»   » ಉಗ್ರಗಾಮಿಗೆ ಗೋಡ್ಖಿಂಡಿ ಏಕವ್ಯಕ್ತಿ ಸಂಗೀತ

ಉಗ್ರಗಾಮಿಗೆ ಗೋಡ್ಖಿಂಡಿ ಏಕವ್ಯಕ್ತಿ ಸಂಗೀತ

Posted By:
Subscribe to Filmibeat Kannada
Praveen Godkhindi One man Show
'ಶಾಂತಿ" ಚಿತ್ರದಲ್ಲಿ ಏಕವ್ಯಕ್ತಿ ಅಭಿನಯದ ಮೂಲಕ ಬರಗೂರು ರಾಮಚಂದ್ರಪ್ಪ ಗಿನ್ನೆಸ್ ದಾಖಲೆ ಮಾಡಿದ್ದರು. ಉಗ್ರಗಾಮಿ ಚಿತ್ರವೂ ಇಂಥದೊಂದು ದಾಖಲೆಯ ಪ್ರಯತ್ನದಲ್ಲಿದೆ. ಅದು ಸಂಗೀತಕ್ಕೆ ಸಂಬಂಧಿಸಿದ ದಾಖಲೆ.

ಸಿನಿಮಾ ಸಂಗೀತ ಎನ್ನುವುದು ಸಾಮೂಹಿಕ ಪ್ರತಿಭಾ ಪ್ರದರ್ಶನ. ಆದರೆ, 'ಉಗ್ರಗಾಮಿ"ಯಲ್ಲಿ ಸಂಗೀತ ನಿರ್ದೇಶಕ ಪ್ರವೀಣ್ ಗೋಡ್ಖಿಂಡಿ ಸಂಗೀತದ ಎಲ್ಲಾ ವಿಭಾಗಗಳನ್ನೂ ಏಕಾಂಗಿಯಾಗಿ ನಿರ್ವಹಿಸಿದ್ದಾರೆ. ಇದೊಂದು ರೀತಿ ಸರ್ಕಸ್ ಅಲ್ಲವಾ ಎನ್ನುವ ಪ್ರಶ್ನೆಗೆ ಪ್ರವೀಣ್ ಅವರದ್ದು 'ಅಲ್ಲ" ಎನ್ನುವ ಸ್ಪಷ್ಟ ಉತ್ತರ.

ಈ ಚಿತ್ರಕ್ಕೆ ಹೆಚ್ಚು ವಾದ್ಯಗಳ ಅಗತ್ಯವಿರಲಿಲ್ಲ. ಶಾಸ್ತ್ರೀಯ ರಾಗಗಳ ಆಧಾರದಲ್ಲಿ ಸಂಗೀತ ಚಿತ್ರಕ್ಕೆ ಹೊಂದಿಕೊಳ್ಳುತ್ತದೆ ಅನ್ನಿಸಿತು. ಆ ಕಾರಣಕ್ಕೆ ಏಕವ್ಯಕ್ತಿ ಪ್ರದರ್ಶನಕ್ಕೆ ಮುಂದಾದೆ. ಇದೊಂದು ಪ್ರಯೋಗ ಅಷ್ಟೇ ಎಂದರು ಗೋಡ್ಖಿಂಡಿ. ಅಂದಹಾಗೆ, ಈ ಚಿತ್ರಕ್ಕಾಗಿ ಅವರು ಕೊಳಲು ನುಡಿಸಿದ್ದಾರೆ, ತಬಲಾ ಬಾರಿಸಿದ್ದಾರೆ. ಕೀಬೋರ್ಡ್ ನುಡಿಸಿರುವುದು ಕೂಡ ಅವರೇ. ಚಿತ್ರದಲ್ಲಿ ಹಾಡುಗಳಿಲ್ಲ. ಕೆಲವೆಡೆ ಆಲಾಪಗಳಿವೆ. ಶಾಸ್ತ್ರೀಯ ಸಂಗೀತದಲ್ಲಿ ಪಳಗಿರುವ ಅವರಿಗೆ ಆಲಾಪಗಳಿಗೆ ಕೊರಳಾಗುವುದು ಸುಖದ ಸಂಗತಿ ಅನ್ನಿಸಿದೆ.

ಮೊದಲೆಲ್ಲ ಸಿನಿಮಾ ಸಂಗೀತ ಅಂದರೆ ಹಿಂದೆಮುಂದೆ ನೋಡುತ್ತಿದ್ದ ಗೋಡ್ಖಿಂಡಿ ಈಚೆಗೆ ಹೆಚ್ಚು ಸಿನಿಮಾ ಒಪ್ಪಿಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ. 'ವೆಂಕಟ ಇನ್ ಸಂಕಟ" ಅವರ ಸಂಗೀತ ನಿರ್ದೇಶನದ ಮತ್ತೊಂದು ಚಿತ್ರ. ರಮೇಶ್ ಅರವಿಂದ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲೂ ಪ್ರವೀಣ್ ಪ್ರಯೋಗ ಮುಂದುವರಿಯಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada