ಕೇರಳದಲ್ಲಿ ಆರ್‌ಆರ್‌ಆರ್, 2.0 ಹಿಂದಿಕ್ಕಿದ ವಿಜಯ್ 'ಲಿಯೋ'; ಇಷ್ಟು ಮೊತ್ತಕ್ಕೆ ಸೇಲ್ ಆಗಿ ಲಾಭ ತರುತ್ತಾ?
ತಮಿಳು ನಟ ದಳಪತಿ ವಿಜಯ್ ಬೀಸ್ಟ್ ಚಿತ್ರದ ಸೋಲಿನ ಬಳಿಕ ಈ ವರ್ಷ ವಾರಿಸು ಮೂಲಕ ಮತ್ತೊಮ್ಮೆ ಸಿನಿ ರಸಿಕರ ಎದುರು ಬಂದಿದ್ದರು. ಆದರೆ ಈ ಚಿತ್ರ ನಿರೀಕ್ಷಿಸಿದ ಯಶಸ್ಸನ್ನು ಸಾಧಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಚಿತ್ರ ಕಲೆಕ್ಷನ್ ಮಾಡಿದರೂ ಸಹ ಎಲ್ಲಾ ವರ್ಗದ ಪ್ರೇಕ್ಷಕರನ್ನು ಮೆಚ್ಚುಸುವಲ್ಲಿ ವಿಫಲವಾಗಿತ್ತು. ಮಿಶ್ರ ಪ್ರತಿಕ್ರಿಯೆ ಚಿತ್ರಕ್ಕೆ ವ್ಯಕ್ತವಾಗಿತ್ತು.
ಹೀಗೆ ತನ್ನ ಸ್ಟಾರ್‌ಡಂಗೆ ತಕ್ಕನಾದ ಗೆಲುವಿಗಾಗಿ ಕಾಯುತ್ತಿರುವ ವಿಜಯ್ ಇದೀಗ ಮಾಸ್ಟರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಜತೆ ಮತ್ತೊಮ್ಮೆ ಕೈಜೋಡಿಸಿದ್ದಾರೆ. ಹೌದು, ಕಳೆದ ವರ್ಷ ಇಂಡಸ್ಟ್ರಿ ಹಿಟ್ ಸಿನಿಮಾ ವಿಕ್ರಮ್ ಅನ್ನು ನಿರ್ದೇಶಿಸಿದ್ದ ಲೋಕೇಶ್ ಕನಕರಾಜ್ ತಮ್ಮ ಮುಂದಿನ ಪ್ರಾಜೆಕ್ಟ್ ಆದ ಲಿಯೋವನ್ನು ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ವಿಜಯ್ ನಾಯಕನಾಗಿ ನಟಿಸುತ್ತಿದ್ದಾರೆ.

ಇನ್ನು ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರವನ್ನು ಅಕ್ಟೋಬರ್ 19ಕ್ಕೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಈ ಹಿಂದೆ ಮಾಸ್ಟರ್ ರೀತಿಯ ಸಾಧಾರಣ ಕಥೆಯನ್ನೊಳಗೊಂಡ ಚಿತ್ರದ ಮೂಲಕವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ವಿಜಯ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಶನ್ ಈ ಬಾರಿ 200 ಕೋಟಿ ಬಜೆಟ್‌ನೊಂದಿಗೆ ಬರುತ್ತಿದ್ದು, ಬಾಕ್ಸ್ ಆಫೀಸ್ ಧೂಳ್ ಎಬ್ಬಿಸುವ ನಿರೀಕ್ಷೆ ಇದೆ.
ಕೇವಲ ವಿಜಯ್ ಸ್ಟಾರ್‌ಡಂ ಮಾತ್ರವಲ್ಲದೇ ಲೋಕೇಶ್ ಕನಕರಾಜ್ ಹೆಸರೂ ಸಹ ಚಿತ್ರ ದೊಡ್ಡ ಬ್ಯುಸಿನೆಸ್ ಮಾಡಲು ಸಹಕಾರಿಯಾಗಲಿದೆ. ಸದ್ಯ ಈ ಚಿತ್ರದ ಕೇರಳ ಥಿಯೇಟ್ರಿಕಲ್ ಹಕ್ಕು ಮಾರಾಟವಾಗಿದ್ದು, ಇದು ನೂತನ ದಾಖಲೆ ನಿರ್ಮಾಣವಾಗಲು ಕಾರಣವಾಗಿದೆ.
ಅಂದಹಾಗೆ ಬರೋಬ್ಬರಿ 16 ಕೋಟಿ ರೂಪಾಯಿಗಳಿಗೆ ಲಿಯೋ ಕೇರಳ ಥಿಯೇಟ್ರಿಕಲ್ ಹಕ್ಕು ಮಾರಾಟವಾಗಿದೆ. ಕೇರಳದಲ್ಲಿ ಅತಿಹೆಚ್ಚು ಮೊತ್ತಕ್ಕೆ ಸೇಲ್ ಆದ ಪರಭಾಷಾ ಚಿತ್ರ ಇದಾಗಿದೆ. ಹಾಗಿದ್ದರೆ ಇಲ್ಲಿಯವರೆಗೆ ಯಾವ ಚಿತ್ರಗಳು ಕೇರಳದಲ್ಲಿ ಅತಿಹೆಚ್ಚು ಮೊತ್ತಕ್ಕೆ ಸೇಲ್ ಆಗಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
* ಲಿಯೋ - 16 ಕೋಟಿ
* ರೋಬೊ 2.0 - 14 ಕೋಟಿ
* ಆರ್ ಆರ್ ಆರ್ - 10 ಕೋಟಿ
* ಪೊನ್ನಿಯಿನ್ ಸೆಲ್ವನ್ 2 - 9 ಕೋಟಿ
* ವಿಕ್ರಮ್ - 7 ಕೋಟಿ
ಹೀಗೆ ಬೃಹತ್ ಮೊತ್ತಕ್ಕೆ ಸೇಲ್ ಆಗಿ ದಾಖಲೆ ಬರೆದಿದ್ದರೂ ಸಹ ಲಿಯೋ ಬ್ಯುಸಿನೆಸ್ ಮೇಲೆ ಅನುಮಾನ ಹುಟ್ಟಿಕೊಂಡಿವೆ. ಕಾರಣ ದೊಡ್ಡ ಮೊತ್ತಕ್ಕೆ ಸೇಲ್ ಆದ ಚಿತ್ರಗಳು ಕೇರಳ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ. ಏಕೆಂದರೆ 14 ಕೋಟಿಗೆ ಮಾರಾಟವಾಗಿದ್ದ ರೋಬೋ 2.0 ಹೀನಾಯವಾಗಿ ಸೋಲುಂಡಿತ್ತು ಹಾಗೂ 10 ಕೋಟಿಗೆ ಸೇಲ್ ಆದ ಆರ್ ಆರ್ ಆರ್ ಸಹ ತುಸು ನಷ್ಟವನ್ನು ಅನುಭವಿಸಿತ್ತು. ಇನ್ನುಳಿದಂತೆ 9 ಕೋಟಿಗೆ ಸೇಲ್ ಆಗಿದ್ದ ಪೊನ್ನಿಯಿನ್ ಸೆಲ್ವನ್ 2 ಫ್ಲಾಪ್ ಆಗಿತ್ತು.
ಹೀಗಾಗಿ ಲಿಯೊ ಕಲೆಕ್ಷನ್ ಮೇಲೆ ಅನುಮಾನಗಳು ಉಂಟಾಗಿದೆ. ಆದರೆ ಇದೇ ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಲಾಭ ತಂದುಕೊಟ್ಟಿತ್ತು ಎಂಬುದು ಸಮಾಧಾನ ಮೂಡಿಸಿದೆ. ಹೌದು, 7 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದ್ದ ವಿಕ್ರಮ್ ಕೇರಳದಲ್ಲಿ 7 ಕೋಟಿ ಲಾಭವನ್ನು ಕಂಡಿತ್ತು.


Click it and Unblock the Notifications











