ಅಪಘಾತದಲ್ಲಿ ಮೃತಪಟ್ಟಿದ್ದ 'ಚಿರಂಜೀವಿ ಸುಧಾಕರ್' ಸಿನಿಮಾ ನಟಿ; ಮಗಳ ನೆನೆದು ತಾಯಿ ಭಾವುಕ
ಪರಭಾಷಾ ನಟಿಯರು ಕನ್ನಡ ಸಿನಿಮಾಗಳಲ್ಲಿ ನಟಿಸೋದು ಹೊಸದೇನು ಅಲ್ಲ. ಕೇರಳದ ಸಾಕಷ್ಟು ನಟಿಯರು ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 80 ಹಾಗೂ 90ರ ದಶಕದಲ್ಲಿ ಮಲಯಾಳಂ ನಟಿ ಮೋನಿಷಾ ಉನ್ನಿ ದಕ್ಷಿಣದ ಸಿನಿಮಾಗಳಲ್ಲಿ ಗಮನ ಸೆಳೆದಿದ್ದರು. ತಮ್ಮ 16ನೇ ವಯಸ್ಸಿನಲ್ಲೇ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಕೇರಳದ ಕೋಳಿಕ್ಕೋಡ್ ಜಿಲ್ಲೆಯ ಪನ್ನಿಯಂಕರ ಎಂಬಲ್ಲಿ ಹುಟ್ಟಿದ ಮೋನಿಷಾ ಉನ್ನಿ ನಟಿಸಿದ ಮೊದಲ ಚಿತ್ರದಲ್ಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಮಲಯಾಳಂ ಮಾತ್ರವಲ್ಲದೇ ತಮಿಳು ಕೂಡ ಚಿತ್ರಗಳಲ್ಲಿ ನಟಿಸಿದ್ದ ಮೋನಿಷಾ, ಕನ್ನಡದ 'ಚಿರಂಜೀವಿ ಸುಧಾಕರ್' ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿದ್ದರು. ಇದು ರಾಘಣ್ಣ ಹೀರೊ ಆಗಿ ನಟಿಸಿದ ಮೊದಲ ಸಿನಿಮಾ. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಚಿತ್ರವನ್ನು ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ಸಂಧ್ಯಾ ಹಾಗೂ ಸರಳ ಆಗಿ ದ್ವಿಪಾತ್ರದಲ್ಲಿ ಮೋನಿಷಾ ಮಿಂಚಿದ್ದರು.

ಕೇರಳ ಸಾರಿಗೆ ಬಸ್ ಹಾಗೂ ಅಂಬಾಸಿಡರ್ ಕಾರು ನಡುವಿನ ಅಪಘಾತದಲ್ಲಿ ನಟಿ ಮೋನಿಷಾ ಉನ್ನಿ ನಿಧನರಾಗಿದ್ದರು. ಕೇವಲ 21 ವರ್ಷಕ್ಕೆ ಆಕೆ ಇಹಲೋಕ ತ್ಯಜಿಸಿದ್ದರು. ಇವತ್ತಿಗೂ ಮಗಳ ನೆನಪಿನಲ್ಲೇ ತಾಯಿ ಶ್ರೀದೇವಿ ಉನ್ನಿ ಕಾಲ ಕಳೆಯುತ್ತಿದ್ದಾರೆ. ಶ್ರೀದೇವಿ ಕೂಡ ಕೆಲ ಮಲಯಾಳಂ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಗಳ ಬಗ್ಗೆ ಶ್ರೀದೇವಿ 'ಎನ್ನ ಮಗಳ್ ಮೋನಿಷಾ' ಎಂಬ ಪುಸ್ತಕವನ್ನು ಬರೆದಿದ್ದಾರೆ. ಇತ್ತೀಚಿಗೆ ಅದು ಪ್ರಕಟವಾಗಿದೆ. ಮಗಳ ಸ್ಮರಣಾರ್ಥ ಬರೆದ ಈ ಪುಸ್ತಕದಲ್ಲಿ ಮೋನಿಷಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಶ್ರೀದೇವಿ ಮೆಲುಕು ಹಾಕಿದ್ದಾರೆ.
ನನ್ನ ಸಂಪೂರ್ಣವಾಗಿ ಮಗಳಿಗಾಗಿ ಮೀಸಲಿಟ್ಟಿದ್ದೆ. ಸದಾ ಆಕೆಯ ಜೊತೆ ಇರುತ್ತಿದ್ದೆ. ಆಕೆಯ ಸಿನಿಮಾಗಳಿಗೆ ನಾನೇ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದೆ. ಮಗಳ ಅಗಲಿಕೆಯ ಆಘಾತದಿಂದ ಹೊರ ಬರಲು ಬಹಳ ದಿನಗಳ ಬೇಕಾಯಿತು ಎಂದು ಶ್ರೀದೇವಿ ಭಾವುಕರಾಗಿದ್ದಾರೆ. ಮೋನಿಷಾ ಬಳಸುತ್ತಿದ್ದ ಕನ್ನಡಕ, ಬಳೆಗಳನ್ನು ಶ್ರೀದೇವಿ ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಮಗಳ ನೆಚ್ಚಿನ ಸಲ್ವಾರ್ ಬಿಟ್ಟು ಉಳಿದ ಬಟ್ಟೆಯನ್ನು ಅನಾಥಶ್ರಮಕ್ಕೆ ಕೊಟ್ಟುಬಿಟ್ಟರಂತೆ.

'ಚಿರಂಜೀವಿ ಸುಧಾಕರ್' ಬಿಟ್ಟು ಬೇರೆ ಯಾವುದೇ ಕನ್ನಡ ಚಿತ್ರದಲ್ಲಿ ಮೋನಿಷಾ ಉನ್ನಿ ನಟಿಸಲಿಲ್ಲ. ತಮಿಳಿನ 'ಮೂಂದ್ರವಧು ಕಣ್' ಆಕೆ ನಟಿಸಿದ ಕೊನೆಯ ಸಿನಿಮಾ. 'ಚೆಪ್ಪದಿವಿದ್ಯ' ಎಂಬ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾಗಲೇ ಅಪಘಾತದಲ್ಲಿ ಮೋನಿಷಾ ಕೊನೆಯುಸಿರೆಳೆದಿದ್ದರು. ಕೇರಳದ ಅಲಪ್ಪುಳ ಜಿಲ್ಲೆಯ ಚೆರ್ತಲಾ ಬಳಿಯ ಎಕ್ಸ್-ರೇ ಬೈಪಾಸ್ ಜಂಕ್ಷನ್‌ನಲ್ಲಿ ಡಿಸೆಂಬರ್ 5, 1992 ರಂದು, ಮೋನಿಷಾ ಹಾಗೂ ತಾಯಿ ಶ್ರೀದೇವಿ ಉನ್ನಿ ಪ್ರಯಾಣಿಸುತ್ತಿದ್ದ ಕಾರು ಕೇರಳ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿತ್ತು.
ಅಪಘಾತದ ವೇಳೆ ಕಾರಿನ ಹಿಂಬದಿ ಸೀಟ್‌ನಲ್ಲಿ ಮೋನಿಷಾ ಉನ್ನಿ ಮಲಗಿದ್ದರು. ಬೆನ್ನು ಮೂಳೆಗೆ ಗಂಭೀರವಾಗಿ ಪೆಟ್ಟಾಗಿ ಆಕೆ ಮೃತಪಟ್ಟಿದ್ದಾಗಿ ವರದಿಯಾಗಿತ್ತು. ಇನ್ನು ತಾಯಿ ಶ್ರೀದೇವಿ ಪವಾಡ ಎನ್ನುವಂತೆ ಪ್ರಾಣಾಪಾಯದಿಂದ ಪಾರಾಗಿದ್ದರು. ಅಪಘಾತದ ರಭಸಕ್ಕೆ ಕಾರಿನಿಂದ ಹಾರಿ ಹೊರಗೆ ಬಿದ್ದಿದ್ದರು. ಕಾರಿನ ಚಾಲಕ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪೋಸ್ಟ್ ಮಾರ್ಟಂ ಬಳಿಕ ಬೆಂಗಳೂರಿನಲ್ಲಿದ್ದ ನಿವಾಸಕ್ಕೆ ಮೋನಿಷಾ ಪಾರ್ಥೀವ ಶರೀರವನ್ನು ತರಲಾಗಿತ್ತು. ಬಳಿಕ ಇಲ್ಲೇ ಅಂತ್ಯಕ್ರಿಯೆ ನಡೆಸಲಾಗಿತ್ತು.
'ಋತುಭೇದಂ', 'ಸಾಯಂ ಸಂಧ್ಯಾ', 'ಪೂಕ್ಕಲ್ ವಿದುಂ ತುಧು', 'ದ್ರಾವಿಡನ್', 'ಅಧಿಪನ್', 'ಪೆರುಂಥಾಚನ್', 'ಒರು ಕೊಚು ಭೂಮಿಕುಲುಕ್ಕಂ', 'ಚಂಪಾಕುಲಂ ಥಚ್ಚನ್' ಮೋನಿಷಾ ಉನ್ನಿ ನಟಿಸಿದ ಕೆಲ ಪ್ರಮುಖ ಚಿತ್ರಗಳು. 'ಅಧಿಪನ್' ಹಾಗೂ 'ಕಮಲದಲಂ' ಎಂಬ ಚಿತ್ರಗಳಲ್ಲಿ ಮೋಹನ್ ಲಾಲ್ ಜೊತೆ ತೆರೆ ಹಂಚಿಕೊಂಡಿದ್ದರು.


Click it and Unblock the Notifications