ನಶೆಯಲ್ಲಿದ್ದ ಆ ಸ್ಟಾರ್ ಎಲ್ಲರ ಎದುರು ನನ್ನ ಬಟ್ಟೆಯನ್ನು ; ಶಾಕಿಂಗ್ ಹೇಳಿಕೆ ನೀಡಿದ ರಾಜ್ಯ ಪ್ರಶಸ್ತಿ ಪಡೆದ ನಟಿ..!
ಮಾದಕ ವ್ಯಸನ ಕೇವಲ ವ್ಯಕ್ತಿಯನ್ನಷ್ಟೇ ಅಲ್ಲ ಇಡೀ ಸಮಾಜವನ್ನೇ ಹಾಳು ಮಾಡುತ್ತೆ. ಬದಲಾದ ಈ ಕಾಲದಲ್ಲಿ ಶೇಕಡಾ 70 ರಷ್ಟು ಜನ ಯುವ ಜನಾಂಗ ಮಾದಕ ವ್ಯಸನಕ್ಕೆ ದಾಸರಾಗಿದ್ದಾರೆ.ಮಾದಕ ಮಾಯಾಜಾಲದಲ್ಲಿ ಸಿಲುಕಿ ಮಾನಸಿಕವಾಗಿ ದೈಹಿಕವಾಗಿ ನೊಂದು ಬೆಂದು ಹೋಗುವುದಲ್ಲದೇ ಅನೇಕರು ತಮ್ಮ ಬದುಕಿಗೆ ತಾವೇ ತಮ್ಮ ಕೈಯಾರೆ ಕೊಳ್ಳಿ ಇಡುತ್ತಿದ್ದಾರೆ. ಮನೆಯವರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ.
ಕೇವಲ ಜನಸಾಮಾನ್ಯರು ಮಾತ್ರವಲ್ಲ ಚಿತ್ರರಂಗದಲ್ಲಿ ಬದುಕು ರೂಪಿಸಿಕೊಂಡ ಅನೇಕರು ಈ ಡ್ರಗ್ಸ್ ಸುಳಿಯಲ್ಲಿ ಸಿಲುಕಿದ್ದಾರೆ. ಇದಕ್ಕೆ ಮಲಯಾಳಂ ಚಿತ್ರರಂಗದ ಖ್ಯಾತ ನಟಿ ವಿನ್ಸಿ ಅಲೋಶಿಯಸ್ ಗೆ ಆದ ಅನುಭವ ಮತ್ತು ಅವರಾಡಿದ ಮಾತುಗಳೇ ಸಾಕ್ಷಿ.

ಹೌದು, ವಿನ್ಸಿ ಅಲೋಶಿಯಸ್.. ಕೇರಳದ ಅತ್ಯುತ್ತಮ ನಾಯಕಿ. 'ರೇಖಾ' ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನು ಪಡೆದವರು ಇವರು. ಜನ ಗಣ ಮನ, ಸೌದಿ ವೆಲ್ಲಕ್ಕ, ಪದ್ಮಿನಿ, ಪಝಂಜನ್ ಪ್ರಾಣಯಂ, 1744 ವೈಟ್ ಆಲ್ಟೋ, ಹೀಗೆ ಕಳೆದೊಂದು ಆರು ವರ್ಷಗಳಲ್ಲಿ ಒಂದು ಡಜನ್ ಚಿತ್ರಗಳನ್ನು ಮಾಡಿರುವ ವಿನ್ಸಿ ಎರಡು ವೆಬ್ ಸರಣಿಗಳಲ್ಲಿ ಕೂಡ ಅಭಿನಯಿಸಿದ್ದಾರೆ.
ಇಂಥಾ ವಿನ್ಸಿ ಅಲೋಶಿಯಸ್ ಮೊನ್ನೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಯಾರಾದರೂ ಡ್ರಗ್ಸ್ ಸೇವಿಸಿದ್ದರೆ ನಾನು ಅವರ ಜೊತೆ ನಟಿಸುವುದಿಲ್ಲ ಎಂದು ಹೇಳಿದ್ದರು. ವಿನ್ಸಿ ಅಲೋಶಿಯಸ್ ಅವರಾಡಿದ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿತ್ತು. ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಸೇವಿಸುವ ಸ್ಟಾರ್ ಯಾರಿರಬಹುದು ಎಂದು ಹುಡುಕಾಡಲು ಶುರು ಮಾಡಿದ ಒಂದು ವರ್ಗ ವಿನ್ಸಿ ಅವರನ್ನು ಕೂಡ ಟ್ರೋಲ್ ಮಾಡಲು ಶುರು ಮಾಡಿತ್ತು.
ಈ ಹಿನ್ನೆಲೆ ತಮ್ಮ ಹೇಳಿಕೆಯ ಕುರಿತು ಸದ್ಯ ಸ್ಪಷ್ಟೀಕರಣವನ್ನು ನೀಡಿರುವ ವಿನ್ಸಿ ಅಲೋಶಿಯಸ್ ನಾನು ಸುಖಾ ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ವಿನ್ಸಿ ಅಲೋಶಿಯಸ್ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು ಆಗ ನನ್ನ ಬಟ್ಟೆಯಲ್ಲಿ ಸಮಸ್ಯೆ ಕಾಣಿಸಿತು, ನನ್ನ ಉಡುಪು ನನಗೆ ಕಿರಿಕಿರಿಯನ್ನು ನೀಡುತ್ತಿತ್ತು ಹೀಗಾಗಿ ನಾನು ಸರಿ ಪಡಿಸಿಕೊಳ್ಳಲು ಮುಂದಾದಾಗ ಡ್ರಗ್ಸ್ ಅಮಲಿನಲ್ಲಿದ್ದ ಆ ಚಿತ್ರದ ನಾಯಕ ನಟ ನನ್ನ ಬಳಿ ಬಂದು ನಾನು ಬಟ್ಟೆಯನ್ನು ಸರಿ ಮಾಡಲಾ ಎಂದು ಹೇಳಿದ, ಅನುಚಿತವಾಗಿ ನನ್ನ ಜೊತೆ ವರ್ತಿಸಿದ ಎಂದು ಹೇಳಿದ್ದಾರೆ.
ಅಲ್ಲಿ ಹಲವಾರು ಜನರಿದ್ದರು, ಅವರೆಲ್ಲರ ಮುಂದೆ ಆ ನಟ ಈ ಮಾತು ಹೇಳಿದ್ದ ಇದರಿಂದ ನನಗೆ ಮುಜುಗರವಾಯ್ತು ಆ ವ್ಯಕ್ತಿಯ ಜೊತೆ ಚಿತ್ರದಲ್ಲಿ ಅಭಿನಯಿಸಲು ತುಂಬಾ ಕಷ್ಟವಾಯ್ತು ಎಂದು ಹೇಳಿದ್ದಾರೆ. ಇನ್ನು ಇದೇ ಚಿತ್ರದ ಸಂದರ್ಭದಲ್ಲಿ ಅದೊಂದು ದಿನ ಒಂದು ದೃಶ್ಯಕ್ಕೆ ನಾವು ರಿಹರ್ಸಲ್ ಮಾಡುತ್ತಿದ್ದೆವು ಆಗ ಆ ನಟನ ಬಾಯಿಂದ ಮೇಜಿನ ಮೇಲೆ ಬಿಳಿ ಬಣ್ಣದ ಪದಾರ್ಥ ಕೆಳಗೆ ಚೆಲ್ಲಿತು ಎಂದಿರುವ ವಿನ್ಸಿ ಅಲೋಶಿಯಸ್ ನನಗೆ ಆಗ ಈ ನಟ ಡ್ರಗ್ಸ್ ಸೇವನೆ ಮಾಡುತ್ತಾನೆ ಎನ್ನುವುದು ಸ್ಪಷ್ಟವಾಯಿತು ಎಂದು ಹೇಳಿದ್ದಾರೆ.
ಮುಂದುವರೆದು ಡ್ರಗ್ಸ್ ತೆಗೆದುಕೊಳ್ಳುವುದು ಬಿಡುವುದು ಅವರ ಅವರ ವ್ಯೆಯಕ್ತಿಕ ವಿಚಾರ ಆದರೆ ಕೆಲಸದ ಸ್ಥಳದಲ್ಲಿ ಡ್ರಗ್ಸ್ ಸೇವಿಸುವುದು ತಪ್ಪು ಎಂದಿರುವ ವಿನ್ಸಿ ಅಲೋಶಿಯಸ್ ಈ ತರಹದ ಘಟನೆಗಳು ನಡೆದಾಗ ಕೆಲಸ ಮಾಡುವ ಸ್ಥಳದಲ್ಲಿನ ಸುರಕ್ಷತೆಯ ಪ್ರಶ್ನೆಯನ್ನು ಕೂಡ ಹುಟ್ಟು ಹಾಕುತ್ತಾವೆ ಎಂದು ಹೇಳಿದ್ದಾರೆ. ಅವತ್ತೇ ನಾನು ಡ್ರಗ್ಸ್ ಸೇವನೆಯನ್ನು ಮಾಡುವ ನಟರ ಜೊತೆ ಅಭಿನಯಿಸದಿರಲು ತೀರ್ಮಾನ ಮಾಡಿದೆ ಎಂದು ಕೂಡ ಹೇಳಿದ್ದಾರೆ.
ನನ್ನ ಈ ಹೇಳಿಕೆಯಿಂದ ನನ್ನ ಈ ನಿರ್ಧಾರದಿಂದ ನನಗೆ ಚಿತ್ರರಂಗದಲ್ಲಿ ಅವಕಾಶಗಳು ಸಿಗದಿರಬಹುದು ಆದರೆ ನಾನು ನನ್ನ ನಿರ್ಧಾರಕ್ಕೆ ಬದ್ದಳಾಗಿದ್ದೇನೆ ಎಂದಿರುವ ವಿನ್ಸಿ ಅಲೋಶಿಯಸ್ ಈ ವಿಚಾರವನ್ನು ಎಲ್ಲರಿಗೆ ಹೇಳಬೇಕಿತ್ತು, ಮೊನ್ನೆ ನಾನು ಹೇಳಿದ್ದ ಮಾತುಗಳಿಗೆ ಸ್ಪಷ್ಟೀಕರಣ ನೀಡಬೇಕಿತ್ತು ಹೀಗಾಗಿ ವಿಡಿಯೋ ಮೂಲಕ ಈ ವಿಚಾರ ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಕಳೆದ ವರ್ಷ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಹೇಮಾ ಕಮಿಟಿ ಮಲಯಾಳಂ ಚಿತ್ರರಂಗದ ಮುಖವಾಡ ಕಳಚಿದ ಬೆನ್ನಲ್ಲಿಯೇ, ಡ್ರಗ್ಸ್ ಪ್ರಕರಣದಲ್ಲಿ ಮಲಯಾಳಂನ ಕೆಲವು ನಟರು ಸಿಲುಕಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ್ದ ಪೊಲೀಸರು ಡ್ರಗ್ ಡೀಲರ್ ಓಂ ಪ್ರಕಾಶ್ ಅವರನ್ನು ಹೊಟೇಲ್‌ವೊಂದರಲ್ಲಿ ಬಂಧಿಸಿದ್ದರು. ಹೊಟೇಲ್‌ನಲ್ಲಿ ಡ್ರಗ್ಸ್ ಕೂಡ ವಶಪಡಿಸಿಕೊಂಡಿದ್ದರು. ಆಗ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಹೋಟೆಲ್‌ಗೆ ಹಲವು ನಟ ಮತ್ತು ನಟಿಯರು ಬಂದು ಹೋಗಿರುವುದು ಪತ್ತೆಯಾಗಿತ್ತು.
ಮಾಲಿವುಡ್‌ನ ಜನಪ್ರಿಯ ನಟರಾದ ಶ್ರೀನಾಥ್ ಬಾಸಿ, ಪ್ರಯಾಗಾ ಮಾರ್ಟಿನ್ ಅವರು ಡ್ರಗ್ ಡೀಲರ್ ಓಂ ಪ್ರಕಾಶ್ ಉಳಿದುಕೊಂಡಿದ್ದ ಹೋಟೆಲ್‌ಗೆ ಭೇಟಿ ನೀಡಿದ್ದ ವಿಚಾರ ಈ ವೇಳೆ ಬೆಳಕಿಗೆ ಬಂದಿತ್ತು. ಆ ನಂತರ ಶ್ರೀನಾಥ್ ಬಾಸಿ ಮತ್ತು ಪ್ರಯಾಗ್ ಮಾರ್ಟಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಇವರು ಇಬ್ಬರು ಮಾತ್ರವಲ್ಲದೇ ಮಲಯಾಳಂ ಚಿತ್ರರಂಗದ ಸುಮಾರು 30ಕ್ಕೂ ಅಧಿಕ ಜನ ಡ್ರಗ್ ಡೀಲರ್ ಶ್ರೀನಾಥ್ ಅವರನ್ನು ಭೇಟಿಯಾಗಿರುವ ವಿಚಾರ ಕೂಡ ಪೊಲೀಸರಿಗೆ ಗೊತ್ತಾಗಿತ್ತು.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಗಾ ಮಾರ್ಟಿನ್ ಅವರ ಕುಟುಂಬದವರು, ಡ್ರಗ್ಸ್ ಪ್ರಕರಣಕ್ಕೂ ತಮಗೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಇನ್ನು ನಟ ಶ್ರೀನಾಥ್ ಬಾಸಿ ಅವರಿಗೆ ಇದು ಮೊದಲ ಅನುಭವವಾಗಿರಲಿಲ್ಲ. ಯಾಕೆಂದರೆ ಈ ಹಿಂದೆ ಕೂಡ ಶ್ರೀನಾಥ್ ಬಾಸಿ ಅವರ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿತ್ತು. ಮಲಯಾಳಂ ಚಿತ್ರರಂಗ ಈ ವಿಚಾರಕ್ಕೆ ಇವರನ್ನು ಬ್ಯಾನ್ ಮಾಡಿತ್ತು ಕೂಡ. ಆದರೆ ಆ ನಂತರ ಶ್ರೀನಾಥ್ ಬಾಸಿ ಕ್ಷಮೆ ಕೇಳಿದ್ದರು. ಈ ಹಿನ್ನೆಲೆ ಮತ್ತೊಂದು ಅವಕಾಶವನ್ನು ಮಲಯಾಳಂ ಚಿತ್ರರಂಗ ಶ್ರೀನಾಥ್ ಬಾಸಿ ಅವರಿಗೆ ನೀಡಿತ್ತು.
ಕೇವಲ ಡ್ರಗ್ಸ್ ಪ್ರಕರಣ ಮಾತ್ರವಲ್ಲ. ಶ್ರೀನಾಥ್ ಬಾಸಿ ಮೇಲೆ ಹಲವು ಕೇಸ್‌ಗಳು ಕೂಡ ಹಿಂದೆ ದಾಖಲಾಗಿದ್ದವು. ಯೂಟ್ಯೂಬ್‌ನ ಆಂಕರ್ ಮತ್ತು ರೇಡಿಯೋ ಜಾಕಿ ಮೇಲೆ ಶ್ರೀನಾಥ್ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಈ ಪ್ರಕರಣಗಳಲ್ಲಿ ಕೂಡ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದ್ದರು.
ಇನ್ನು 2023ರಲ್ಲಿ ಕೇರಳ ವಿಶ್ವ ವಿದ್ಯಾಲಯದಲ್ಲಿ ಮಾತನಾಡಿದ್ದ ನಟ ಟಿನಿ ಟಾಮ್, ನನ್ನ ಮಗನಿಗೆ ಖ್ಯಾತ ಸ್ಟಾರ್‌ಗಳ ಜೊತೆ ಅಭಿನಯಿಸುವ ಅವಕಾಶ ಬಂದಿತ್ತು ಆದರೆ ಇಲ್ಲಿ ಡ್ರಗ್ಸ್ ಸೇವನೆ ಅತಿಯಾಗಿರುವುದರಿಂದ ನಾನು ಭಯ ಬಿದ್ದು ನನ್ನ ಮಗನಿಗೆ ಕಡಿವಾಣ ಹಾಕಿದೆ, ಯಾಕೆಂದರೆ ನನಗೆ ಇರುವುದು ಒಬ್ಬನೇ ಮಗ ಎಂದು ಹೇಳಿದ್ದರು. ಆ ಕಾಲಕ್ಕೆ ಟಿನಿ ಟಾಮ್ ಅವರ ಈ ಹೇಳಿಗೆ ಚರ್ಚೆಗೆ ಕಾರಣವಾಗಿತ್ತು.
ಹೀಗೆ ಮಲಯಾಳಂ ಚಿತ್ರರಂಗದಲ್ಲಿ ಮೊದಲಿಂದ ಡ್ರಗ್ಸ್ ವಿಚಾರ ಸದ್ದು ಮಾಡುತ್ತಲೇ ಬಂದಿದೆ. ಹೀಗಿರುವಾಗ ಸದ್ಯ ವಿನ್ಸಿ ಅಲೋಶಿಯಸ್ ಅವರ ಈ ಹೇಳಿಕೆ ಮಲಯಾಳಂ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ಹೇಮಾ ಕಮಿಟಿ ವರದಿಯಿಂದ ಮೊದಲೇ ತಲೆ ತಗ್ಗಿಸಿದ್ದ ಮಲಯಾಳಂ ಚಿತ್ರರಂಗ ಈ ವಿನ್ಸಿ ಅಲೋಶಿಯಸ್ ನೀಡಿರುವ ಈ ಹೇಳಿಕೆಯಿಂದ ಮುಜುಗರಕ್ಕೀಡಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಘಾಟು ಈಗ ಮೂಗಿಗೆ ಬಡೆಯುತ್ತಿದೆ.


Click it and Unblock the Notifications











