ಮೋಹನ್ ಲಾಲ್ ಮುಡಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ಮಲಯಾಳಂ ಚಿತ್ರರಂಗದ ದಂತಕತೆ ಮೋಹನ್ ಲಾಲ್. ಕೇವಲ 18ರ ಹರೆಯದಲ್ಲಿಯೇ ಚಿತ್ರರಂಗಕ್ಕೆ ಬಂದ ಮೋಹನ್ ಲಾಲ್ ಇಲ್ಲಿಯವರೆಗೆ 400ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಅಭಿನಯದಿಂದ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳ ಹೃದಯವನ್ನು ಕೂಡ ಗೆದ್ದಿದ್ದಾರೆ.ಇನ್ನೂ..ಬದಲಾದ ಈ ಕಾಲದಲ್ಲಿ ವರ್ಷಕ್ಕೆ ಒಂದು ಚಿತ್ರ ಮಾಡಲು ಅನೇಕ ಸ್ಟಾರ್‌ಗಳು ಹಿಂದೆ ಮುಂದೆ ಯೋಚನೆ ಮಾಡುತ್ತಾರೆ.
ಆದರೆ.. ಮೋಹನ್ ಲಾಲ್ ಅವರದ್ದು ಇದಕ್ಕೆ ತದ್ವಿರುದ್ದವಾದ ವ್ಯಕ್ತಿತ್ವ. ಅವತ್ತು ಕೂಡ ಮೋಹನ್ ಲಾಲ್ ಬ್ಯುಸಿಯಾಗಿದ್ದರು. ಇವತ್ತು ಕೂಡ ಮೋಹನ್ ಲಾಲ್ ಬ್ಯುಸಿಯಾಗಿದ್ದಾರೆ. ಆ ಕಾಲದಲ್ಲಿ ಕೇವಲ 26ರ ಹರೆಯದಲ್ಲಿ ಒಂದಲ್ಲ.. ಎರಡಲ್ಲ.. ಒಂದೇ ವರ್ಷದಲ್ಲಿ 34 ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದ್ದು. ಆ ಪೈಕಿ 25 ಚಿತ್ರಗಳು ಬ್ಲಾಕ್ ಬಸ್ಟರ್ ಆಗಿ ಹೊರ ಹೊಮ್ಮಿದ್ದವು.

ಇಂಥಾ ಮೋಹನ್ ಲಾಲ್ ಕಳೆದ 45 ವರ್ಷಗಳಿಂದ ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪ್ರತಿಷ್ಠಿತ 'ದಾದಾ ಫಾಲ್ಕೆ ಪ್ರಶಸ್ತಿ'ಯನ್ನು ನೀಡಲು ಮುಂದಾಗಿದೆ.ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಾಹಿತಿಯನ್ನು ಹಂಚಿಕೊಂಡಿದ್ದು, ಚಿತ್ರರಂಗದಲ್ಲಿ ಮೋಹನ್ ಲಾಲ್ ಅವರ ಅದ್ಭುತ ಪ್ರಯಾಣ ಹಲವರಿಗೆ ಸ್ಫೂರ್ತಿ ನೀಡುವಂತಹದ್ದು ಎಂದು ಹೇಳಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದೆ.
ಭಾರತೀಯ ಸಿನಿಮಾ ರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಅವರ ಹೆಸರಿನಲ್ಲಿ ಭಾರತ 1969ರಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು, ಮೋಹನ್ ಲಾಲ್ ಸೆಪ್ಟೆಂಬರ್ 23-2025ರಂದು ಸ್ವೀಕರಿಸಲಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಆಯೋಜಿಸಲಾಗುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನೂ ಮೋಹನ್ ಲಾಲ್ ಮುಡಿಗೇರಿಸಿಕೊಳ್ಳಲಿದ್ದಾರೆ.
ಇನ್ನೂ ಕಳೆದ ವರ್ಷ ಭಾರತೀಯ ಚಿತ್ರರಂಗದ ಡಿಸ್ಕೋ ಡ್ಯಾನ್ಸರ್ ಮಿಥುನ್ ಚಕ್ರವರ್ತಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದಿತ್ತು. ಅದಕ್ಕೂ ಮುನ್ನ ವಹೀದಾ ರೆಹಮಾನ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 2018ರಲ್ಲಿ ಅಮಿತಾಬ್ ಬಚ್ಚನ್ ಮತ್ತು 2019ರಲ್ಲಿ ರಜಿನಿಕಾಂತ್ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು. 1995ರಲ್ಲಿ ಕನ್ನಡದ ವರ ನಟ ಡಾ.ರಾಜ್ ಕುಮಾರ್ ಅವರಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಅಂದ್ಹಾಗೇ ಮಲಯಾಳಂ ಚಿತ್ರರಂಗದಲ್ಲಿ ಈ ಹಿಂದೆ ಜನಪ್ರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗಿತ್ತು. 2004ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅಡೂರು ಗೋಪಾಲಕೃಷ್ಣನ್ ಪಡೆದಿದ್ದರು. ಈಗ ಮೋಹನ್ಲಾಲ್ ಅವರಿಗೆ 2023 ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ. ಈ ಮೂಲಕ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ಎರಡನೇ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಮೋಹನ್ ಲಾಲ್ ಪಾತ್ರವಾಗಿದ್ದಾರೆ.
ಇನ್ನುಳಿದಂತೆ ನಟನಾಗಿ ಮಾತ್ರವಲ್ಲದೇ ಗಾಯಕನಾಗಿ ನಿರ್ದೇಶಕನಾಗಿ ಕೂಡ ಗುರುತಿಸಿಕೊಂಡಿರುವ ಮೋಹನ್ ಲಾಲ್ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಕೂಡ ನೀಡಲಾಗಿದೆ. ಐದು ಬಾರಿ ರಾಷ್ಟ್ರಪ್ರಶಸ್ತಿಗಳನ್ನು ಕೂಡ ಮೋಹನ್ ಲಾಲ್ ಪಡೆದಿದ್ದಾರೆ. ಸದ್ಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು ಹಲವಾರು ರಾಜಕೀಯ ಗಣ್ಯರು ಮತ್ತು ಚಿತ್ರರಂಗದ ತಾರೆಯರು ಮೋಹನ್ ಲಾಲ್ ಅವರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.


Click it and Unblock the Notifications











