ಬಲಂಪಂಥೀಯ ನಾಯಕರ ಕೆಂಗಣ್ಣಿಗೆ ಗುರಿಯಾದ ಈ 'ವೇಡನ್' ಯಾರು ?
ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ರ್ಯಾಪ್ ಹಾಡುಗಳ ಮೂಲಕ ಅನೇಕರು ಗಮನ ಸೆಳೆದಿದ್ದಾರೆ. ಬದುಕು ರೂಪಿಸಿಕೊಂಡಿದ್ದಾರೆ. ಮತ್ತೂ ಕೆಲವರು ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದಾರೆ. ಆ ಪೈಕಿ ವೇಡನ್ ಕೂಡ ಒಬ್ಬರು.
ಹೌದು, ವೇಡನ್.. ಕೇರಳದಲ್ಲಿ ಸಂಚಲನ ಸೃಷ್ಟಿಸಿರುವ ದಲಿತ ರ್ಯಾಪರ್. ಹಿರಂದಾಸ್ ಮುರಳಿ ಇವರ ಮೂಲ ಹೆಸರು. ಜಾತಿ ಶ್ರೇಷ್ಠರನ್ನು ಅವರ ಶ್ರೇಷ್ಠತೆಯ ವ್ಯಸನವನ್ನು ಕಿತ್ತೆಸೆಯುವಂತಹ ಪದಪುಂಜಗಳನ್ನು ಪೋಣಿಸಿ ತನ್ನ ಕಂಠದ ಮೂಲಕ ಹಲವರ ಹೃದಯವನ್ನು ಗೆಲ್ಲುತ್ತಿರುವ ವೇಡನ್ ತೀರಾ ಇತ್ತೀಚೆಗಷ್ಟೇ ತಮ್ಮ ಹಾಡಿನ ಮೂಲಕ ಬಲಪಂಥೀಯರನ್ನು ಕೆರಳಿಸಿದ್ದಾರೆ.

ಆರೆಸ್ಸೆಸ್ ಮುಖವಾಣಿ 'ಕೇಸರಿ'ಯ ಸಂಪಾದಕ ಎನ್.ಆರ್. ಮಧು, ವೇಡನ್ ಅವರನ್ನು 'ಜಾತಿ ಭಯೋತ್ಪಾದಕ' ಎಂದು ಜರಿದಿದ್ದಾರೆ. ದಲಿತ ಸಮುದಾಯದ ವೇಡನ್ , ತಮ್ಮ ಸಂಗೀತದ ಮೂಲಕ ಕಲೆಗೆ ಅಪಹಾಸ್ಯ ಮಾಡುತ್ತಿದ್ದಾರೆ ಮತ್ತು ಸಮಾಜದಲ್ಲಿ ಜಾತಿ ವಿಷವನ್ನು ಬಿತ್ತುತ್ತಿದ್ದಾರೆ ಎಂದು ಆರೋಪ ಮಾಡಿರುವ ಮಧು ಯುವ ಪೀಳಿಗೆಯ ಮನಸ್ಸಿನಲ್ಲಿ ವಿಷದ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇಂಥಾ ವೇಡನ್ ಬದುಕಿನ ಕೆಲ ವಿಚಾರಗಳು ಇಲ್ಲಿವೆ.
ಯಾರು ಈ ವೇಡನ್ ?
ವೇಡನ್ ಅವರ ತಾಯಿ ಉತ್ತರ ಶ್ರೀಲಂಕಾದ ತಮಿಳು ಇತಿಹಾಸ ಹೊಂದಿರುವ ಜಾಫ್ನಾ ಎಂಬ ನಗರದವರು. ತಂದೆ ಕೇರಳದ ತ್ರಿಶೂಲ್ ಮೂಲದವರು. ತ್ರಿಶೂಲ್ ರೈಲು ನಿಲ್ದಾಣದ ಬಳಿ ಸ್ವಪ್ನ ಭೂಮಿ ಎನ್ನುವ ಕಾಲೋನಿಯಲ್ಲಿ ಹುಟ್ಟಿ ಬೆಳೆದವರು ವೇಡನ್. ತನ್ನ ತಂದೆ ಹಾಡುತ್ತಿದ್ದ ಜನಪದ ಹಾಡುಗಳನ್ನು ಕೇಳುತ್ತಾ ಸಂಗೀತದತ್ತ ವಾಲಿದ ವೇಡನ್ ಓದಿದ್ದು ಹತ್ತನೇ ತರಗತಿಯವರೆಗೆ ಮಾತ್ರ.
ಮುರಳಿ ವೇಡನ್ ಆಗಿದ್ಹೇಗೆ ?
ವೇಡನ್ ಎಂದರೆ ಬೇಡ ಎಂದರ್ಥ. ಬೇಡ ಜನಾಂಗದ ಹಿರಂದಾಸ್ ಮುರಳಿಯನ್ನು ಬಾಲ್ಯದಲ್ಲಿ ಎಲ್ಲರು ವೇಡನ್ ಎಂದೇ ಕರೆಯುತ್ತಿದ್ದರು. ಇನ್ನು 2020ರಲ್ಲಿ ಕೊರೊನಾ ವಕ್ಕರಿಸಿಕೊಂಡಾಗ ತನ್ನ 25ರ ಹರೆಯದಲ್ಲಿ ವೇಡನ್ ವಾಯ್ಸ್ ಆಫ್ ವಾಯ್ಸ್‌ಲೆಸ್ ಎಂಬ ರ್ಯಾಪ್ ಹಾಡನ್ನು ಹಾಡಿದರು.
ಈ ಹಾಡು ವೇಡನ್ ಬದುಕನ್ನೇ ಬದಲಿಸಿತು. ಜಾತಿತಾರತಮ್ಯದ ವಿರುದ್ದ ಸಿಡಿದೆದ್ದ ಹುಡುಗನ ಕಿಡಿಯಂತಹ ಈ ಹಾಡಿಗೆ ಇಡೀ ಕೇರಳ ಬೆಕ್ಕಸ ಬೆರಗಾಗಿತ್ತು. 5 ವರ್ಷ ಆದರೂ ಕೂಡ ಈ ಹಾಡಿನ ಕ್ರೇಜ್ ಇವತ್ತು ಕಡಿಮೆಯಾಗಿಲ್ಲ. 14,215,239 ವ್ಯೂವ್ಸ್‌ಗಳನ್ನು ಈ ಹಾಡು ಇಲ್ಲಿಯವರೆಗೆ ಗಳಿಸಿದೆ ಅಂದರೆ ಈ ಹಾಡಿಗೆ ಇರುವ ಸಮ್ಮೋಹಕ ಶಕ್ತಿ ಎಂತಹದ್ದು ಎನ್ನುವುದನ್ನು ನೀವೆ ಊಹಿಸಿ.
ವಾಯ್ಸ್ ಆಫ್ ವಾಯ್ಸ್‌ಲೆಸ್ ಹಾಡಿನ ನಂತರವೂ ದಮನಿತರ ನೋವು, ದಬ್ಬಾಳಿಕೆ, ಸಾಮಾಜಿಕ ನ್ಯಾಯದ ಕುರಿತು ತಮ್ಮ ಹಾಡುಗಳ ಮೂಲಕ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿರುವ ವೇಡನ್ ಇಲ್ಲಿಯವರೆಗೆ ಹಲವು ಹಾಡುಗಳನ್ನು ಹೊರ ತಂದಿದ್ದಾರೆ.
ಚಿತ್ರರಂಗದಲ್ಲಿಯೂ ಸಕ್ರಿಯ
ಇನ್ನು ಚಿತ್ರರಂಗ ಕೂಡ ವೇಡನ್ ಅವರ ಬರವಣಿಗೆ ಮತ್ತು ಅವರಲ್ಲಿರುವ ಕಿಚ್ಚಿಗೆ ಮನ ಸೋತಿದ್ದು ವೇಡನ್ ಹಲವು ಚಿತ್ರಗಳಿಗೆ ಕೆಲಸವನ್ನು ಮಾಡಿದ್ದಾರೆ. ಆ ಪೈಕಿ ಮಂಜುಮ್ಮೇಲ್ ಬಾಯ್ಸ್ ಚಿತ್ರದ ಕುತಂತ್ರಂ ಹಾಡು ಕೂಡ ಒಂದು.
ಸದ್ಯ ವೇಡನ್ ಬರೆದು ಹಾಡಿರುವ ಟೋವಿನೋ ಥಾಮಸ್ ಅಭಿನಯದಲ್ಲಿ ಬಿಡುಗಡೆಯಾದ ನರಿವೆಟ್ಟ ಚಿತ್ರದ ವಾದ್ ವೇದನ್ ಹಾಡು ಸದ್ದು ಮಾಡುತ್ತಿದೆ.
ಬಲಪಂಥೀಯರ ಆರೋಪ ಏನು ?
ವೇಡನ್ ಅವರ ಹಾಡು ನೇರವಾಗಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅವಮಾನಿಸುವಂತೆ ಇದೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಮಾಡಿವೆ. ವೇಡನ್ ವಿರುದ್ದ ದೂರನ್ನು ಕೂಡ ಸಲ್ಲಿಸಿವೆ. "ನಕಲಿ ದೇಶಭಕ್ತಿ" ಮತ್ತು "ಕತ್ತಿ ಹಿಡಿದವನ ಕೈಯಲ್ಲಿ ದೇಶ" ದಂತಹ ಸಾಲುಗಳು ಪ್ರಧಾನಿ ಮೋದಿ ಅವರನ್ನು ಅವಮಾನಿಸುವುದಲ್ಲದೇ ಹಿಂದೂ ಸಮುದಾಯದೊಳಗೆ ಜಾತಿ ವಿಭಜನೆಯನ್ನು ವೇಡನ್ ಹಾಡುಗಳು ಸೃಷ್ಟಿಸುತ್ತವೆ ಎಂದು ವೇಡನ್ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.


Click it and Unblock the Notifications











