ಸಂಜನಾ 'ಈ ಸಂಜೆ' ಧ್ವನಿಸುರುಳಿ ಲೋಕಾರ್ಪಣೆ
ಚೆಲುವಿನ ತಾರೆ ಸಂಜನಾ ಮತ್ತು ಸ್ಫುರದ್ರೂಪಿ ನಟ ಆರ್ಯನ್ ಅಭಿನಯದ 'ಈ ಸಂಜೆ' ಚಿತ್ರದ ಧ್ವನಿಸುರುಳಿಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. 'ಒರಟ ಐ ಲವ್ ಯು' ಖ್ಯಾತಿಯ ಶ್ರೀ ಚಿತ್ರದ ನಿರ್ದೇಶಕರು. ಧ್ವನಿಸುರುಳಿಯನ್ನು ದಿ ಸಿಟಿ ಇನಿಸ್ಟಿಟ್ಯೂಟ್ ಆಫ್ ಬೆಂಗಳೂರಿನಲ್ಲಿ ಕಿಚ್ಚ ಸುದೀಪ್ ಬುಧವಾರ ಲೋಕಾರ್ಪಣೆ ಮಾಡಿದರು.
ಚಿತ್ರ ಲೇಟಾಗಿ ತೆರೆಗೆ ಬರುತ್ತಿದ್ದರೂ ಲೇಟೆಸ್ಟ್ ಆಗಿ ಬರಲಿದೆ. ಚಿತ್ರವನ್ನು ಉತ್ತಮವಾಗಿಸಲು ನಾವೆಲ್ಲಾ ಶಕ್ತಿಮೀರಿ ಶ್ರಮಿಸಿದ್ದೇವೆ ಎಂದು ನಿರ್ಮಾಪಕ ಬಾಲಾಜಿ ಸಿಂಗ್ ಹೇಳಿದರು. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ಜೈ ಶಿವು ಸಂಗೀತ ನಿರ್ದೇಶನದಲ್ಲಿ ಇಂಪಾಗಿ ಮೂಡಿ ಬಂದಿವೆ.
ಸುದೀಪ್ ತಮ್ಮ 'ನಂ73 ಶಾಂತಿನಿವಾಸ' ಚಿತ್ರದ ಮೂಲಕ ಆರ್ಯನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಸುದೀಪ್ ಅವರು ನನಗೆ 'ಗುರು ಮತ್ತು ಗುರುಕುಲ' ಇದ್ದಂತೆ ಎಂದು ಆರ್ಯನ್ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಜನಾ ಮಾತನಾಡುತ್ತಾ, ಇದುವರೆಗೂ ತಾವು ನಟಿಸಿದ ಚಿತ್ರಗಳಲ್ಲಿ 'ಈ ಸಂಜೆ' ಭಿನ್ನವಾದ ಚಿತ್ರ. ಈ ಚಿತ್ರ ನನ್ನ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲುಗಲ್ಲಾಗಲಿದೆ ಎಂದರು.
ಕತೆ, ಚಿತ್ರಕತೆ ಮತ್ತು ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ನಿರ್ದೇಶಕ ಶ್ರೀ ಅಪಾರ ವಿಶ್ವಾಸ ವ್ಯಕ್ತಪಡಿಸಿದರು. ಸಂಜನಾ ಕೇವಲ ಉತ್ತಮ ನಟಿಯಷ್ಟೆ ಅಲ್ಲ ಅವರು ಭಾವನಾತ್ಮಕವಾಗಿಯೂ ಅಭಿನಯಿಸಿದ್ದಾರೆ. 'ಈ ಸಂಜೆ' ಒಂದು ಉತ್ತಮ ಭಾವನಾತ್ಮಕ ಚಿತ್ರ ಎಂದು ಶ್ರೀ ಹೇಳಿದರು.


Click it and Unblock the Notifications











