ಗಂಡುಮೆಟ್ಟಿದ ನೆಲದಲ್ಲಿ ಮೈಲಾರಿ ಆಡಿಯೋ ಬಿಡುಗಡೆ
ಗಂಡುಮೆಟ್ಟಿದ ನೆಲ ಚಿತ್ರದುರ್ಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮೈಲಾರಿ' ಚಿತ್ರ ಧ್ವನಿಸುರುಳಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನವೇ 'ಮೈಲಾರಿ' ಆಡಿಯೋ ದಾಖಲೆ ನಿರ್ಮಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಚಿತ್ರದುರ್ಗದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಿಕ್ಕಿರಿದ ಜನ ಸಂದಣಿ ನಡುವೆ ನವೆಂಬರ್ 30ರಂದು 'ಮೈಲಾರಿ' ಆಡಿಯೋ ಲೋಕಾರ್ಪಣೆಗೊಂಡಿತು. ಆನಂದ್ ಆಡಿಯೋ ಹೊರತಂದಿರುವ 'ಮೈಲಾರಿ' ಧ್ವನಿಸುರುಳಿಗೆ ಈಗಾಗಲೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಮಾರಂಭದಲ್ಲಿ ಶಿವರಾಜ್ ಕುಮಾರ್, ಸೂಪರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸದಾ, ಸಂಜನಾ, ಗೀತಾ ಶಿವರಾಜ್ ಕುಮಾರ್, ಮಂಗಳಾ ರಾಘವೇಂದ್ರ ರಾಜ್ ಕುಮಾರ್, ಚಿತ್ರದ ನಿರ್ದೇಶಕ ಆರ್ ಚಂದ್ರು, ಸಂಗೀತ ನಿರ್ದೇಶಕ ಗುರುಕಿರಣ್, ಮಾಧಾರ ಚೆನ್ನಯ್ಯ ಸ್ವಾಮೀಜಿ, ಶಾಸಕ ನೆ.ಲ.ನರೇಂದ್ರ ಬಾಬು ಹಾಗೂ ಸ್ಥಳೀಯ ಶಾಸಕ ಎಸ್ ಕೆ ಬಸವರಾಜು ಉಪಸ್ಥಿತರಿದ್ದರು.
ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ ಮಾತನಾಡುತ್ತಾ, ಮೈಲಾರಿ ಚಿತ್ರದ ಶತದಿನೋತ್ಸವ ಸಂಭ್ರಮವನ್ನು ಚಿತ್ರದುರ್ಗದಲ್ಲೇ ಆಚರಿಸುವುದಾಗಿ ತಿಳಿಸಿದರು. 'ಜೋಗಿ' ಧ್ವ್ವನಿಸುರುಳಿ ಬಿಡುಗಡೆಯಾದ ನೆಲದಲ್ಲೆ 'ಮೈಲಾರಿ' ಆಡಿಯೋ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದು ಶಿವಣ್ಣ ಹೇಳಿದರು.
ಶಿವರಾಜ್ ಕುಮಾರ್ ಅವರು ನನ್ನ ಪಾಲಿನ ಲಕ್ಕಿ ಸ್ಟಾರ್ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಬಣ್ಣಿಸಿದರು. ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದದ್ದು ಪುನೀತ್ ರಾಜ್ ಕುಮಾರ್. 'ಮೈಲಾರಿ' ಚಿತ್ರದ ಒಂದು ಹಾಡನ್ನು ಪುನೀತ್ ಹಾಡಿರುವುದು ವಿಶೇಷ.


Click it and Unblock the Notifications











