twitter
    For Quick Alerts
    ALLOW NOTIFICATIONS  
    For Daily Alerts

    ಬಾರ್ ಬಾರ್ ರಫಿಗೆ ತಲೆದೂಗಿದ ಬೆಂಗಳೂರು

    By * ಸರಸ್ವತಿ, ಬೆಂಗಳೂರು
    |

    Mohammed Rafi
    ಬೆಂಗಳೂರು, ಜು. 3 : ಭಾರತೀಯ ಚಿತ್ರರಂಗ ಕಂಡ ಅನುಪಮ ಗಾಯಕ ಮೊಹಮ್ಮದ್ ರಫಿ ಅವರ 29ನೇ ಪುಣ್ಯತಿಥಿ(ಜುಲೈ 31)ಯನ್ನು ಗಾನ ಭಕ್ತಿ ಮತ್ತು ರಾಗಶ್ರದ್ಧೆಯಿಂದ ಬೆಂಗಳೂರಿನಲ್ಲಿ ಆಚರಿಸಲಾಯಿತು. ಆಗಸ್ಟ್ 1ರ ಶನಿವಾರ ಸಂಜೆ ಕೃಷ್ಣರಾಜ ರಸ್ತೆ ಗಾಯನ ಸಮಾಜದಲ್ಲಿ ಹಿಂದಿ ಚಲನಚಿತ್ರ ಸಂಗೀತಪ್ರಿಯರು ರಫಿ ಗಾನ ಮಾಧುರ್ಯದಲ್ಲಿ ಮಿಂದೆದ್ದರು. ಅದೊಂದು ಅಪೂರ್ವ ಕಾರ್ಯಕ್ರಮ.

    ಮೊಹಮ್ಮದ್ ರಫಿ ಅವರ ಅಭಿಮಾನಿಗಳು ದಶಕಗಳ ಕಾಲದಿಂದ ರಫಿ ಅವರ ಗಾಯನ ಗುಣವನ್ನು ಹಾಡುತ್ತ ಗುನುಗುತ್ತ ಕೊಂಡಾಡಿಕೊಂಡು ಬಂದಿದ್ದಾರೆ. ರಫಿ ಹಾಡುಗಳನ್ನು ಹಾಡಬಲ್ಲವರು ಮತ್ತು ತನ್ಮಯತೆಯಿಂದ ಆಲಿಸಬಲ್ಲವರು ಕಲೆತು ಒಂದು ಲಾಭ ರಹಿತ ಸಂಸ್ಥೆಯನ್ನು ಕಟ್ಟಿದ್ದಾರೆ. ಅದರ ಹೆಸರು ಬಾರ್ ಬಾರ್ ರಫಿ. ಲಾಭರಹಿತ ಉದ್ದೇಶದ ಈ ಸಂಸ್ಥೆ ಆಗಾಗ ರಫಿ ಹಾಡುಗಳ ಗಾಯನ ಸಂಜೆಯನ್ನು ಬೆಂಗಳೂರಿನಲ್ಲಿ ಏರ್ಪಡಿಸುತ್ತಿರುತ್ತದೆ. ಪುಣ್ಯತಿಥಿ ನಿಮಿತ್ತ ಮೊನ್ನೆ ಜರುಗಿದ ಮೆಂಬರ್ಸ್ ನೈಟ್ ಕಾರ್ಯಕ್ರಮ ಹೌಸ್ ಫುಲ್.

    ಬಾರ್ ಬಾರ್ ರಫಿ ಸಂಸ್ಥೆಯಲ್ಲಿ ಸದಸ್ಯರಾಗಿರುವವರೇ ಕಾರ್ಯಕ್ರಮದಲ್ಲಿ ಹಾಡಿ ರಂಜಿಸಿದರು. ಗಾಯಕ ಗಾಯಕಿಯರು ಪ್ರಸಿದ್ಧರಲ್ಲ ಮತ್ತು ವೃತ್ತಿಪರರಲ್ಲ. ಕೇವಲ ರಫಿ ಹಾಡುಗಳಿಗೆ ಮನಸೋತವರು. ಚೆನ್ನಾಗಿ ಪ್ರಾಕ್ಟೀಸ್ ಮಾಡಿ ಇಂಪಾಗಿ, ಭಾವಪೂರ್ಣವಾಗಿ ಹಾಡಬಲ್ಲವರು. ಅಂದಿನ ಸಂಗೀತ ಸೌರಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಜಿ. ರಾಜ್ (ಹೇ ರಾಜಿ!), ಮನೀಷ್, ಹೇಮಂತ್, ಅಲಕಾ, ದೇವರಾಜ್, ಆಶಾ ಮತ್ತು ಅನನ್ಯ ಸುಮಾರು 30ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದರು. ಸಂಜೆ 4.30ರಿಂದ ರಾತ್ರಿ 9ರವರೆಗೆ ಜರುಗಿದ ರಫಿ ಸಂಜೆ ಬಹುಕಾಲ ನೆನಪಿನಲ್ಲಿ ಉಳಿಯುಂಥದು. ಊಟ ಸೇರಿ ಪ್ರವೇಶ ಶುಲ್ಕ 250 ರೂ.

    ಸೋಲೋ, ಯುಗಳ ಗೀತೆ, ಸಮೂಹ ಗಾನಕೊಳದಲ್ಲಿ, ಪ್ರೇಮ, ಶೋಕ, ಭಕ್ತಿ, ವಿಷಾದ ಮತ್ತು ತುಂಟತನದ ಹಾಡುಗಳು ಮಿಂಚಿ ಮರೆಯಾದವು. ಶ್ರೋತೃಗಳನ್ನು ರಂಜಿಸಿದ ಎಲ್ಲ ಗೀತೆಗಳನ್ನು ಪಟ್ಟಿ ಮಾಡುವುದು ಇಲ್ಲಿ ಸಾಧ್ಯವಿಲ್ಲವಾದ ಕಾರಣ ಕೆಲವು ಚಿತ್ರಗಳನ್ನು ಮಾತ್ರ ಹೆಸರಿಸಬಹುದು. ಗೋಪಿ, ಪಾರಸ್ ಮಣಿ, ಲವ್ ಮ್ಯಾರೇಜ್, ದೋ ಕಲಿಯಾ, ಅಂದಾಜ್, ಪ್ಯಾರ್ ಹಿ ಪ್ಯಾರ್, ಜಾನವರ್, ಆರತಿ, ದೋಸ್ತಿ, ಮೇರಾ ಸಾಯಾ, ಗೈಡ್, ನಯಾದೌರ್, ದಿಲ್ ದೇಕೆ ದೇಖೋ ಮುಂತಾದ ಚಿತ್ರಗಳ ಮನೋಜ್ಞ ಹಾಡುಗಳಿಗೆ ರಫಿ ಭಕ್ತರು ಕೆಲವೊಮ್ಮೆ ಮಂತ್ರಮುಗ್ಧರಾದರು, ಹಲವು ಬಾರಿ ತಾಳ ಹಾಕಿದರು, ತಾವೇ ತಾವಾದರು. ಲವಲವಿಕೆಯ ಕಾರ್ಯಕ್ರಮ ನಿರೂಪಣೆ ಸ್ನಿಗ್ಧ ಅವರಿಗೆ ಟೆನ್ ಔಟ್ ಆಫ್ ಟೆನ್.

    ಇದೇ ಸಂದರ್ಭದಲ್ಲಿ ರಫಿ ಕುರಿತ ಒಂದು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಯಾವ ಸನ್ನಿವೇಶದಲ್ಲೂ ಜಂಭಪಡದ ಅಥವಾ ಹೊಟ್ಟೆಕಿಚ್ಚುಪಡದ ಸರಳ ಜೀವಿ ಮತ್ತು ಪ್ರತಿಭಾ ಸಂಪನ್ನ ರಫಿ ಅವರ ಜೀವನ ಸಾಧನೆ ಮೇಲೆ ಕಿರುಚಿತ್ರ ಬೆಳಕು ಚೆಲ್ಲಿತು. ಚಿತ್ರದಲ್ಲಿ ರಫಿ ಅವರ ಹಾಡುಗಳು, ಆದಿನಗಳ ರಾಗಸಂಯೋಜಕರಾದ ರವಿ, ನೌಷದ್, ಆನಂದ್, ನಟರಾದ ಶಮ್ಮಿ ಕಪೂರ್, ಬಿಸ್ವಜಿತ್ ಮತ್ತು ರಫಿ ಅವರ ಪುತ್ರನ ಹಿನ್ನೋಟಗಳನ್ನು, ಅನಿಸಿಕೆಗಳನ್ನು ಹೆಣೆದುಕೊಂಡ ಕಿರುಚಿತ್ರ ರಫಿಯವರ ಸಂಗೀತಮಯ ಬಾಳನ್ನು ಬೆಳಕಾಗಿಸಿತು. ಕಿರುಚಿತ್ರದ ನಿರ್ದೇಶಕ ಕುಲ್ ದೀಪ್ ಸಿನ್ಹ.

    ರಫಿ ಫ್ಯಾನ್ ಕ್ಲಬ್ ಗೆ ಯಾರು ಬೇಕಾದರೂ ಸದಸ್ಯರಾಗಬಹುದು. ಸದಸ್ಯತ್ವ ಉಚಿತ. ಆಸಕ್ತರು, ಗೌರವ ಕಾರ್ಯದರ್ಶಿ ಅಶೋಕ್ ದಾಲ್ಮಿಯ ಅವರನ್ನು ಸಂಪರ್ಕಿಸಬಹುದು.
    +91 93 435 09891. ವೆಬ್ : http://www.baarbaarrafi.com/

    Monday, August 3, 2009, 13:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X