ಚಿತ್ರೀಕರಣ ವೇಳೆ ಗಾಯಗೊಂಡ ನಟ ಟೋವಿನೋ ಥಾಮಸ್ ಆರೋಗ್ಯದಲ್ಲಿ ಸ್ಥಿರ: ICUನಲ್ಲಿ ಚಿಕಿತ್ಸೆ
ಚಿತ್ರೀಕರಣ ವೇಳೆ ನಡೆದ ಅವಘಡದಿಂದ ಆಸ್ಪತ್ರೆಗೆ ದಾಖಲಾಗಿರುವ ಮಲಯಾಳಂ ನಟ ಟೋವಿನೋ ಥಾಮಸ್ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ 48ಗಂಟೆ ಐಸಿಯುನಲ್ಲಿ ಇರಬೇಕು ಎಂದು ಹೇಳಿದ್ದಾರೆ. ಕೊಚ್ಚಿಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಟೋವಿನೋ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಟೋವಿನೋ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ ಟೋವಿನೋ ಇನ್ನು 48 ಗಂಟೆಗಳ ಕಾಲ ಐಸಿಯುನಲ್ಲಿ ಇರಬೇಕೆಂದು ತಿಳಿಸಿದ್ದಾರೆ. ಟೋವಿನೋ ಥಾಮಸ್ ಅವರಿಗೆ 'ಕಲಾ' ಸಿನಿಮಾದ ಚಿತ್ರೀಕರಣ ವೇಳೆ ಹೊಟ್ಟೆಗೆ ಬಲವಾದ ಏಟು ತಗುಲಿದೆ. ಬಳಿಕ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ನಟನನ್ನು ತಕ್ಷಣ ಆಸ್ಪತ್ರೆಗೆ ಕರೆತರಲಾಗಿದೆ.
ಆಂತರಿಕ ರಕ್ತಸ್ರಾವವಾಗುತ್ತಿದ್ದ ಕಾರಣ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಟೋವಿನೋ ಥಾಮಸ್ ಹೊಟ್ಟೆ ನೋವಿನ ಕಾರಣ ಅಕ್ಟೋಬರ್ 7, ಬೆಳಗ್ಗೆ 11.15ಕ್ಕೆ ತುರ್ತು ವಿಭಾಗಕ್ಕೆ ಕರೆತರಲಾಗಿದೆ. ಸಿಟಿ ಆಂಜಿಯೋಗ್ರಾಮ್ ನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಗೊತ್ತಾದ ಬಳಿಕ ಅವರನ್ನು 48 ಗಂಟೆಗಳ ಕಾಲ ಐಸಿಯುನಲ್ಲಿ ಇರಿಸಲಾಯಿತು ಎಂದು ತಿಳಿಸಿದ್ದಾರೆ.

ಕಳೆದ 24 ಗಂಟೆಯಲ್ಲಿ ಅವರ ಆರೋಗ್ಯ ಸ್ಥಿರವಾಗಿದೆ. ಮತ್ತೆ ರಕ್ತಸ್ರಾವವಾಗುವ ಲಕ್ಷಣಗಳಿಲ್ಲ. 48 ಗಂಟೆಗಳಲ್ಲಿ ಮತ್ತೊಂದು ಆಂಜಿಯೋಗ್ರಾಮ್ ಮಾಡಲಾಗುತ್ತೆ. ಅಲ್ಲಿಯರೆಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತೆ. ಸದ್ಯ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ." ಎಂದು ಹೆಲ್ತ್ ಬುಲೆಟಿನ್ ನಲ್ಲಿ ಬಹಿರಂಗಪಡಿಸಿದ್ದಾರೆ.
ಟೋವಿನೋ ಥಾಮಸ್, ರೋಹಿತ್ ನಿರ್ದೇಶನದ ಕಲಾ ಸಿನಿಮಾದ ಚಿತ್ರೀಕರಣದಲ್ಲಿ ಇದ್ದರು. ಇದೀಗ ಚಿತ್ರೀಕರಣ ನಿಲ್ಲಿಸಿದ್ದು, ಟೋವಿನೋ ಗುಣಮುಖರಾದ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಟೋವಿನೋ ಥಾಮಸ್ ಸದ್ಯ ಮಿನ್ನಲ್ ಮುರಳಿ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದರು. ಈ ಸಿನಿಮಾ ಮಲಯಾಳಂ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ವಿಶೇಷ ಅಂದರೆ ಈ ಸಿನಿಮಾ ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಈ ಸಿನಿಮಾ ಕನ್ನಡದಲ್ಲಿ 'ಮಿಂಚು ಮುರಳಿ' ಹೆಸರಿನಲ್ಲಿ ರಿಲೀಸ್ ಆಗುತ್ತಿದೆ. ಇತ್ತೀಚಿಗೆ ಸಿನಿಮಾದ ಫಸ್ಟ್ ಲುಕ್ ಸಹ ರಿಲೀಸ್ ಆಗಿದೆ.


Click it and Unblock the Notifications