ಲಾಭ-ನಷ್ಟದ ಲೆಕ್ಕ ನೀಡಿದ ಮಲಯಾಳಂ ನಿರ್ಮಾಪಕರು, ₹1000 ಕೋಟಿಯಲ್ಲಿ ಮರಳಿ ಬಂದ ಹಣ ಎಷ್ಟು ಗೊತ್ತಾ ?
ವ್ಯಾಪಾರವಾಗುತ್ತದೋ ಇಲ್ಲವೋ ? ತಮ್ಮ ಚಿತ್ರ ಚಿತ್ರಮಂದಿರಕ್ಕೆ ಬಂದಮೇಲೆ ಏನಾಗುತ್ತದೋ ಗೊತ್ತಿರೋದಿಲ್ಲ. ಆದರೂ ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡುವ ಅನೇಕ ನಿರ್ಮಾಪಕರು ಭಾರತೀಯ ಚಿತ್ರರಂಗದಲ್ಲಿದ್ದಾರೆ. ಇಡೀ ಬದುಕನ್ನೇ ಪಣಕ್ಕಿಟ್ಟು ಚಿತ್ರ ನಿರ್ಮಾಣ ಮಾಡುವ ಇಂಥ ಒಬ್ಬೊಬ್ಬ ನಿರ್ಮಾಪಕರಿಂದ ನೂರಾರು ಜನ ಕಾರ್ಮಿಕರ ಮನೆಯಲ್ಲಿ ಅನ್ನ ಬೇಯುತ್ತದೆ, ದೀಪ ಉರಿಯುತ್ತದೆ. ದುಡ್ಡು ಕೈ ಸೇರುತ್ತದೆ ಅಂತಾ ಕನಸಿಟ್ಟುಕೊಂಡೇ ಬಹುತೇಕ ಕಮರ್ಷಿಯಲ್ ಸಿನಿಮಾದ ನಿರ್ಮಾಪಕರು ಹಣ ಸುರಿಯುವುದು, ನಿರ್ದೇಶಕರು ಕಸುಬು ಮಾಡುವುದು.
ಆದರೆ ಅದರಲ್ಲಿ ಗೆಲುವಿನ ಅಂಶ ತೀರಾ ಕಡಿಮೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಮಲಯಾಳಂ ಚಿತ್ರರಂಗ ಈ ವರ್ಷದ ಬ್ಯಾಲೆನ್ಸ್ ಶೀಟ್‌ನ ಹಂಚಿಕೊಂಡಿದೆ. ಮುಚ್ಚು ಮರೆಯಿಲ್ಲದೇ ಚಿತ್ರರಂಗಕ್ಕೆ 2024ರಲ್ಲಿ ಆದ ನಷ್ಟದ ಲೆಕ್ಕಾಚಾರವನ್ನು ಹಂಚಿಕೊಂಡಿದೆ.

ಹೌದು, ಮಲಯಾಳಂ ಚಿತ್ರರಂಗದ ಮೇಲೆ ಈ ವರ್ಷ ₹1000 ಕೋಟಿಯನ್ನು ಹೂಡಿಕೆ ಮಾಡಲಾಗಿದೆ. ಆದರೆ ಆ ಪೈಕಿ ಮರಳಿ ಬಂದಿದ್ದು ಕೇವಲ ₹300 ಕೋಟಿ ಮಾತ್ರ. ಬಾಕಿ ₹700 ಕೋಟಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಕೊಚ್ಚಿಕೊಂಡು ಹೋಗಿದೆ. ಹೀಗೆಂದು ಮಲಯಾಳಂ ಚಿತ್ರರಂಗದ ನಿರ್ಮಾಪಕರ ಸಂಘ ಹೇಳಿದೆ. ಈ ವರ್ಷ ಮಲಯಾಳಂ ಚಿತ್ರರಂಗದ ಪಾಲಿಗೆ ಅತ್ಯಂತ ಕರಾಳ ವರ್ಷವಾಗಿ ಪರಿಣಮಿಸಿದೆ ಎಂದು ಹೇಳಿದೆ.
ಇನ್ನು ಈ ವರ್ಷ ಮಲಯಾಳಂ ಚಿತ್ರರಂಗದಲ್ಲಿ 199 ಚಿತ್ರಗಳು ಬಿಡುಗಡೆಯಾಗಿದ್ದು ಆ ಪೈಕಿ 26 ಚಿತ್ರಗಳು ಮಾತ್ರ ಗೆದ್ದಿವೆ. ಮಿಕ್ಕಂತೆ ಉಳಿದ ಚಿತ್ರಗಳು ಬಂದಿದ್ದು ಹೋಗಿದ್ದು ಗೊತ್ತಾಗಲಿಲ್ಲ. ಇನ್ನು ಈ 26 ಚಿತ್ರಗಳಲ್ಲಿ ಮಂಜುಮ್ಮೆಲ್ ಬಾಯ್ಸ್, ಪ್ರೇಮಲು, ಆಡು ಜೀವಿತಂ, ಆವೇಶಂ ಮತ್ತು ಎಆರ್‌ಎಂ ಚಿತ್ರಗಳು ಭರ್ಜರಿ ಲಾಭವನ್ನು ಮಾಡಿವೆ. ಅದರಲ್ಲಿಯೂ ಮಂಜುಮ್ಮೆಲ್ ಬಾಯ್ಸ್ ಕೇವಲ ತಮಿಳುನಾಡುವೊಂದರಲ್ಲಿಯೇ ₹100 ಕೋಟಿಯನ್ನು ಗಳಿಸಿದೆ. ಕರ್ನಾಟಕದಲ್ಲಿ ₹10 ಕೋಟಿಯನ್ನು ಗಳಿಸಿರುವ ಈ ಚಿತ್ರದ ಒಟ್ಟಾರೆ ಗಳಿಕೆ ₹242 ಕೋಟಿ ಎಂದು ಮಲಯಾಳಂ ನಿರ್ಮಾಪಕರ ಸಂಘ ಹೇಳಿದೆ. ಗೋಲಂ, ಪಾನಿ, ಮತ್ತು ಮುರಾ ಚಿತ್ರಗಳು ಪ್ರೇಕ್ಷಕರ ಗಮನವನ್ನು ಸೆಳೆದವು ಆದರೂ ಹಣ ಮಾಡಲಿಲ್ಲ ಎಂದು ಹೇಳಿದೆ.
ಇನ್ನು ಎಲ್ಲೆಡೆ ಹಳೆಯ ಚಿತ್ರಗಳನ್ನು ಮರುಬಿಡುಗಡೆ ಮಾಡುವ ಕಾರ್ಯಕ್ರಮ ನಡೆಯುತ್ತಿದೆ. ಮಲಯಾಳಂ ಚಿತ್ರರಂಗದಲ್ಲಿ ಕೂಡ ಈ ವರ್ಷ ಈ ಕಾರ್ಯಕ್ರಮ ನಡೆದಿದೆ. ಐದು ಚಿತ್ರಗಳು ಮರು ಬಿಡುಗಡೆಗೊಂಡಿವೆ. ಆದರೆ ಹೀಗೆ ರೀ ರಿಲೀಸ್ ಆದ ಚಿತ್ರಗಳಲ್ಲಿ ಕೇವಲ ಎರಡು ಚಿತ್ರಗಳು ಮಾತ್ರ ಯಶಸ್ವಿಯಾಗಿವೆ. ಆ ಎರಡು ಚಿತ್ರಗಳು ಮೋಹನ್ ಲಾಲ್ ಅಭಿನಯದ ಚಿತ್ರಗಳು ಅನ್ನುವುದು ವಿಶೇಷ. ಆ ಪೈಕಿ ಮಣಿಚಿತ್ರತಾಳ್ ಒಂದಾದರೆ ದೇವದೂತನ್ ಮತ್ತೊಂದು.
ಹೀಗೆ ತಮ್ಮ ಚಿತ್ರರಂಗಕ್ಕೆ ಆದ ನಷ್ಟವನ್ನು ಮಲಯಾಳಂ ಚಿತ್ರರಂಗದ ನಿರ್ಮಾಪಕರು ಬಹಿರಂಗಗೊಳಿಸಿದ್ದಾರೆ. ₹100 ಕೋಟಿ ₹200 ಕೋಟಿ ಗಳಿಕೆಯನ್ನು ನಮ್ಮ ಚಿತ್ರ ಮಾಡಿದೆ ಎಂದು ಸುಮ್ಮ ಸುಮ್ನೆ ಹೇಳಿಕೊಂಡು ತಿರುಗಾಡುವ ಬೇರೆ ಚಿತ್ರರಂಗದ ನಿರ್ಮಾಪಕರ ನಡುವೆ ತಮ್ಮ ಚಿತ್ರರಂಗದ ವಾಸ್ತವಕ್ಕೆ ಮಲಯಾಳಂ ನಿರ್ಮಾಪಕರು ಕೈಗನ್ನಡಿ ಹಿಡಿದಿದ್ದಾರೆ. ಚಿತ್ರವನ್ನು ನಿರ್ಮಾಣ ಮಾಡುವುದು ಚಿತ್ರ ನೋಡಿದಷ್ಟೇ ಸಲೀಸು ಅಲ್ಲ, ನಿರ್ಮಾಪಕರ ಕಷ್ಟ-ನಷ್ಟ ಹಲವಾರು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗದವರಂತೆ ಕನ್ನಡ ಚಿತ್ರ ನಿರ್ಮಾಪಕರು ಪಾರದರ್ಶಕವಾಗಿ ಲಾಭ-ನಷ್ಟದ ಲೆಕ್ಕವನ್ನು ಹಂಚಿಕೊಳ್ಳುತ್ತಾರಾ..? ಈ ಮೂಲಕ ಯಾವ ಚಿತ್ರ ಎಷ್ಟು ಹಣ ಮಾಡಿದೆ ಎನ್ನುವುದನ್ನು ಅಭಿಮಾನಿಗಳಿಗೆ ಹೇಳುತ್ತಾರಾ ? ನೋ ವೇ ಚಾನ್ಸೇ ಇಲ್ಲ.


Click it and Unblock the Notifications











