»   » ನವರಸನಾಯಕನ ಅದೃಷ್ಟ ಮೀಮಾಂಸೆ

ನವರಸನಾಯಕನ ಅದೃಷ್ಟ ಮೀಮಾಂಸೆ

Subscribe to Filmibeat Kannada

ದಯೆ ಬರುವವವರೆಗೆ ಕಾಯಬೇಕು ಎಂದರು ಜಗ್ಗೇಶ್. ನವರಸನಾಯಕನ ಅದೃಷ್ಟ ಮೀಮಾಂಸೆ ಸ್ವಾರಸ್ಯಕರವಾಗಿದೆ.

*ಜಯಂತಿ

ಕಲಾಸರಸ್ವತಿ ತನ್ನ ಬಳಿಗೆ ಬಂದ ಯಾರನ್ನೂ ಬರಿಗೈಯಲ್ಲಿ ಕಳಿಸುವುದಿಲ್ಲ. ಆಕೆ ದಯಪಾಲಿಸುವವರೆಗೆ ಕಾಯಬೇಕು ಅಷ್ಟೇ. ಬಾಲಿವುಡ್‌ನ ದಿಗ್ಗಜರಾದ ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್‌ರನ್ನೇ ನೋಡಿ. ಈ ಅಪ್ಪ ಮಗ ಕೂಡ ಸೋಲುಗಳನ್ನು ಉಂಡ ನಂತರವೇ ಗೆಲುವಿನ ಸವಿ ಕಂಡಿದ್ದು....

ಜಗ್ಗೇಶ್ ಅದೃಷ್ಟ ಮೀಮಾಂಸೆ ಮಂಡಿಸಿದ್ದು 'ದೀನ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ (ಸಂಗೀತ ನಿರ್ದೇಶಕ ಅರ್ಜುನ್). ಚಿತ್ರದ ನಾಯಕನಟ ದೀಪಕ್ ಉದ್ದೇಶಿಸಿ ಹಿರಿಯ ನಟ ತಮ್ಮ ಅನುಭವ ಮೀಮಾಂಸೆ ಮಂಡಿಸಿದರು. 'ಒಮ್ಮೆ ನಗೆನಟ ಗುಗ್ಗು ಅವರನ್ನು ಸೋಲುಗೆಲುವುಗಳ ಕಣ್ಣಾಮುಚ್ಚಾಲೆ ಬಗ್ಗೆ ಕೇಳಿದ್ದೆ. ಅವರು ಹೇಳಿದರು: ಪ್ರತಿಯೊಬ್ಬರೂ ರಾಜಕುಮಾರ್ ಆಗಲಿಕ್ಕೆ ಸಾಧ್ಯವಿಲ್ಲ. ಆದರೆ, ನಮ್ಮ ಮಿತಿಯೊಳಗೆ ಗೆಲುವನ್ನು ಎಟುಕಿಸಿಕೊಳ್ಳುವುದು ಅಸಾಧ್ಯವೇನೂ ಅಲ್ಲ' ಎಂದರು ಜಗ್ಗಿ.

'ಶಿಷ್ಯ' ಹಾಗೂ 'ಬಾ ಬೇಗ ಚಂದಮಾಮ' ಚಿತ್ರಗಳ ಸೋಲಿನಿಂದ ದೀಪಕ್ ಕಂಗೆಟ್ಟಿದ್ದಾರೆ. 'ದೀನ' ಚಿತ್ರದ ಮೂಲಕವಾದರೂ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿನೆಲೆ ಕಂಡುಕೊಳ್ಳುವ ಹಂಬಲ ಅವರದ್ದು. ಈ ಹಿನ್ನೆಲೆಯಲ್ಲಿಯೇ ಜಗ್ಗೇಶ್ ಗೆಲ್ಲುವ ಹಾಗೂ ಕಾಯುವ ಮಂತ್ರ ಬೋಧಿಸಿದರು. 'ಜೀವನದಲ್ಲಿ ಅವಮಾನಗಳನ್ನು ಎದುರಿಸುತ್ತ, ಎಡವಿಬೀಳುತ್ತಲೇ ಎದ್ದುನಿಂತವನು ನಾನು. ನೀನು ಕೂಡ ಎದ್ದು ನಿಲ್ಲುವ ದಿನ ದೂರವಿಲ್ಲ' ಎಂದು ಸಮಾಧಾನಿಸಿದರು.

ದೀನ ಪಾತ್ರದಲ್ಲಿ ದೀಪಕ್‌ರ ತನ್ಮಯತೆಯನ್ನು ನಿರ್ದೇಶಕರು ಮುಕ್ತಕಂಠದಿಂದ ಶ್ಲಾಘಿಸಿದರು. ಸತತ ಇಪ್ಪತ್ನಾಲ್ಕು ತಾಸು ದೀಪಕ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಿದೆಯಂತೆ. ಒಮ್ಮೆಯಂತೂ ಹತ್ತು ತಾಸು ಮಳೆಯಲ್ಲೇ ನಿಂತಿದ್ದರಂತೆ.

ದೀಪಕ್‌ನಿಂದ 'ದೀನ' ಚಿತ್ರದತ್ತ ಬನ್ನಿ. ಸುನೀಲ್ ಹಾಗೂ ಜಗದೀಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಹನಾ ನಿರ್ದೇಶಿಸಿದ್ದಾರೆ. 'ಅವ್ವ' ಚಿತ್ರದಲ್ಲಿ ವಿಜಯ್ ಜೊತೆ ರೋಚಕವಾಗಿ ಕಾಣಿಸಿಕೊಂಡಿದ್ದ ಸ್ಮಿತಾ ದೀನನಿಗೆ ನಾಯಕಿ. ದೀಪಕ್‌ನಂತೆ ಸ್ಮಿತಾ ಕೂಡ ಗೆಲುವಿನ ತಹತಹದಲ್ಲಿರುವ ಹುಡುಗಿ. ಈ ಇಬ್ಬರು ಪ್ರತಿಭಾವಂತರಿಗೆ 'ದೀನ' ಗೆಲುವಾಗಿ ಒಲಿದೀತೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada