»   » ಪರಮೇಶಿ ಪಾನ್ ವಾಲ ಧ್ವನಿಸುರುಳಿ ಬಿಡುಗಡೆ

ಪರಮೇಶಿ ಪಾನ್ ವಾಲ ಧ್ವನಿಸುರುಳಿ ಬಿಡುಗಡೆ

Subscribe to Filmibeat Kannada

ಸುಮಾರು ಏಳು ತಿಂಗಳ ಹಿಂದೆ ಚಿತ್ರೀಕರಣ ಆರಂಭಿಸಿದ ಶಿವರಾಜ್ ಕುಮಾರ್ ಅವರ ಪರಮೇಶಿ ಪಾನ್ ವಾಲ ಚಿತ್ರ ವಿಭಿನ್ನ ಕಾರಣಗಳಿವೆ ಸುದ್ದಿ ಮಾಡುತ್ತಲೇ ಬಂದಿದೆ. ಚಿತ್ರದ ಮಹೂರ್ತ ಸಂದರ್ಭದಲ್ಲಿ ವಿನ್ಯಾಸಕಾರ ಮಣಿ ಅವರ ಕೈಚಳಕದ ಮೂಲಕ ಹಿಂದಿಯ 'ಡಾನ್' ಚಿತ್ರದಲ್ಲಿನ ಶಾರುಖ್ ಖಾನ್ ಗೆಟಪ್ಪಿನಲ್ಲಿ ಶಿವಣ್ಣನ ಪೋಸ್ಟರ್ ಎಲ್ಲೆಡೆ ರಾರಾಜಿಸಿದ್ದು, ಎಲ್ಲರೂ ಈ ಚಿತ್ರ ಹಿಂದಿಯ ಡಾನ್ ಚಿತ್ರದ ರಿಮೇಕ್ ಎಂದು ತಿಳಿಯುವಂತೆ ಮಾಡಿತ್ತು. ಈ ಗೆಟಪ್ಪಿನ ಬಗ್ಗೆ ಶಾರುಖ್ ಗೆ ಕೂಡ ಶಿವಣ್ಣ ಹೇಳಿ, ಕಿಂಗ್ ಖಾನ್ ಗೂ ಕುತೂಹಲ ಮೂಡುವಂತೆ ಮಾಡಿದ್ದಂತೂ ನಿಜ.

ನಂತರ ರಾಜ್ ಬ್ಯಾನರ್ ನ ಲಕ್ಕಿ ನಿರ್ದೇಶಕ ಮಹೇಶ್ ಬಾಬು ಪ್ರಥಮಬಾರಿಗೆ ಶಿವಣ್ಣ ಅವರ ಚಿತ್ರ ಕೈಗೆತ್ತಿಕೊಂಡಿದ್ದು, ಅಂತೂ ಇಂತೂ ಪ್ರೀತಿಬಂತು ಚಿತ್ರದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆದಿತ್ಯಾಬಾಬು ತನ್ನ ಮೂಲ ಕಾಯಕದತ್ತ ತಿರುಗಿ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದು ವಿಶೇಷವಾಗಿತ್ತು.

ಇತ್ತೀಚೆಗೆ ಶಿವಣ್ಣನ ಪಿಕ್ಚರ್ ಅಂದ್ರೆ ಹೀರೋಯಿನ್ ಬಾಂಬೆಯವರೇ ಆಗಬೇಕು ಎಂಬ ಮಾತಿನಂತೆ ಸುರ್ವೀನ್ ಚಾವ್ಲಾ ಆಯ್ಕೆ ಆಗಿದ್ದು, ನಾಯಕಿಯಾಗಿ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಪಾದಾರ್ಪಣೆ ಮಾಡಿದ ಕನ್ನಡತಿ ಸೋನು ರಾಮಕೃಷ್ಣ ಈ ಚಿತ್ರದಲ್ಲಿ ಶಿವರಾಜ್ ಗೆ ತಂಗಿಯಾಗಿ ನಟಿಸುತ್ತಿರುವುದೂ ಹೈಲೈಟ್ ಎನ್ನಬಹುದು.

ಇನ್ನೊಂದು ವಿಶೇಷ ಎಂದರೆ, ದರ್ಶನ್ ಪಾಳ್ಯದ ಸಂಗೀತ ನಿರ್ದೇಶಕ ಹರಿಕೃಷ್ಣ ಈ ಚಿತ್ರದ ಸಂಯೋಜನೆ ಮಾಡುತ್ತಿರುವುದು. ಸಾಹಿತಿ ನಾಗೇಂದ್ರ ಪ್ರಸಾದ್ ಕ್ಲಾಸ್ ಮಾಸ್ ಗೆ ತಲುಪುವಂಥಾ ಹಾಡು ಹೊಸೆದಿದ್ದಾರೆ. ಪರಮೇಶಿ ಪಾನ್ ವಾಲದ ತಾಜಾ ಸುದ್ದಿ ಎಂದರೆ ಸೋಮವಾರ ನಗರದ ಗ್ರೀನ್ ಹೌಸ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಚಿತ್ರದ ಧ್ವನಿಸುರಳಿಯನ್ನು ಅನಾವರಣಗೊಳಿಸಲಾಯಿತು.

ಗ್ರೀನ್ ಹೌಸ್ ನಲ್ಲಿ ಗ್ರೀನ್ ಗ್ರೀನ್ ಧ್ವನಿ ಸುರಳಿ
ಸಾಮಾನ್ಯವೆಂಬಂತೆ ಕಾರ್ಯಕ್ರಮ ಕೊಂಚ ತಡವಾಗಿ ಪ್ರಾರಂಭವಾದರೂ, ಚಿಕ್ಕದಾಗಿ ಚೊಕ್ಕದಾಗಿ ಮುಗಿದುಹೋಯ್ತು. ವೇದಿಕೆಯ ಮೇಲೆ ನಿರ್ಮಾಪಕ ಆದಿತ್ಯಬಾಬು, ನಾಯಕ ಶಿವರಾಜ್, ಅಶ್ವಿನಿ ಆಡಿಯೋಸ್ ನ ರಾಂಪ್ರಸಾದ್, ನಿರ್ದೇಶಕ ಮಹೇಶ್ ಬಾಬು ಅಲ್ಲದೆ, ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ವಿನಯ್ ಹಾಗೂ ಹಿರಿಯ ಪತ್ರಕರ್ತ ಪಿ ಜಿ ಶ್ರೀನಿವಾಸಮೂರ್ತಿ ಆಸೀನರಾಗಿದ್ದರು.

ಸಮಾರಂಭದ ನಿರೂಪಣೆಯನ್ನು ಎವರ್ ಗ್ರೀನ್ ಪತ್ರಕರ್ತ ಎ.ಎಸ್ .ಮೂರ್ತಿ ವಹಿಸಿಕೊಂಡಿದ್ದರು. ಮೊದಲಿಗೆ ನಿರ್ದೇಶಕ ಮಹೇಶ್ ಬಾಬು ಮಾತಾಡಿ, ರಾಜ್ ಬ್ಯಾನರ್ ನಂಗೆ ಹೊಸದೇನಲ್ಲ, ಆಕಾಶ್ ,ಅರಸು ಚಿತ್ರಕ್ಕೂ ಮುನ್ನ ಎಷ್ಟೋ ಚಿತ್ರಕ್ಕೆ ಸಹ ನಿರ್ದೇಶಕ ನಾಗಿ ಕೆಲಸ ಮಾಡಿದ್ದೇನೆ. ಶಿವಣ್ಣ ಅವರ ಜತೆ ಒಂದು ಸಿನಿಮಾ ಮಾಡಬೇಕೆಂದು ಆಸೆಯಿತ್ತು. ಈ ಚಿತ್ರ ಚೆನ್ನಾಗಿ ಬಂದಿದೆ ಎನ್ನೋ ತೃಪ್ತಿಯಿದೆ ಎಂದರು.

ನಂತರ ಅಶ್ವಿನಿ ರಾಂ ಪ್ರಸಾದ್ ಶಿವರಾಜ್ ಜೊತೆಗಿನ ಜೋಗಿ ಚಿತ್ರದ ದಿನಗಳನ್ನು ನೆನೆದು 'ಪರಮೇಶಿ..' ಸಾಂಗ್ಸ್ ಸೂಪರ್ ಆಗಿದೆ ಕೇಳಿ ಆನಂದಿಸಿ ಅಂದರು.

ನಂತರ ವೇದಿಕೆಯೇರಿದ ನಟಿ ಸೋನು: ನಾನು ಚಿಕ್ಕಂದಿನಿಂದ ಶಿವಣ್ಣ ಅವರ ಫ್ಯಾನ್, ಅವರ ಜತೆ ನಟಿಸಬೇಕು ಎನ್ನೋದು ಬಾಲ್ಯದ ಕನಸು. ಈ ಚಿತ್ರದಲ್ಲಿ ಅದೂ ಅವರ ತಂಗಿ ಪಾತ್ರ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗಿದ್ದೀನಿ. ಎಲ್ಲರೂ ಚಿತ್ರದ ಇಷ್ಟಪಡುತ್ತೀರಾ.. ನೋಡಿ ನಮ್ಮನ್ನು ಪ್ರೋತ್ಸಾಹಿಸಿ.. ಎಂದರು.

ರಾಜ್ ಕುಮಾರ್ ಕುಟುಂಬದವರ ನಯ ವಿನಯ ಹಾಗೂ ಅಭಿನಯದ ಬಗ್ಗೆ ಎ.ಎಸ್. ಮೂರ್ತಿ ಅವರು ಕೊಂಚ ವ್ಯಾಖ್ಯಾನ ನೀಡಿದ ಮೇಲೆ ಮಾತಿಗಿಳಿದ ಶಿವಣ್ಣ, ಮಹೇಶ್ ಬಾಬು ಅವರನ್ನು ನಾನು ಏಕೆ47 ಚಿತ್ರದ ಸಮಯದಿಂದ ನೋಡುತ್ತಾ ಬಂದಿದ್ದೀನಿ. ಬಾಂಬೆನಲ್ಲಿ ಕೈಮ್ಯಾಕ್ಸ್ ಮಾಡುವಾಗ ಜೊತೆಲೇ ಇರುತ್ತಿದ್ದಿವಿ ಆಮೇಲೆ ಯುವರಾಜ, ಶ್ರೀರಾಮ್ ಚಿತ್ರದಲ್ಲೂ ಇದ್ದರೂ ಅಪ್ಪು ಚಿತ್ರಕ್ಕೂ ಅಸೋಸಿಯೇಟ್ ಆಗಿದ್ದರೂ ಅವರದೇ ಆದ ಒಂದು ಸ್ಟ್ರೈಲ್ ಇದೆ. ಈ ಚಿತ್ರದಲ್ಲಿ ಎಲ್ಲರಿಗೂ ಅಭಿನಯಕ್ಕೆ ಸ್ಕೋಪ್ ಇದೆ. ಜನಾರ್ಧನ ಮಹರ್ಷಿ ಕಥೆ ಚೆನ್ನಾಗಿ ಬರೆದಿದ್ದಾರೆ ಎಂದು ಹೊಗಳಿದರು.

ಅಂತೂ ಧ್ವನಿಸುರಳಿ ಹೊರಬಂತು
ವಿಳೆದೆಲೆ ಆಕಾರದಲ್ಲಿದ್ದ ಸಿಡಿ ಪ್ಯಾಕ್ ಹಾಗೂ ಆಡಿಯೊ ಕ್ಯಾಸೆಟ್ ಗಳನ್ನು ರಾಘವೇಂದ್ರ ರಾಜ್ ಕುಮಾರ್ ಅವರ ಮಗ ವಿನಯ್ ಹಾಗೂ ಪತ್ರಕರ್ತ ಪಿ ಜಿಶ್ರೀನಿವಾಸ ಮೂರ್ತಿ ಅವರು ಅರ್ಪಣೆ ಮಾಡಿ ಪ್ರದರ್ಶಿಸಿದರು.

ಸಮಾರಂಭದ ವಂದನಾರ್ಪಣೆ ಮಾಡಿದ ಸಾಹಿತಿ ನಾಗೇಂದ್ರ ಪ್ರಸಾದ್ ಮಾತನಾಡಿ, ಕ್ಲಾಸ್ ಅಂಡ್ ಮಾಸ್ ಗೆ ಹೊಂದುವಂತಹ ಕಥೆ, ಹಾಡುಗಳು ಈ ಚಿತ್ರದಲ್ಲಿದೆ. ಎಲ್ಲರಿಗೂ ಇಷ್ಟವಾಗುವುದೂ ಗ್ಯಾರಂಟಿ ಅಂದರು.

ವೇದಿಕೆಯ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಫೋಟೋ ಸೆಷನ್, ಈಟಿಂಗ್ ಸೆಷನ್ , ಟಾಕಿಂಗ್ ಸೆಷನ್ ಶುರುವಾಗಿ ಎಲ್ಲರೂ ತಮ್ಮತಮ್ಮಲೇ ವ್ಯಸ್ತರಾಗಿ ಹೋದರು.

ಹಿನ್ನೆಲೆಯಲ್ಲಿ 'ಮದರಾಸು ಐಸಾ ಬನರಾಸು ಐಸಾ ಕೊಲ್ಕತ್ತಾ ಐಸಾ ...ತಿನ್‌ತಾನೆ ಪರಶಿವನು ನನ್ನ ಕೈಲಿ ಪಾನ್‌ಬೀಡ ಐಸಾ..' ಎಂಬ ಹಾಡು ಕೇಳಿ ಬರುತ್ತಿತ್ತು. ಆ ಹಾಡಿಗೆ ಕುಣಿಯಲು ಶಿವಣ್ಣನಿಗೆ ಸ್ಟೆಪ್ಸ್ ಹೇಳಿಕೊಟ್ಟ ಡಾನ್ಸ್ ಮಾಸ್ಟರ್ ಇಮ್ರಾನ್ ನಿಂತಲ್ಲೇ ಕಾಲು ಕುಣಿಸುತ್ತಾ ಹಾಡನ್ನು ಆನಂದಿಸುತ್ತಿದ್ದರು.

ಅಷ್ಟರಲ್ಲೇ ಕ್ಲಾಸ್ ಸಾಂಗ್ ಎಲ್ಲಿ ಕೇಳಿಸಲಿಲ್ಲ ಎಂದು ನಾಗೇಂದ್ರ ಪ್ರಸಾದ್ ಅಂದುಕೊಳ್ಳುವಷ್ಟರಲ್ಲಿ 'ಸುಮ್ ಸುಮ್ಕೆ ಸುಮ್ ಸುಮ್ಕೆ ಇವಳು ಸುಮ್ಕೆ ಇರಲ್ಲ 'ಹಾಗೂ 'ಅಂತೂ ನನ್ಗೆ ಇದೀಗ ಅಂತೂ ನೀನು ಬಂದಾಗ' ಎಂಬ ಎರಡು ಗೀತೆಗಳು ಮೆಲ್ಲಗೆ ತೇಲಿ ಬಂದವು.

ಗವಿಪುರಂನ ಪಾನ್ ವಾಲ ಶಿವಣ್ಣ ಪರಮಶಿವನನ್ನು ಮೆಚ್ಚಿಸಿ, ವಿದೇಶದಲ್ಲಿ ಹಾಡಿ ಕುಣಿದಿದ್ದಾಗಿದೆ. ಚಿತ್ರದ ಧ್ವನಿಸುರಳಿ ಇನ್ನೂ ಕೇಳುಗರ ಮನ ತಣಿಸುವುದೊಂದೇ ಬಾಕಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada