ವಯನಾಡು ದುರಂತ; ಸೂರ್ಯ, ವಿಕ್ರಂ, ಮಮ್ಮುಟಿ, ರಶ್ಮಿಕಾ ಲಕ್ಷ ಲಕ್ಷ ದೇಣಿಗೆ
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 200 ದಾಟಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಯನಾಡಿನ ಚೂರಲ್ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ಗುಡ್ಡಕುಸಿದು ಈ ದುರಂತ ಸಂಭವಿಸಿದೆ.
ಜುಲೈ 30ರಂದು ತಡರಾತ್ರಿ ಸಂಭವಿಸಿದ ದಿಢೀರ್ ಪ್ರವಾಹ ಹಾಗೂ ಭೂಕುಸಿತದಿಂದ ಮುಂಡಕ್ಕೈ, ಚೂರಲ್‌ಮಾಲಾ, ಅತ್ತಮಾಲಾ, ಮತ್ತು ನೂಲ್‌ಪುಳ ಗ್ರಾಮಗಳು ಅಕ್ಷರಶಹಃ ಕೊಚ್ಚಿ ಹೋಗಿವೆ. ಇನ್ನು ಈ ಭೀಕರ ದುರಂತದಲ್ಲಿ ಮನೆಗಳನ್ನು ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟಕ್ಕೀಡಾಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡುವವರು ದೇಣಿಗೆ ನೀಡಿ ಎಂದು ಕೇರಳ ಸಿರಂ ಪಿಣರಾಯಿ ವಿಜಯನ್ ಕೇಳಿದ್ದಾರೆ.

ಈಗಾಗಲೇ ಸಾಕಷ್ಟು ಜನ ತಮ್ಮ ಕೈಲಾದ ಸಹಾಯಕ್ಕೆ ಮುಂದಾಗಿದ್ದಾರೆ. ಸಿನಿಮಾ ತಾರೆಯರು ಈ ಸಾಲಿನಲ್ಲಿ ಮುಂದಿದ್ದಾರೆ. ಖ್ಯಾತ ನಟ-ನಟಿಯರು ಈಗಾಗಲೇ ಲಕ್ಷ ಲಕ್ಷ ಹಣವನ್ನು ಕೇರಳ ಸಿಎಂ ಫಂಡ್‌ಗೆ ದೇಣಿಗೆ ನೀಡುತ್ತಿದ್ದಾರೆ. ತಮಿಳು ನಟರಾದ ಸೂರ್ಯ ಮತ್ತು ವಿಕ್ರಮ್, ಮಲಯಾಳಂ ನಟರಾದ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್, ನಜ್ರಿಯಾ ಮತ್ತು ಇತರರು ಕೇರಳ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ಲಕ್ಷ ಲಕ್ಷ ದೇಣಿಗೆ ನೀಡಿದ್ದಾರೆ.
ನಟ ಚಿಯಾನ್ ವಿಕ್ರಂ 20 ಲಕ್ಷ ರೂ. ದೇಣಿಗೆಯಾಗಿ ಘೋಷಿಸಿದ್ದಾರೆ. ವಿಕ್ರಂ ಮ್ಯಾನೇಜರ್ ಯುವರಾಜ್ ಟ್ವೀಟ್ ಮಾಡಿ "ಕೇರಳದ ವಯನಾಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು, 197 ಮಂದಿ ಗಾಯಗೊಂಡರು ಮತ್ತು ಹಲವಾರು ಮಂದಿ ನಾಪತ್ತೆಯಾಗಿದ್ದಾರೆ ಎಂಬ ದುಃಖದ ಸುದ್ದಿಯಿಂದ ನೋವಾಗಿದೆ, ನಟ ವಿಕ್ರಂ ಇಂದು ಕೇರಳ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ತಮಿಳು ಕಲಾವಿದರಾದ ಸೂರ್ಯ-ಜ್ಯೋತಿಕಾ ದಂಪತಿ ಹಾಗೂ ಸಹೋದರ ಕಾರ್ತಿ ಜಂಟಿಯಾಗಿ 50 ಲಕ್ಷ ರೂ. ದೇಣಿಗೆ ನೀಡಿರುವುದು ವರದಿಯಾಗಿದೆ. ಇನ್ನು ಮಲಯಾಳಂ ನಟರಾದ ಮಮ್ಮುಟ್ಟಿ ಮತ್ತು ಅವರ ಪುತ್ರ ದುಲ್ಕರ್ ಸಲ್ಮಾನ್ ಒಟ್ಟಾಗಿ ₹35 ಲಕ್ಷವನ್ನು ಪರಿಹಾರ ನಿಧಿಗೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಮ್ಮುಟ್ಟಿ , "ಸದ್ಯ ನಾನು ಪರಿಹಾರ ಕ್ರಮಗಳಿಗೆ ಅಲ್ಪ ಮೊತ್ತವನ್ನು ಮಾತ್ರ ನೀಡಿದ್ದೇನೆ. ಅಗತ್ಯ ಬಿದ್ದರೆ ಮತ್ತಷ್ಟು ಕೊಡುಗೆ ನೀಡುತ್ತೇನೆ. ಅವರೆಲ್ಲ ನಮ್ಮಂತೆಯೇ. ಎರಡೇ ದಿನದಲ್ಲಿ ಅವರ ಬದುಕು ಬದಲಾಗಿ ಹೋಯಿತು. ಅವರಿಗೆ ನಮ್ಮ ಸಹಾಯದ ಅಗತ್ಯವಿದೆ. ಅವರಿಗೆ ಸಹಾಯ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ" ಎಂದಿದ್ದಾರೆ.
ಮಲಯಾಳಂ ನಟ ಫಹಾದ್ ಫಾಸಿಲ್ ಹಾಗೂ ನಜ್ರಿಯಾ ದಂಪತಿ 25 ಲಕ್ಷ ರೂ. ಕೇರಳ ಸಿಎಂ ಫಂಡ್‌ಗೆ ಕೊಟ್ಟಿದ್ದಾರೆ. ಈ ಬಗ್ಗೆ ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇತ್ತೀಚೆಗೆ ಆಕೆ ಕೇರಳಕ್ಕೆ ಭೇಟಿ ನೀಡಿದ್ದಾಗ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಮುತ್ತಿಕೊಂಡಿದ್ದು ಗೊತ್ತೇಯಿದೆ.


Click it and Unblock the Notifications











