ಭಗ್ನವಾಯ್ತು ಮದುವೆಯ ಕನಸು, ನಿಶ್ಚಿತಾರ್ಥದ ನಂತರ ಮುರಿದು ಬಿತ್ತು ಸಂಬಂಧ- ನಟಿ ಭಾವುಕ
ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ..
ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು. ಇದಕ್ಕೆ ರೇಶ್ಮಾ ಎಸ್ ನಾಯರ್ ಅವರ ವ್ಯೆಯಕ್ತಿಕ ಬದುಕು ಸದ್ಯದ ಮತ್ತೊಂದು ಉದಾಹರಣೆ. ಹೌದು, ರೇಶ್ಮಾ ಎಸ್ ನಾಯರ್.. ಮಲಯಾಳಂನ ಮನಮೋಹಕ ಚೆಲುವೆ.

ಮಾಡೆಲಿಂಗ್ ಲೋಕದಲ್ಲಿ ಹೆಸರು ಮಾಡುತ್ತಲೇ ಕಿರುತೆರೆಯನ್ನು ಪ್ರವೇಶ ಮಾಡಿದ ರೇಶ್ಮಾ ಮಲಯಾಳಂನ ಜನಪ್ರಿಯ ಧಾರಾವಾಹಿ ''ಕುಡುಂಬವಿಳಕ್ಕು''ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಭರ್ತಿ ಐದು ವರ್ಷ ಪ್ರಸಾರವಾದ ಈ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಮೀರಾ ವಾಸುದೇವ್ ಇದ್ದರೆ ರೇಶ್ಮಾ ಈ ಸೀರಿಯಲ್‌ನಲ್ಲಿ ಸಂಜನಾ ಪಾತ್ರವನ್ನು ನಿರ್ವಹಿಸಿದ್ದರು. ತಮ್ಮ ಅಭಿನಯದ ಮೂಲಕ ಕೇರಳಿಗರ ಹೃದಯವನ್ನು ಗೆದ್ದಿದ್ದರು.
ಇಂಥಾ ರೇಶ್ಮಾ ನಾಯರ್ ಕಳೆದ ಮೂರು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಯಾಗಲಿರುವ ತಮ್ಮ ಹುಡುಗನ ಮುಖವನ್ನು ತೋರಿಸದೇ ಕೆಲ ಫೋಟೊಗಳನ್ನು ಹಂಚಿಕೊಂಡು ತಮ್ಮ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಕರಾಳವಾದ ದಿನಗಳನ್ನು ಕೂಡ ಭರವಸೆಯ ಬೆಳಕಿನಂತೆ ಬದಲಿಸುವ ಶಕ್ತಿ ಹೊಂದಿರುವ ವ್ಯಕ್ತಿ ನಿಮ್ಮ ಬದುಕಿನಲ್ಲಿ ಬಂದಾಗ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತೆ ಎಂದು ಹೇಳಿದ್ದ ರೇಶ್ಮಾ ನಾಯರ್ ನನ್ನ ಬಾಳ ಸಂಗಾತಿಯಾಗಿ ನಾನು ಇವರನ್ನು ಪಡೆದಿದ್ದು ನನ್ನ ಅದೃಷ್ಟ ಎಂದು ಹೇಳಿದ್ದರು.
ನಾನು ನನ್ನ ಬದುಕಿನ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗ ನನ್ನ ಬದುಕಿನಲ್ಲಿ ಬಂದ ಈ ವ್ಯಕ್ತಿ, ಚಿಂತೆ ಮಾಡಬೇಡ ನಾನು ನಿನ್ನ ಜೊತೆ ಇದ್ದೇನೆ.. ಎಲ್ಲವನ್ನೂ ಜೊತೆಯಾಗಿ ಎದುರಿಸೋಣ ಎಂದು ಹೇಳಿದರು. ನನ್ನ ದುಸ್ವಪ್ನಗಳನ್ನೆಲ್ಲಾ ಸುಂದರವಾದ ವರ್ಣರಂಜಿತ ಕನಸುಗಳಾಗಿ ಬದಲಿಸಿದರು ಎಂದು ಹೇಳಿದ್ದ ರೇಶ್ಮಾ ಇವರು ನನ್ನ ಬದುಕಿನ ದೊಡ್ಡ ಪ್ರೇರಣೆ.. ನನ್ನ ಬೆನ್ನೆಲುಬು.. ಎಂದು ಹೇಳಿದ್ದರು. ನನ್ನ ಈ ನಗುವಿಗೆ ಕಾರಣ ಈ ವ್ಯಕ್ತಿ ಎಂದು ಬರೆದುಕೊಂಡಿದ್ದರು. ಇಷ್ಟೇ ಅಲ್ಲ ನಮ್ಮ ಪ್ರೀತಿಯನ್ನು ಒಪ್ಪಿ ನನ್ನ ಹುಡುಗನನ್ನು ತಮ್ಮ ಮನೆಮಗನಂತೆ ಸ್ವೀಕರಿಸಿದ ಹೆತ್ತವರಿಗೆ ಧನ್ಯವಾದವನ್ನು ಕೂಡ ಹೇಳಿದ್ದರು ರೇಶ್ಮಾ.

ಆದರೆ.. ಈಗ ಈ ಸಂಬಂಧ ಮುರಿದು ಬಿದ್ದಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಬೇಕಿದ್ದ ಮದುವೆ ರದ್ದಾಗಿದೆ. ಹೀಗಾಗಿ ಭಾರವಾದ ಹೃದಯದಿಂದ ತಮ್ಮ ಮದುವೆ ರದ್ದಾಗಿರುವ ವಿಷಯವನ್ನು ಹಂಚಿಕೊಂಡಿರುವ ರೇಶ್ಮಾ ಎಲ್ಲರಿಗೂ ನಮಸ್ಕಾರ. ನಿಮ್ಮಲ್ಲಿ ಯಾವ ಗೊಂದಲ ಇರಬಾರದು ಎನ್ನುವ ಉದ್ದೇಶದಿಂದ ಈ ವಿಷಯವನ್ನು ನಾನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಿಮಗೆಲ್ಲಾ ಗೊತ್ತಿರುವಂತೆ ನನ್ನ ಮದುವೆ ನಿಶ್ಚಯವಾಗಿತ್ತು. ಆದರೆ.. ಈಗ ನಮ್ಮ ಮದುವೆ ಮುರಿದು ಬಿದ್ದಿದೆ ಎಂದು ಹೇಳಿದ್ಧಾರೆ.
ನಾವು ಇಬ್ಬರೂ ಮತ್ತು ನಮ್ಮ ಹೆತ್ತವರು ಪರಸ್ಪರ ಕುಳಿತು ಮಾತುಕತೆಯನ್ನು ಮಾಡಿ, ಈ ಸಂಬಂಧವನ್ನು ಕಡಿತಗೊಳಿಸಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿರುವ ರೇಶ್ಮಾ ನಾಯರ್, ನಾನು ಈ ನಿರ್ಧಾರವನ್ನು ತುಂಬಾನೇ ಆಲೋಚನೆ ಮಾಡಿ ತೆಗೆದುಕೊಂಡಿದ್ದೇನೆ, ನನ್ನ ಮುಂದಿನ ಜೀವನ, ಭವಿಷ್ಯ ಎಲ್ಲದರ ಕುರಿತು ಯೋಚನೆ ಮಾಡಿ ಸೂಕ್ತವಾದ ನಿರ್ಧಾರ ತೆಗೆದುಕೊಂಡಿರುವುದಕ್ಕೆ ನನಗೆ ಖುಷಿ ಇದೆ ಹೊರತು ವಿಷಾದ ಇಲ್ಲ ಎಂದು ಹೇಳಿದ್ದಾರೆ.
ನನ್ನ ಈ ನಿರ್ಧಾರದ ಹಿಂದಿನ ನನ್ನ ವ್ಯೆಯಕ್ತಿಕ ಕಾರಣಗಳನ್ನು ನಾನು ಹೇಳಲು ಬಯಸುವುದಿಲ್ಲ ಎಂದು ಹೇಳಿರುವ ರೇಶ್ಮಾ, ದಯಮಾಡಿ ಈ ಕುರಿತು ಯಾರು ನನಗೆ ಹೆಚ್ಚಿನ ವಿವರಗಳನ್ನು ಕೇಳಬೇಡಿ. ನನ್ನ ನೆಮ್ಮದಿ.. ನನ್ನ ಆಯ್ಕೆ.. ನನ್ನ ಭವಿಷ್ಯಕ್ಕೆ ನಾನು ಆದ್ಯತೆ ನೀಡುತ್ತೇನೆ ಎಂದು ಹೇಳಿದ್ಧಾರೆ. ನನ್ನ ನಿರ್ಧಾರವನ್ನು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.
ಸದ್ಯ ರೇಶ್ಮಾ ಅವರ ಈ ಮಾತು ಮತ್ತು ನಿರ್ಧಾರದ ಕುರಿತು ಮಲಯಾಳಂ ಚಿತ್ರರಂಗ ಮತ್ತು ಕಿರುತೆರೆ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಹಲವರು ಕಾರಣ ಏನಿರಬಹುದು ಎಂದು ಚರ್ಚೆ ಮಾಡುತ್ತಿದ್ದಾರೆ.


Click it and Unblock the Notifications











