Oscars 2024: ಆಸ್ಕರ್ ರೇಸ್‌ನಲ್ಲಿ ಮಲಯಾಳಂನ '2018': ಮತ್ತೊಂದು ಪ್ರಶಸ್ತಿ ಸಿಗುತ್ತಾ?
ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಗೀತೆಗೆ ಕಳೆದ ಬಾರಿ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು. ಎಂ. ಎಂ ಕೀರವಾಣಿ ಹಾಗೂ ಚಂದ್ರಬೋಸ್ ಟ್ರೋಫಿ ಎತ್ತಿ ಹಿಡಿದ ಮೇಲೆ ಈಗ ಸಾಕಷ್ಟು ಸಿನಿಮಾಗಳು ಆಸ್ಕರ್‌ಗಾಗಿ ಪೈಪೋಟಿ ನಡೆಸುತ್ತಿವೆ. ಕಂಟೆಂಟ್ ಇದ್ದರೆ ಯಾವುದೇ ದೇಶದ ಯಾವುದೇ ಭಾಷೆಯ ಚಿತ್ರಕ್ಕೆ ಪ್ರಶಸ್ತಿ ಸಿಗುತ್ತದೆ. ಹಾಗಾಗಿ ಹಲವರು ಈಗ ಆಸ್ಕರ್ ಮೇಲೆ ಕಣ್ಣಿಟ್ಟಿದ್ದಾರೆ.
ಟೊವಿನೋ ಥಾಮಸ್ ನಟನೆಯ ಮಲಯಾಳಂ ಸಿನಿಮಾ '2018' ಈ ವರ್ಷ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. 4 ವರ್ಷಗಳ ಹಿಂದೆ ಕೇರಳದಲ್ಲಿ ಅತಿವೃಷ್ಠಿ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಇದನ್ನೇ ಆಧರಿಸಿ ಜೂಡ್ ಆಂಥನಿ ಜೋಸೆಫ್ ಈ ಸಿನಿಮಾ ಕಟ್ಟಿಕೊಟ್ಟಿದ್ದರು. ಆಸ್ಕರ್‌ಗೆ ಭಾರತದ ಪರವಾಗಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಲಯಾಳಂನ '2018' ಸಿನಿಮಾ ಆಸ್ಕರ್ ರೇಸ್‌ಗೆ ಪ್ರವೇಶಿಸಿದೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಇತ್ತೀಚೆಗೆ ಇದನ್ನು ಘೋಷಿಸಿದೆ. ಈ ವಿಷಯವನ್ನು ಆಸ್ಕರ್ ಆಯ್ಕೆ ಸಮಿತಿ ಅಧ್ಯಕ್ಷ ಗಿರೀಶ್ ಕಾಸರವಳ್ಳಿ ಇಂದು ಬಹಿರಂಗಪಡಿಸಿದ್ದಾರೆ.

16 ಸದಸ್ಯರನ್ನೊಳಗೊಂಡ ಸಮಿತಿಯು ಚಿತ್ರರಂಗದ ಹಲವು ಚಿತ್ರಗಳನ್ನು ಪರಿಶೀಲಿಸಿ ಈ '2018: ಎವರಿ ಒನ್ ಇಸ್ ಎ ಹೀರೊ' ಚಿತ್ರವನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಆಸ್ಕರ್ ನಾಮಿನೇಷನ್ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ 'ದಿ ಕೇರಳ ಸ್ಟೋರಿ', 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ', 'ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ', 'ಬಲಗಮ್ ', 'ವಾಲ್ವಿ, 'ಬಾಪ್ಲಿಯೋಕ್' ಮತ್ತು 'ಆಗಸ್ಟ್ 16' ಸೇರಿದಂತೆ 22ಕ್ಕೂ ಹೆಚ್ಚು ಸಿನಿಮಾಗಳನ್ನು ಪರಿಶೀಲಿಸಲಾಗಿತ್ತು.
ಇನ್ನು ಆಸ್ಕರ್ ನಾಮಿನೇಷನ್ ಲಿಸ್ಟ್‌ಗೆ '2018' ಸಿನಿಮಾ ಆಯ್ಕೆಯಾದರೆ ಮಾತ್ರ ಇದು ಮುಂದಿನ ಆಸ್ಕರ್ ಸುತ್ತಿಗೆ ಪ್ರವೇಶಿಸಲಿದೆ. ಭಾರತದ ವಿವಿಧ ಸಿನಿಮಾಗಳನ್ನು ಆಸ್ಕರ್ ಪ್ರವೇಶಕ್ಕಾಗಿ ಎಫ್‌ಎಫ್‌ಐಯು ಆ. 15ರಿಂದ ಸೆ. 10ರವರೆಗೆ ಅರ್ಜಿ ಆಹ್ವಾನಿಸಿತ್ತು. ನೂರಾರು ಸಿನಿಮಾಗಳಲ್ಲಿ ಅಂತಿಮವಾಗಿ '2018: ಎವರಿ ಒನ್ ಇಸ್ ಎ ಹೀರೊ' ಚಿತ್ರವನ್ನು ಆಸ್ಕರ್ ಪ್ರವೇಶಕ್ಕಾಗಿ ಆಯ್ಕೆ ಮಾಡಲಾಗಿದೆ. ಈ ಚಿತ್ರವು ನೈಜ ಭಾರತವನ್ನು ಪ್ರತಿನಿಧಿಸುತ್ತದೆ" ಎಂದು ಎಫ್‌ಎಫ್‌ಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚೆಗೆ '2018: ಎವರಿ ಒನ್ ಇಸ್ ಎ ಹೀರೊ' ಚಿತ್ರದ ನಟನೆಗಾಗಿ ನಟ ಟೊವಿನೋ ಥಾಮಸ್ ಏಷ್ಯಾದ ಅತ್ಯುತ್ತಮ ನಟ ಸೆಪ್ಟಿಮಿಸ್ ಪ್ರಶಸ್ತಿ ಸ್ವೀಕರಿಸಿದ್ದರು. ಆ ಸಂತಸದ ಬೆನ್ನಲ್ಲೇ '2018' ಸಿನಿಮಾ ಅಧಿಕೃತವಾಗಿ ಆಸ್ಕರ್‌ಗೆ ನಾಮಿನೇಟ್ ಆಗಿದೆ. ನಟ ಟೊವಿನೋ ಥಾಮಸ್ ಸೆಪ್ಟಿಮಿಸ್ ಪ್ರಶಸ್ತಿ ಹಿಡಿದುಕೊಂಡಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಆಸಿಫ್ ಅಲಿ, ಸುದೀಶ್, ಕುಂಚಕೋ ಬೊಬನ್, ಲಾಲ್, ನರೇನ್, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ತನ್ವಿ ಸೇರಿದಂತೆ ದೊಡ್ಡ ತಾರಾಗಣ '2018' ಚಿತ್ರದಲ್ಲಿದೆ. ವೇಣು ಕುನ್ನಪ್ಪಿಳ್ಳಿ, ಸಿ.ಕೆ ಪದ್ಮ ಕುಮಾರ್, ಆಂಟೊ ಜೋಸೆಫ್ ಚಿತ್ರವನ್ನು ನಿರ್ಮಾಣ ಮಾಡಿದ್ದು ನೋಬಿನ್ ಪಾಲ್,
ವಿಲಿಯಂ ಫ್ರಾನ್ಸಿಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಖಿಲ್ ಜಾರ್ಜ್ ಛಾಯಾಗ್ರಹಣ ಚಿತ್ರದ ಮತ್ತೊಂದು ಹೈಲೆಟ್ ಆಗಿತ್ತು.
ಮಲಯಾಳಂನಲ್ಲಿ ಬಹಳ ಬೇಗ 200 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ '2018' ಪಾತ್ರವಾಗಿತ್ತು. ಸಣ್ಣ ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದಿತ್ತು. ಸೋನಿ ಲಿವ್ ಡಿಜಿಟಲ್ ಫ್ಲಾಟ್‌ಪಾರ್ಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈಗಾಗಲೇ ಸಿನಿಮಾ ಹಲವು ಪ್ರಶಸ್ತಿ ಬಾಚಿಕೊಂಡಿದ್ದು ಆಸ್ಕರ್ ಕೂಡ ಸಿಗುತ್ತಾ ಕಾದು ನೋಡಬೇಕು.


Click it and Unblock the Notifications










