»   » ಗಡಿಜಿಲ್ಲೆಯಲ್ಲಿ ಸೋನು ನಿಗಮ್ ಸಂಗೀತ ಸಂಜೆ

ಗಡಿಜಿಲ್ಲೆಯಲ್ಲಿ ಸೋನು ನಿಗಮ್ ಸಂಗೀತ ಸಂಜೆ

Posted By:
Subscribe to Filmibeat Kannada

ಜಯಂತ್ ಕಾಯ್ಕಿಣಿ ಸಾಹಿತ್ಯದ ಯಶಸ್ವಿ ಪ್ರಸಾರಕರ್ತರಾಗಿ, ಮನೋಮೂರ್ತಿ ಅವರ ಹಾಡುಗಳ ದನಿಯಾಗಿ ಹೊರಹೊಮ್ಮಿದ ಸೋನು ನಿಗಮ್ ಪರಭಾಷಾ ಗಾಯಕ ಅನ್ನಿಸದಷ್ಟು ಕನ್ನಡದಲ್ಲಿ ನೆಲೆಕಂಡುಕೊಂಡಿದ್ದಾರೆ. ಕನ್ನಡ ನೆಲದಲ್ಲಿ ತಮ್ಮದೇ ಆದಂತಹ ಧ್ವನಿಯನ್ನು ಹೊಮ್ಮಿಸಿದ್ದಾರೆ. ಉಚ್ಛಾರ ದೋಷವಿಲ್ಲದ, ಅವರ ಕಂಠದಿಂದ ಹೊರಹೊಮ್ಮುವ ಸುಶ್ರಾವ್ಯ ಕನ್ನಡ ಹಾಡುಗಳು ಕನ್ನಡಿಗರನ್ನು ಬಹಳಷ್ಟು ಸೆಳೆದಿವೆ. ನಾಳೆ (ಮಾ.4) ಸೋನು ಅವರ ಇಂಪಿನ ಸೋನೆ ಮಳೆ ಬೆಳಗಾವಿಯಲ್ಲಿ ಸುರಿಯಲಿದೆ.

ಸೋನು ನಿಗಮ್ ಅವರ ಬೃಹತ್ ಸಂಗೀತ ಸಂಜೆ ಕಾರ್ಯಕ್ರಮವನ್ನು ಇಲ್ಲಿನ ಜೈನ್ ಸಮೂಹ ಆಯೋಜಿಸಿದೆ. ಮಾ.4ರ ಸಂಜೆ 6.30ರಿಂದ 9.30ರವರೆಗೆ ಸಂಗೀತ ಸಂಜೆ . ಟಿಕೆಟ್ ದರ 200 ರೂ.ಗಳಿಂದ 2,500 ರೂ., ಟಿಕೆಟ್ ದರದಿಂದ ಸಂಗ್ರಹವಾದ ಹಣದಿಂದ ಬರುವ 5 ರಿಂದ 10 ವರ್ಷಗಳಲ್ಲಿ ದೇಶದಾದ್ಯಂತ 100 ವಿದ್ಯಾನಿಕೇತನ್ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಜೈನ್ ಸಂಸ್ಥೆಗಳ ಟ್ರಸ್ಟ್‌ನ ನಿರ್ದೇಶಕರಾದ ರಾಧೇ ಶಾಮ್ ಹೇಡಾ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಮೂಲಕ 25 ರಿಂದ 30 ಲಕ್ಷ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಜೈನ್ ವಿದ್ಯಾ ಸಂಸ್ಥೆಗಳ ಸಮೂಹ ಹೊಂದಿದೆ. 2009-10ನೇ ಸಾಲಿನಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು. ಶಾಲೆಯಿಂದ 20 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಎಲ್ಲೋ ಅಲ್ಲೊಂದು ಇಲ್ಲೊಂದು ಕರಾವಳಿ ಉತ್ಸವದಂತಹ ಹಬ್ಬಗಳನ್ನು ಹೊರತುಪಡಿಸಿದರೆ ಸಾಮಾನ್ಯವಾಗಿ ಪರಭಾಷಾ ಗಾಯಕ, ಗಾಯಕಿಯರು ಹಾಡಲು ಬರುವುದು ಬೆಂಗಳೂರಿನಂತಹ ನಗರಗಳಿಗೆ ಮಾತ್ರ. ಬಂದವರು ಹಿಂದಿ ಹಾಡುಗಳನ್ನು ಪ್ರಸ್ತುತಪಡಿಸಿ ಹಾಗೇ ಮಾಯವಾಗುತ್ತಾರೆ. ಬೆಂಗಳೂರು ಬಿಟ್ಟರೆ ಮಿಕ್ಕ ಕರ್ನಾಟಕದ ಪ್ರದೇಶಗಳಿಗೆ ಗಾಯಕರು ಲಭ್ಯವಾಗುವುದು ತೀರಾ ಕಡಿಮೆ. ಕನ್ನಡದ ನೆಲದಲ್ಲಿ ಇದೇ ಪ್ರಥಮ ಬಾರಿಗೆ ಸಂಗೀತ ಸಂಜೆಯಲ್ಲಿ ಸೋನು ನಿಗಮ್ ಹಾಡಲಿದ್ದಾರೆ. ಅವರನ್ನು ಜನಪ್ರಿಯ ಗೊಳಿಸಿದ ಸುಪ್ರಸಿದ್ಧ ಕನ್ನಡ ಹಾಡುಗಳನ್ನು ಹಾಡಲಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada