'ಟಾಕ್ಸಿಕ್' ಚಿತ್ರದಲ್ಲಿ ರಾಯನ ಬಲಗೈ ಬಂಟನಾಗಿ ಬಿಲ್ಡಪ್ ಕೊಡುವ ಈ ಹಿರಿಯ ನಟ ಯಾರು? ಹಿನ್ನೆಲೆ ಏನು?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಆರ್ಭಟ ಶುರುವಾಗಿದೆ. ಚಿತ್ರದ ಆಂಧ್ರ, ತೆಲಂಗಾಣ ಹಾಗೂ ಓವರ್‌ಸೀಸ್ ರೈಟ್ಸ್ ದಾಖಲೆ ದರಕ್ಕೆ ಮಾರಾಟವಾಗಿದೆ. ಒಂದೇ ಒಂದು ಟೀಸರ್‌ನಿಂದ ಈ ಗ್ಯಾಂಗ್‌ಸ್ಟರ್ ಡ್ರಾಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ.
ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಟೀಸರ್ ಸೂಪರ್ ಹಿಟ್ ಆಗಿದೆ. ಅದರಲ್ಲಿರುವ ಹಸಿಬಿಸಿ ದೃಶ್ಯದ ಬಗ್ಗೆ ಪರ ವಿರೋಧ ಚರ್ಚೆ ನಡೆದು ವಿವಾದ ಸೃಷ್ಟಿಯಾಗಿತ್ತು. ಅದೆಲ್ಲದರ ನಡುವೆ ಸಣ್ಣ ಝಲಕ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುವ ಸುಳಿವು ಸಿಕ್ತಿದೆ. ಹಾಲಿವುಡ್ ರೇಂಜ್‌ನಲ್ಲಿ ಟೀಸರ್ ಬಂದು ಸದ್ದು ಮಾಡಿದೆ.

ಸ್ಮಶಾನದ ಸನ್ನಿವೇಶದೊಂದಿಗೆ 'ಟಾಕ್ಸಿಕ್' ಚಿತ್ರದ ಟೀಸರ್ ತೆರೆದುಕೊಳ್ಳುತ್ತದೆ. ಗ್ಯಾಂಗ್‌ಸ್ಟರ್ ಒಬ್ಬನ ಪುತ್ರನ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಯುವ ವೇಳೆ ಅಲ್ಲಿಗೆ ರಾಯ(ಯಶ್)ನ ಆಗಮನವಾಗುತ್ತದೆ. ಮೊದಲಿಗೆ ಕಪ್ಪು ಬಣ್ಣದ ಕಾರ್ ಅಲ್ಲಿ ಬಂದು ಮರದಕ್ಕೆ ಗುದ್ದುತ್ತದೆ. ಒಳಗಿಂದ ಯಶ್ ಎಂಟ್ರಿ ಆಗುತ್ತದೆ ಎಂದುಕೊಳ್ಳುವವರಿಗೆ ಸಣ್ಣ ಸರ್‌ಪ್ರೈಸ್ ಕಾದಿತ್ತು. ವಯಸ್ಸಾದ ಕುಡುಕನೊಬ್ಬ ಕಾರ್ ಇಂದ ಇಳಿದು ಡೈನಮೈಟ್ ಬಾಂಬ್ ಫಿಕ್ಸ್ ಮಾಡಿ ಡಿಟೋನೇಟರ್ ಅನ್ನು ಕಾರಿನ ಡಿಕ್ಕಿಗೆ ಫಿಕ್ಸ್ ಮಾಡಿ ಹೋಗಿಬಿಡ್ತಾನೆ.
ಅಲ್ಲಿಂದ ಮುಂದೆ ರಾಯ ಬಾಂಬ್ ಸಿಡಿಸಿ ಎದುರಾಳಿ ಪಡೆಯನ್ನು ಧೂಳಿಪಟ ಮಾಡಿ ಬಳಿಕ ಕಾರ್ ಇಳಿದು ಬರ್ತಾನೆ. ಅಳಿದುಳಿದವರ ಮೇಲೆ ಗನ್ ಹಿಡಿದು ಅಬ್ಬರಿಸುವುದು ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಅಷ್ಟಕ್ಕೂ ಹೀಗೆ ರಾಯನ ಬಲಗೈ ಬಂಟನಂತೆ ಕಾರಿನಿಂದ ಕುಡಿಯುವ ಇಳಿಯುವ ವಯಸ್ಸಾದ ವ್ಯಕ್ತಿ ಯಾರು? ಎಂದು ಕೆಲವರು ಹುಡುಕಾಟ ನಡೆಸಿದ್ದರು. ಅಂದಹಾಗೆ ಆ ನಟನ ಹೆಸರು ಸುರ್ಜಿತ್ ಗೋಪಿನಾಥ್.
ಕೇರಳದ ತ್ರಿಶೂರ್ ಮೂಲದ ಸುರ್ಜಿತ್ ಗೋಪಿನಾಥ್ ಸಾಕಷ್ಟು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ತಮಿಳು ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದು ಇದೀಗ 'ಟಾಕ್ಸಿಕ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಪಾತ್ರವನ್ನು ಡಿಸೈನ್ ಮಾಡಿರುವುದು ನೋಡಿದ್ರೆ, ರಾಯನ ಜೊತೆ ಸೇರಿ ಸುರ್ಜಿತ್ ಕಾಮಿಡಿ ಪಂಚ್ ಕೊಡುವ ಸುಳಿವು ಸಿಕ್ತಿದೆ.
ದುಲ್ಕರ್ ಸಲ್ಮಾನ್ ನಟನೆಯ ಸೂಪರ್ ಹಿಟ್ 'ಚಾರ್ಲಿ' ಚಿತ್ರದಲ್ಲಿ ಸುರ್ಜಿತ್ ನಟನೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. 'ಲಡ್ಡೂ', 'ಸುನಾಮಿ', 'ಮಿನ್ನಲ್ ಮುರಳಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಬರೀ ಯೂಟ್ಯೂಬ್‌ನಲ್ಲೇ 'ಟಾಕ್ಸಿಕ್' ಟೀಸರ್ 100 ಮಿಲಿಯನ್ ವೀವ್ಸ್ ಸಾಧಿಸುವತ್ತ ಮುನ್ನುಗ್ಗುತ್ತಿದೆ. ಈ ಬಗ್ಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಟ್ವೀಟ್ ಮಾಡಿದ್ದಾರೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಮಾಡುವ ಸುಳಿವು ಸಿಕ್ತಿದೆ.
ಈಗಾಗಲೇ 'ಟಾಕ್ಸಿಕ್' ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಭರ್ಜರಿಯಾಗಿ ನಡೀತಿದೆ. 120 ಕೋಟಿ ರೂ.ಗೆ ಆಂಧ್ರ, ತೆಲಂಗಾಣ ರೈಟ್ಸ್ ಮಾರಾಟವಾಗಿದೆ. 105 ಕೋಟಿಗೆ ಫಾರ್ಸ್ ಫಿಲ್ಮ್ಸ್ ಸಂಸ್ಥೆ ಚಿತ್ರದ ಓವರ್‌ಸೀಸ್ ರೈಟ್ಸ್ ವ್ಯವಹಾರ ಕುದುರಿಸಿಕೊಂಡಿದೆ. ಇಂಗ್ಲೀಷ್ ಬಿಟ್ಟು ಇತರೆ ಭಾಷೆಗಳ ರೈಟ್ಸ್ ಮಾತ್ರ ಇದರಲ್ಲಿ ಸೇರಿದೆ. 300 ಕೋಟಿ ರೂ.ಗೆ ಓಟಿಟಿ ರೈಟ್ಸ್ ಕೇಳುತ್ತಿದ್ದಾರೆ ಎಂದು ಗುಲ್ಲಾಗಿದೆ.
ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರುವುದು ಮತ್ತೊಮ್ಮೆ ಖಚಿತವಾಗಿದೆ. 'ಧುರಂಧರ್'-2 ಎದುರು ಬಾಕ್ಸಾಫೀಸ್ ಕ್ಲ್ಯಾಶ್ ನಡೆಯಲಿದೆ. ಎರಡೂ ಸಿನಿಮಾಗಳು ಭಾರೀ ಹೈಪ್ ಕ್ರಿಯೇಟ್ ಮಾಡಿವೆ.


Click it and Unblock the Notifications











