»   » ಬಾನಂಗಳದಲ್ಲಿ ಮೇಘವೇ ಧ್ವನಿಸುರುಳಿ ಬಿಡುಗಡೆ

ಬಾನಂಗಳದಲ್ಲಿ ಮೇಘವೇ ಧ್ವನಿಸುರುಳಿ ಬಿಡುಗಡೆ

Subscribe to Filmibeat Kannada

ಒಟ್ಟಿಗೆ ಒಂದೇ ಚಿತ್ರದ ಧ್ವನಿಸುರುಳಿ ಹಾಗೂ ಅಂತರ್ಜಾಲ ತಾಣವನ್ನು ವಿಮಾನದಲ್ಲಿ ತೇಲುತ್ತಾ ಬಿಡುಗಡೆ ಮಾಡಿದ ದಾಖಲೆ ಹುಡುಕಿದರೂ ಭಾರತೀಯ ಚಿತ್ರರಂಗದಲ್ಲಿ ಕಾಣಿಸುವುದಿಲ್ಲ. ಆದರೆ ಕನ್ನಡ ಚಿತ್ರ 'ಮೇಘವೇ ಮೇಘವೇ' ಆ ರೀತಿಯ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಿದೆ. ನಿರ್ಮಾಪಕ ರಘುಕುಮಾರ್ ಮತ್ತು ನಿರ್ದೇಶಕ ಡಾ.ವಿ.ನಾಗೇಂದ್ರಪ್ರಸಾದ್ 35 ಸಾವಿರ ಅಡಿ ಎತ್ತರದಲ್ಲಿ ಮೇಘಗಳ ನಡುವೆ 'ಮೇಘವೇ ಮೇಘವೆ' ಚಿತ್ರದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿ ಇಡೀ ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಕಂಡರಿಯದ ದಾಖಲೆಯನ್ನು ಗುರುವಾರ ನಿರ್ಮಿಸಿದ್ದಾರೆ.

ಮಾಜಿ ಸಾರಿಗೆ ಸಚಿವ ಚೆಲುವರಾಯಸ್ವಾಮಿ, ಪ್ರವಾಸೋದ್ಯಮ ನಿರ್ದೇಶಕ ಸಿ.ಸೋಮಶೇಖರ್ 'ಮೇಘವೇ...' ಧ್ವನಿಸುರುಳಿಯನ್ನ್ನು ಬಿಡುಗಡೆ ಮಾಡಿದರು. ಈ ಬಿಡುಗಡೆ ಕಾರ್ಯಕ್ರಮಕ್ಕೆ 1ಗಂಟೆ ಕಾಲ ಏರ್‍ಡೆಕ್ಕನ್ ವಿಮಾನವನ್ನು ಬಾಡಿಗೆಗೆ ಪಡೆಯಲಾಗಿತ್ತು. ಇದೇ ಮೊದಲ ಬಾರಿಗೆ ಲಗಾನ್ ಹಾಗೂ ಮುನ್ನಭಾಯ್ ಹಿಂದಿ ಚಿತ್ರಗಳ ನಾಯಕಿ ಗ್ರೇಸಿ ಸಿಂಗ್ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಧ್ವನಿಸುರುಳಿ ಬಿಡುಗಡೆಯ ನಂತರ ಪುನೀತ್ ರಾಜ್‌ಕುಮಾರ್ ಗುಂಡಿ ಒತ್ತಿ 'ಮೇಘವೇ ಮೇಘವೇ' ಅಂತರ್ಜಾಲ ತಾಣವನ್ನು ಲೋಕಾರ್ಪಣೆ ಮಾಡಿದರು. ಈ ವಿಶಿಷ್ಟ ಧ್ವನಿಸುರುಳಿ ಹಾಗೂ ಅಂತರ್ಜಾಲ ತಾಣ ಬಿಡುಗಡೆ ಕಾರ್ಯಕ್ರಮ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.

ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಪ್ರಥಮ ಶತಕವನ್ನು ದಾಖಲಿಸಿದ್ದು, ಮೈಕೇಲ್ ಏಂಜಲೋ ಹುಟ್ಟಿದ್ದು, ಪ್ರಪ್ರಥಮ ಬಾರಿಗೆ ಮಹಿಳೆಯೊಬ್ಬರು ಬಾಹ್ಯಾಕಾಶಕ್ಕೆ ಹಾರಿದ್ದು, ರಾಣಿ ಎಲಿಜೆಬೆತ್ ಅಂತರ್ಜಾಲ ತಾಣ ಬಿಡುಗಡೆಯಾಗಿದ ಪುಂಖಾನು ಪುಂಖ ಘಟನೆಗಳೆಲ್ಲಾ ನಡೆದದ್ದು ಮಾರ್ಚ್ 6ರಂದೇ. ಹಾಗಾಗಿ ಮಾ.6ನ್ನು ನಿರ್ದೇಶಕ ಮತ್ತು ಬರಹಗಾರ ಡಾ.ವಿ.ನಾಗೇಂದ್ರ ಪ್ರಸಾದ್ ಜಾಣ್ಮೆಯಿಂದ ಆಯ್ಕೆ ಮಾಡಿಕೊಂಡಿದ್ದರು.

ಕನ್ನಡ ಚಲನಚಿತ್ರ ನಿರ್ಮಾಪಕರಾದ ಸಾ.ರಾ.ಗೋವಿಂದು, ರಮೇಶ್ ಯಾದವ್, ಕೆಸಿಎನ್ ಚಂದ್ರು, ಕೆ.ಎಸ್.ಎಲ್.ಸ್ವಾಮಿ ಮತ್ತವರ ಪತ್ನಿ ಬಿ.ವಿ.ರಾಧ, ಮಾಜಿ ಶಾಸಕ ಸುರೇಶ್ ಬಾಬು ವಿಮಾನದಲ್ಲಿ ಹಾಜರಿದ್ದರು. ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾರಣಾಂತರಗಳಿಂದ ಬರಲಿಲ್ಲ. ಧ್ವನಿಸುರುಳಿಯನ್ನು ಈ ರೀತಿ ಬಿಡುಗಡೆ ಮಾಡಬೇಕು ಎಂಬುದು ನಾಗೇಂದ್ರ ಪ್ರಸಾದ್ ಅವರ ಕನಸಾಗಿತ್ತು. ಆ ಕನಸನ್ನು 'ಮೇಘವೇ...' ಚಿತ್ರದ ನಿರ್ದೇಶಕ ರಘುಕುಮಾರ್ ನನಸು ಮಾಡಿದರು.

ಪ್ರಪಂಚದಲ್ಲಿ ಯಾರೂ ಮಾಡದ ಈ ರೀತಿಯ ವಿಶಿಷ್ಟ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ನಿರ್ಮಾಪಕ ರಘುಕುಮಾರ್ ಹಾಗೂ ನಿರ್ದೇಶಕ ನಾಗೇಂದ್ರ ಪ್ರಸಾದ್ ಮಾಡಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತಿದ್ದೇನೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು. 'ಮೇಘವೇ...' ಚಿತ್ರ ಆಕಾಶದ ಎತ್ತರಕ್ಕೆ ಏರಿ ಅಷ್ಟೇ ಖ್ಯಾತಿ ತರಲಿ ಎಂದು ಪುನೀತ್ ರಾಜ್‌ಕುಮಾರ್ ಹಾರೈಸಿದರು.

ಏರ್ ಡೆಕ್ಕನ್ ವಿಮಾನ ಮಧ್ಯಾಹ್ನ 2.30ಕ್ಕೆ ಆಕಾಶಕ್ಕೆ ನೆಗೆಯಬೇಕಾಗಿತ್ತು. ಎರಡು ಗಂಟೆ ಹದಿನೈದು ನಿಮಿಷ ತಡವಾಗಿ ಅದು ಆಕಾಶಕ್ಕೆ ಜಿಗಿಯಿತು. ಒಟ್ಟಾರೆಯಾಗಿ ಈ ವಿಶಿಷ್ಟ ಧ್ವನಿಸುರುಳಿ ಕಾರ್ಯಕ್ರಮಕ್ಕೆ ಬರೋಬ್ಬರಿ 20 ಲಕ್ಷ ರೂ. ಖರ್ಚು ಮಾಡಲಾಗಿದೆಯಂತೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada