»   » ಭಾನುವಾರ, ಸೋಮವಾರ ಎಲ್ಲ ವಾರ ಬಿಂದಾಸ್

ಭಾನುವಾರ, ಸೋಮವಾರ ಎಲ್ಲ ವಾರ ಬಿಂದಾಸ್

Posted By:
Subscribe to Filmibeat Kannada

ಬೆಂಗಳೂರು, ಜ.3: ಗುರುಕಿರಣ್ ಸಂಗೀತ ಸಂಯೋಜಿಸಿರುವ 'ಬಿಂದಾಸ್' ಚಿತ್ರದ ಆಡಿಯೋ ಮತ್ತು ಸಿಡಿ ಬಿಡುಗಡೆ ಸಮಾರಂಭವು ಚಾನ್ಸರಿ ಹೋಟೆಲ್‌ನಲ್ಲಿ ಬುಧವಾರ (ಜ.2) ನಡೆಯಿತು. ಕುಮಾರತ್ರಯರ ಸಮ್ಮುಖದಲ್ಲಿ ಬಿಂದಾಸ್ ಆಡಿಯೋ ಬಿಡುಗಡೆಯಾಯಿತು.

ಬಿಂದಾಸ್ ಆಡಿಯೋ ಹಾಗೂ ಸಿಡಿ ಬಿಡುಗಡೆ ಮಾಡಿದ ರಾಘವೇಂದ್ರ ರಾಜ್‌ಕುಮಾರ್ ಸಿನಿಮಾ ಹಾಗೂ ಚಿತ್ರದ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಚಿತ್ರ ಖಂಡಿತ ಗೆಲ್ಲುತ್ತದೆ ಎಂದರು.

ಡಿ. ರಾಜೇಂದ್ರ ಬಾಬು ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ನನಗೆ ತುಂಬಾ ಖುಷಿಕೊಟ್ಟಿದೆ ಎಂದರು ಪುನೀತ್. ರಾಜೇಂದ್ರ ಬಾಬು ಹಾಗೂ ಪುನೀತ್ ಜೋಡಿಯಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ ಬಿಂದಾಸ್. ಕತೆ, ಚಿತ್ರಕತೆ, ಹಾಡು ಎಲ್ಲವೂ ಅದ್ಭುತವಾಗಿರುವುದರಿಂದ ಚಿತ್ರ ಬಿಂದಾಸ್ ಆಗಿರುತ್ತದೆ ಎಂದು ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ತಿಳಿಸಿದರು.

ಕಣ್ಣೀರ ಕತೆಗಳಿಗೆ ಹೆಸರಾಗಿದ್ದ ಡಿ. ರಾಜೇಂದ್ರ ಬಾಬು ಬಹಳ ದಿನಗಳ ನಂತರ ಯುವಕರಿಗೆ ಸಂಬಂಧಿಸಿದ ನವಕತೆಯನ್ನು ಕೈಗೆತ್ತಿಕೊಂಡಿದ್ದಾರೆ. ಪುನೀತ್‌ರೊಂದಿಗೆ ಕೆಲಸ ಮಾಡುತ್ತಿರುವುದು ನಿಜಕ್ಕೂ ತುಂಬಾ ಸಂತೋಷಕೊಟ್ಟಿದೆ. ಬಿಂದಾಸ್ ಉತ್ತಮ ಚಿತ್ರಕತೆ ಹೊಂದಿರುವುದು ಹಾಗೂ ಚಿತ್ರದಲ್ಲಿ ಬಹುತೇಕ ಯುವಕರೇ ತುಂಬಿರುವುದರಿಂದ ಚಿತ್ರ ಖಂಡಿತಾ ಗೆಲ್ಲುತ್ತದೆ ಎಂಬ ಆಶಾಭಾವ ರಾಜೇಂದ್ರ ಬಾಬು ಅವರದು. ಸಿನಿಮಾದ ಹಾಡುಗಳನ್ನು ವಿದೇಶಗಳ ಸುಂದರ ತಾಣಗಳಲ್ಲಿ ಚಿತ್ರೀಕರಿಸಿದ್ದೇವೆ. ನಿರ್ಮಾಪಕರಾದ ಚಂದ್ರಶೇಖರ್ ಖರ್ಚು ಮಾಡಲು ಹಿಂದೆ ಮುಂದೆ ನೋಡಿಲ್ಲ. ಈ ಚಿತ್ರದಿಂದ ಪುನೀತ್ ರಾಜ್‌ಕುಮಾರ್ ಅವರ ತಾರಾ ಪಟ್ಟ ಮತ್ತಷ್ಟು ಎತ್ತರಕ್ಕೆ ಏರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎಂದರು ರಾಜೇಂದ್ರ ಬಾಬು.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada