»   » ಜೀ ಕನ್ನಡ 'ಸರಿಗಮಪ' ಫೈನಲ್ ಯಾರ ಮುಡಿಗೆ?

ಜೀ ಕನ್ನಡ 'ಸರಿಗಮಪ' ಫೈನಲ್ ಯಾರ ಮುಡಿಗೆ?

Subscribe to Filmibeat Kannada

ಬೆಂಗಳೂರು, ಏ.1: ಅರಳುವ ಹೂವುಗಳೇ ಆಲಿಸಿರಿ ಬಾಳೊಂದು ಹೋರಾಟ ಮರೆಯದಿರಿ...... ನಗುವ ನಯನ ಮದುರ ಮೌನ ಮಿಡಿವ ಹೃದಯ ಇರೆ ಮಾತೇಕೆ..... ಈ ಹಸಿರು ಸಿರಿಯಲಿ ಮನಸು ಮರೆಯಲಿ ನವಿಲೇ.... ಕರುನಾಡ ತಾಯಿ ಸದಾ ಚಿನ್ಮಯಿ.... ಎಂದು ಒಂದರ ನಂತರ ಒಂದು ರಾಗವಾಗಿ ಕೇಳಿ ಬರುವ ಹಾಡಿಗೆ ತಲೆದೂಗುವ ಎಲ್ಲರ ಮೊಗದಲ್ಲೂ ಖುಷಿಯ ಹೂಮಾಲೆ ! ಆಗಷ್ಟೇ ಸ್ಪಷ್ಟ ಮಾತು ಕಲಿತ ಐದರ ಬಾಲೆ ತಪ್ಪಿಲ್ಲದ ಏರಿಳಿತದಲ್ಲಿ ಹಾಡ ಹಾಡಿದರೆ ನಿರ್ಣಾಯಕರ, ಪ್ರೇಕ್ಷಕರ ಕಣ್ಣಲ್ಲಿ ಆನಂದ ಭಾಷ್ಪ.

ಸಂಗೀತದಲ್ಲಿ ಮಾಗಿದ ಪ್ರತಿಭೆಗಳೇ ಹಾಡಲು ಹೆದರುವ ಘಂಟಸಾಲ ಹಾಡಿದ ಶಿವಶಂಕರಿ ಚಂದ್ರಕಳಾದರೀ ಈಶ್ವರೀ... ಹಾಡನ್ನು ಒಂಚೂರು ಅಳುಕದೇ ಹಾಡಿದ ಪುಟಾಣಿಗೆ ಖ್ಯಾತ ಹಿನ್ನೆಲೆ ಗಾಯಕಿ ಪದ್ಮಭೂಷಣ ಕವಿತಾ ಕೃಷ್ಣಮೂರ್ತಿ ಅವರು ಎದ್ದು ನಿಂತು ತಮ್ಮ ಗೌರವ ಸೂಚಿಸುತ್ತಾರೆ. ರಾಗದಲ್ಲಿ ಯಾವ ತೊಡಕಿಲ್ಲ... ಸ್ವರದ ಏರಿಳಿತದಲ್ಲಿ ಯಾವ ಲೋಪವೂ ಇಲ್ಲ... ಹಾಡು ಮುಗಿಯುತ್ತಿದ್ದಂತೆ ಕರತಾಡನದಲ್ಲಿ ಇಡೀ ವೇದಿಕೆ ತೊಯ್ದು ಹೋಗಿತ್ತು. ಇದು ಜೀ ಕನ್ನಡದ ಪ್ರಸಿದ್ಧ ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮದ ಫೈನಲ್‌ನ ಕೆಲವು ತುಣುಕುಗಳು.

ಜೀ ಕನ್ನಡದ ಸರಿಗಮಪ ಲಿಟ್ಲ್ ಚಾಂಪ್ಸ್ ಕರ್ನಾಟಕದ ನಂ ಒನ್ ಮ್ಯೂಸಿಕಲ್ ರಿಯಾಲಿಟಿ ಶೋ ಆಗಿ ಪ್ರಸಿದ್ಧವಾಗಿದೆ. ಕರ್ನಾಟಕದ ಕಿರುತೆರೆಯಲ್ಲಿ ಬಾರಿ ಸಂಚಲವನ್ನುಂಟು ಮಾಡಿದ ಸರಿಗಮಪ ಲಿಟ್ಲ್ ಚಾಂಪ್ಸ್ ಈಗ ಫೈನಲ್ ಹಂತವನ್ನು ತಲುಪಿದ್ದು ಏಪ್ರಿಲ್ 6ರಂದು ಸಂಜೆ 5 ಗಂಟೆಗೆ ಫೈನಲ್ ಹಣಾಹಣಿಯ ಸಂಚಿಕೆ ಪ್ರಸಾರವಾಗಲಿದೆ. ಈ ಸಂಚಿಕೆಗೆ ನಿರ್ಣಾಯಕರಾಗಿ ಖ್ಯಾತ ಗಾಯಕಿ ಕವಿತಾ ಕೃಷ್ಣಮೂರ್ತಿ ಹಾಗೂ ರಾಜೇಶ್ ಕೃಷ್ಣನ್ ಭಾಗವಹಿಸಲಿದ್ದು ಬೆಂಗಳೂರಿನ ಓಹಿಲೇಶ್ವರಿ, ಸಹನಾ, ಅಜಯ್ ಮತ್ತು ಆದರ್ಶ ಫೈನಲ್ ಹಂತಕ್ಕೆ ತಲುಪಿದವರಾಗಿದ್ದಾರೆ.

'ಸರಿಗಮಪ' ಲಿಟ್ಲ್ ಚಾಂಪ್ಸ್ ಕಾರ್ಯಕ್ರಮಕ್ಕೆ ಮೊದಲು ಕರ್ನಾಟಕದಾದ್ಯಂತದಿಂದ ಸುಮಾರು 1220 ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪುಟಾಣಿ ಪ್ರತಿಭೆಗಳಲ್ಲಿ 64 ಪುಟಾಣಿಗಳನ್ನು ಮೊದಲ ಹಂತದಲ್ಲಿ ರಾಜು ಅನಂತಸ್ವಾಮಿ ಮತ್ತು ಸುಮಾ ಶಾಸ್ತ್ರಿ ಅವರು ಆಯ್ಕೆ ಮಾಡಿದರು. ಮುಂದಿನ ಹಂತದಲ್ಲಿ ಗಾಯಕಿ ಬಿ.ಜಯಶ್ರೀ ಮತ್ತು ಹೇಮಂತಕುಮಾರ ಅವರು ಇವರಲ್ಲಿ 9 ಹುಡುಗ ಹಾಗೂ 9 ಹುಡುಗಿಯರನ್ನು ಆಯ್ಕೆ ಮಾಡಿದ್ದರು. ಈಗ ಇವರಲ್ಲಿ ಫೈನಲ್‌ಗೆ ನಾಲ್ವರು ತಲುಪಿದ್ದಾರೆ. ಫೈನಲ್ ಹಂತಕ್ಕೆ ತಲುಪಿರುವ ಪ್ರತಿಯೊಬ್ಬರೂ ಉತ್ತಮ ಹಾಡುಗಾರರಾಗಿದ್ದು ಇವರಲ್ಲಿ ಯಾರು ಲಿಟ್ಲ್ ಚಾಂಪ್ಸ್ ? ಎಂಬ ಎಲ್ಲರ ಕಾತರದ ಪ್ರಶ್ನೆಗೆ ಏಪ್ರಿಲ್ 6 ಸಂಚಿಕೆಯಲ್ಲಿ ಉತ್ತರ ದೊರೆಯಲಿದೆ. ಫೈನಲ್ಸ್ ನಲ್ಲಿ ಗೆಲ್ಲುವ ಅತ್ಯುತ್ತಮ ಗಾಯಕ ಹಾಗೂ ಗಾಯಕಿಗೆ ತಲಾ 2.5 ಲಕ್ಷ ರೂ ವೆಚ್ಚದ ಶಿಕ್ಷಣವೇತನ ದೊರೆಯಲಿದೆ. ರನ್ನರ್ ಅಪ್ ಆದ ಇಬ್ಬರು ಪುಟಾಣಿಗಳಿಗೂ ಕೂಡ ತಲಾ 1.25 ಲಕ್ಷ ರೂ ವೊತ್ತದ ಶಿಕ್ಷಣ ವೇತನ ಕೊಡಲಾಗುತ್ತಿರುವುದು ವಿಶೇಷ.

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada