುತ್ತಿರುವ 'ಟೈಸನ್' ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಬಹಳ ಹಿಂದೆಯೇ ಈ ಸಿನಿಮಾ ಸೆಟ್ಟೇರಿದ್ದು ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ಚಿತ್ರದಲ್ಲಿ ಶಿವಣ್ಣ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಗ್ಗೆ ಎದುರಾದ ಪ್ರಶ್ನೆಗೆ ಶಿವಣ್ಣ ಮಾತನಾಡಿ "ಚರ್ಚೆ ನಡೆಯುತ್ತಿದೆ. ಆದಷ್ಟು ಬೇಗ ಗೊತ್ತಾಗುತ್ತದೆ. ಪೃಥ್ವಿರಾಜ್ ಸಿನಿಮಾಗಳಂದ್ರೆ ಬಹಳ ಇಷ್ಟ. ಒಟ್ನಲ್ಲಿ ಅವರೊಟ್ಟಿಗೆ ನಟಿಸುತ್ತೇನೆ" ಎಂದಿದ್ದಾರೆ.

'ಟೈಸನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಗೆ ಬರಲಿದೆ. ಇದು ಪೃಥ್ವಿರಾಜ್ ನಿರ್ದೇಶನದ 4ನೇ ಸಿನಿಮಾ. 'ಲೂಸಿಫರ್', 'ಬ್ರೋ ಡ್ಯಾಡಿ', ಎಲ್2 ಬಳಿಕ ಈ ಚಿತ್ರವನ್ನು ಪೃಥ್ವಿರಾಜ್ ಕೈಗೆತ್ತಿಕೊಂಡಿದ್ದಾರೆ. ಟೈಟಲ್‌ನಿಂದಲೇ 'ಟೈಸನ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈ ಹಿಂದೆ ಕೂಡ ಹೊಂಬಾಳೆ ಫಿಲ್ಮ್ಸ್ ಜೊತೆ ಶಿವಣ್ಣ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. 'ಜೈಲರ್' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣ ಎಂಟ್ರಿ ನೋಡಿ ಮಲಯಾಳಂ ಮಂದಿ ಕೂಡ ಹುಬ್ಬೇರಿಸಿದ್ದಾರೆ. ಶಿವಣ್ಣ ಮಾಲಿವುಡ್ ಎಂಟ್ರಿಗೆ ಅಲ್ಲಿನ ಪ್ರೇಕ್ಷಕರು ಕಾಯುತ್ತಿದ್ದಾರೆ.
'ಟೈಸನ್' ಚಿತ್ರದಲ್ಲಿ ಶಿವಣ್ಣ ನಟಿಸೋದು ಬಹುತೇಕ ಖಚಿತ ಎಂದು ಮಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ಇನ್ನು ಸೆಂಚುರಿ ಸ್ಟಾರ್ ಸಿಂಪ್ಲಿಸಿಟಿಗೆ ಪೃಥ್ವಿರಾಜ್ ಸುಕುಮಾರನ್ ಫಿದಾ ಆಗಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ಕನ್ನಡ ಸಿನಿಮಾದಲ್ಲಿ ನಟಿಸೋ ಆಸೆ ವ್ಯಕ್ತಪಡಿಸಿದ್ದರು. ಶಿವಣ್ಣ ಕೂಡ ಪರಭಾಷಾ ಸಿನಿಮಾಗಳಲ್ಲಿ ನಟಿಸೋಕೆ ಸಿದ್ಧ ಎಂದು ಹೇಳಿದ್ದಾರೆ. ಹಾಗಾಗಿ 'ಟೈಸನ್' ಚಿತ್ರದಲ್ಲಿ ನಟಿಸಿದರೂ ಅಚ್ಚರಿಪಡಬೇಕಿಲ್ಲ.
ಸದ್ಯ ಶಿವಣ್ಣನ ಕೈಯಲ್ಲಿ ಏಳೆಂಟು ಸಿನಿಮಾಗಳಿವೆ. 'ಘೋಸ್ಟ್' ಸಿನಿಮಾ ದಸರಾ ಸಂಭ್ರಮದಲ್ಲಿ ತೆರೆಗೆ ಬರಲಿದೆ. 'ಬೈರತಿ ರಣಗಲ್', 'ಕರಟಕ ದಮನಕ', '45' ಸಿನಿಮಾಗಳ ಚಿತ್ರೀಕರಣ ನಡೀತಿದೆ. ವರ್ಷಾಂತ್ಯಕ್ಕೆ ತಮಿಳಿನ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್ ಆಗಲಿದೆ. ಇನ್ನು 'ಜೈಲರ್' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣ ಎಂಟ್ರಿಗೆ ಸೀನ್‌ಗೆ ಅನಿರುದ್ಧ್ ರವಿಚಂದರ್ ಬಿಜಿಎಂ ಪ್ಲಸ್ ಆಗಿತ್ತು. 'ಟೈಸನ್' ಚಿತ್ರಕ್ಕೂ ಟೈಸಲ್ ಟ್ಯೂನ್ ಹಾಕುತ್ತಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications