ದರ್ಶನ್ ಅಭಿನಯದ 'ಚಿಂಗಾರಿ' ಧ್ವನಿಸುರುಳಿ ವಿಮರ್ಶೆ
ದರ್ಶನ್ ನಾಯಕತ್ವದ ಬಹುನಿರೀಕ್ಷೆಯ ಚಿತ್ರ 'ಚಿಂಗಾರಿ' ಆಡಿಯೋ ಬಿಡುಗಡೆ ನಿನ್ನೆ (ಜನವರಿ 02, 2012) ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಹೊಟೇಲ್ 'ಗೋಲ್ಡ್ ಪಿಂಚ್' ನಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಕಿಚ್ಚ 'ಸುದೀಪ್' ಆಗಮಿಸಿದ್ದು ವಿಶೇಷವಾಗಿತ್ತು. ಹಾಡುಗಳು ಮಾಸ್ ಮತ್ತು ಕ್ಲಾಸ್ ಗೀತೆಗಳ ಮಿಶ್ರಣ.
ಚಿಂಗಾರಿ ಚಿತ್ರದ ಧ್ವನಿಮುದ್ರಿಕೆಯಲ್ಲಿ ಒಟ್ಟೂ 5 ಹಾಡುಗಳಿದ್ದು ಅವುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಗೂ ಕವಿರಾಜ್ ಸಾಹಿತ್ಯವಿದೆ. ಚಿತ್ರಕ್ಕೆ ಸಂಗೀತ ನೀಡಿರುವ ಹರಿಕೃಷ್ಣ ಹಾಡುಗಳಿಗೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಯೋಗರಾಜ್ ಭಟ್ಟರ ಸಾಹಿತ್ಯವಿರುವ ಹಾಡನ್ನು ಸ್ವತಃ ಹರಿಕೃಷ್ಣ ಹಾಡಿದ್ದಾರೆ.
1. 'ತಲೆಕೆಟ್ಟ ಭಟ್ಟ ಯಬಡಾ...' ಎಂಬ ಗೀತೆಗೆ ಯೋಗರಾಜ್ ಭಟ್ ಸಾಹಿತ್ಯ ನೀಡಿದ್ದು 'ಕೈ ಕೈಯ್ಯಾ' ಎಂಬ ಕೋರಸ್ ನೊಂದಿಗೆ ಹಾಡು ಪ್ರಾರಂಭವಾಗುತ್ತದೆ. ಯಂಗ್ ಜನರೇಶನ್ ಹಾಗೂ ಕಮರ್ಷಿಯಲ್ ಪ್ರೇಕ್ಷಕರನ್ನು ಕೇಂದ್ರೀಕರಿಸಿದ ಹಾಡು ಇದಾಗಿದೆ. ಸಾಹಿತ್ಯ ಹಾಗು ಸಂಗೀತದಲ್ಲಿ 'ಧಮ್' ಇದ್ದು ಗಮನಸೆಳೆಯುವಂತಿದೆ. ಬಿಡುಗಡೆಯಾದ ತಕ್ಷಣ ಅಲ್ಲಿದ್ದವರೆನ್ನೆಲ್ಲಾ ಗಮನಸೆಳೆದದ್ದು ಈ ಗೀತೆ ಮಾತ್ರ.
2. 'ಗಮನವ...' ಎಂಬ ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ಶ್ರೇಯಾ ಘೋಷಾಲ್ ಮತ್ತು ಜಾವಿದ್ ಅಲಿ ಧ್ವನಿಯಾಗಿದ್ದು ಇದೊಂದು ಮಾಧುರ್ಯ ಪ್ರಧಾನ ಗೀತೆಯಾಗಿದೆ. ಸಾಹಿತ್ಯ ಸಂಗೀತ ಚೆನ್ನಾಗಿದ್ದು ಶ್ರೇಯಾ ಹಾಗೂ ಜಾವಿದ್ ಧ್ವನಿ ಮತ್ತೆ ಮತ್ತೆ ಕೇಳಬೇಕು ಎನಿಸುವಂತಿದೆ.
3. 'ನೀ ಮಿಡಿಯುವೆ...' ಗೀತೆಗೆ ಕವಿರಾಜ್ ಸಾಹಿತ್ಯವಿದ್ದು ಸೌಮ್ಯ ಮಹದೇವನ್ ಹಾಡಿದ್ದಾರೆ. ಸಾಹಿತ್ಯ, ಸಂಗೀತ ಹಾಗೂ ಹಿನ್ನೆಲೆ ಗಾಯನ ಮೂರೂ ಪರವಾಗಿಲ್ಲ. ಆದರೆ ಮಾಧುರ್ಯವಾಗಲೀ ಧಮ್ ಆಗಲೀ ಅಷ್ಟಾಗಿಲ್ಲ.
4. 'ಬಾರೆ ಬಾರೆ...' ಇದು ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಹಾಡು. ಮೋಡಿ ಮಾಡುವ ಕೈಲಾಷ್ ಖೇರ್ ಧ್ವನಿಯಲ್ಲಿ ಈ ಹಾಡು ಚೆನ್ನಾಗಿ ಮೂಡಿಬಂದಿದೆ. 'ಗಝಲ್' ರೀತಿಯ ಈ ಹಾಡು ವಿಭನ್ನ ಅಭಿರುಚಿಯ ಕೆಲವು ಜನರಿಗೆ ಅತಿಯಾಗಿ ಇಷ್ಟವಾದರೂ ಅಚ್ಚರಿಯಿಲ್ಲ.
5. 'ಚಿಂಗಾರಿ ಥೀಮ್...' ಹಾಡು ಧ್ವನಿಮುದ್ರಿಕೆಯ ಕೊನೆಯಲ್ಲಿದ್ದು ಚಿತ್ರಕ್ಕೆ ಪೂರಕವಾಗಿರಬಹುದು. ಆಡಿಯೋ ಕೇಳುವಾಗ ಇದು ಶ್ರೋತ್ರುಗಳ ಗಮನವನ್ನೇನೂ ಸೆಳೆಯುವುದಿಲ್ಲ.
ಒಟ್ಟಿನಲ್ಲಿ ಚಿಂಗಾರಿ ಹಾಡುಗಳು ಮಾಸ್-ಕ್ಲಾಸ್ ಮಿಶ್ರಣವಾಗಿದ್ದು ಕೇಳುವುದಕ್ಕೆ ಹಿತವಾಗಿದೆ, ಬೋರ್ ಹೊಡೆಸುವಂತಿಲ್ಲ ಎಂದೆನ್ನಬಹುದು. ಸಾಹಸ ಪ್ರಧಾನವಾದ ಚಿತ್ರವಾದ್ದರಿಂದ ಹಾಡುಗಳು ಹಿತಮಿತವಾಗಿದ್ದು, ಹಾಡುಗಳ ಬಗ್ಗೆ ಅತಿಯಾದ ಆಸಕ್ತಿಯನ್ನು ಚಿತ್ರತಂಡ ವಹಿಸಿಲ್ಲ ಎಂದು ಧಾರಾಳವಾಗಿ ಹೇಳಬಹುದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











