»   » ಸಂಗೀತಗಾರ ರಘು ದೀಕ್ಷಿತ್ ಗೆ ಶುಭ ಹಾರೈಸಿ

ಸಂಗೀತಗಾರ ರಘು ದೀಕ್ಷಿತ್ ಗೆ ಶುಭ ಹಾರೈಸಿ

Subscribe to Filmibeat Kannada
Folk Rock musician Raghu dixit
ಸೈಕೋ ಚಿತ್ರದ ಅಸಲಿ ನಾಯಕರಾಗಿ ಮಿಂಚಿದವರು ರಘು ಎಂದರೆ ತಪ್ಪಾಗಲಾರದು. ಹೀರೋ, ಹೀರೋಯಿನ್ ಯಾರೆಂದು ತಿಳಿಯದೇ ವಿಭಿನ್ನ ವೇಷಧಾರಿ ರಘು ಹಾಗೂ ಅವರ ಹಾಡುಗಳಿಗೆ ಜನ ಮರುಳಾಗಿದ್ದಂತೂ ನಿಜ. ಇಂದು ಈ ವಿಶಿಷ್ಟ ಸಂಗೀತಗಾರನಿಗೆ ಜನ್ಮದಿನದ ಸಂಭ್ರಮ.

*ಮಹೇಶ್ ಮಲ್ನಾಡ್

'ನಿನ್ನ ಪೂಜೆ ಬಂದೇ ಮಹದೇಶ್ವರ....' ಎಂದು ರಾಕ್ ಮಿಶ್ರಿತ ಏರು ದನಿಯಲ್ಲಿ ಹಾಡಿ ಎಲ್ಲರ ಮನೆ ಮಾತಾದವರು ಸಂಗೀತಗಾರ ರಘು ದೀಕ್ಷಿತ್. ಸೈಕೋ ಚಿತ್ರದ ಹಾಡುಗಳು ಚಿತ್ರ ಬಿಡುಗಡೆಗೆ ಮುನ್ನವೇ ಭರ್ಜರಿ ಯಶಸ್ಸು ಸಾಧಿಸಿದ್ದು, ಸುಳ್ಳಲ್ಲ. ಚಿತ್ರ ಯಾರಿಗೆ ಇಷ್ಟವಾಯ್ತೋ, ಯಾರಿಗೆ ಇಲ್ಲವೋ, ಹಾಡುಗಳ ಚಿತ್ರೀಕರಣವಂತೂ ಚೆನ್ನಾಗಿ ಮೂಡಿ ಬಂದಿದೆ ಎನ್ನುವುದನ್ನು ಚಿತ್ರದ ಬಗ್ಗೆ ನಕಾರಾತ್ಮಕವಾಗಿರುವವರೂ ಒಪ್ಪುತ್ತಾರೆ.

ಸೈಕೊ ನಂತರ ಎರಡು ಚಿತ್ರಗಳನ್ನು ಒಪ್ಪಿಕೊಂಡ ರಘು ಎರಡಕ್ಕೂ ಅಚ್ಚುಕಟ್ಟಾಗಿ ಸಂಗೀತ ಸಂಯೋಜನೆ ಕೆಲಸದಲ್ಲ ನಿರತರಾಗಿದ್ದಾರೆ. ಸುದೀಪ್ ಅವರ 'ಜಸ್ಟ್ ಮಾತ್ ಮಾತಲ್ಲಿ' ಹಾಗೂ ಪ್ರಭಾಕರ್ ಅವರ ನಿರ್ದೇಶನದ ಯುವ ನಟ ಪ್ರಜ್ವಲ್ ದೇವರಾಜ್ ಅಭಿನಯದ 'ಸೂಪರ್ ಮ್ಯಾನ್ 'ಚಿತ್ರಕ್ಕೆ ತಲಾ ಐದೈದು ಹಾಡು ಹೊಸೆಯಲಿದ್ದಾರೆ ಎಂಬ ಸುದ್ದಿ ಬಂದಿದೆ. ಸೈಕೊಗಿಂತ ಭಿನ್ನವಾದ ಸಂಯೋಜನೆ ಈ ಚಿತ್ರಗಳಲ್ಲಿರುವುದಂತು ಖಂಡಿತಾ ಎನ್ನುತ್ತಾರೆ ರಘು.

ಈ ಮಧ್ಯೆ ಅಂತರಾಗ್ನಿ ರಾಕ್ ಬ್ಯಾಂಡ್ ನ ಮೂಲಕ ಪ್ರದರ್ಶನ ನೀಡುವುದಂತೂ ಇದ್ದೇ ಇದೆ. ಸೈಕೊ ಬಿಡುಗಡೆ ದಿನ ಕೂಡ ಬಾಲಿವುಡ್ ನ ಯುವ ನಿರ್ದೇಶಕ ಫರಾನ್ ಅಖ್ತರ್ ಆಯೋಜಿಸಿದ್ದ ಚಾರಿಟಿ ಷೋ ನಲ್ಲಿ 'ಮೈಸೂರ್ ಸೆ ಆಯಿರೇ.. ಎಂದು ಹಾಡಿ ಬಂದಿದ್ದಾರೆ. ಬರುವ ಮುನ್ನ ನೆಚ್ಚಿನ ಸಂಗೀತ ನಿರ್ದೇಶಕ ವಿಶಾಲ್ ಅವರನ್ನು ಕನ್ನಡದಲ್ಲಿ ಹಾಡುವಂತೆ ಕೇಳಿ. ಒಪ್ಪಿಸಿದ್ದಾರೆ ಕೂಡಾ. 'ಜಂಕರ್ ಬೀಟ್ಸ್', 'ಬ್ಲಫ್ ಮಾಸ್ಟರ್' ಚಿತ್ರಕ್ಕೆ ಸಂಗೀತ ನೀಡಿ ಯಶಸ್ವಿಯಾದ ವಿಶಾಲ್ -ಶೇಖರ್ ಜೋಡಿಯ ವಿಶಾಲ್ ಅವರು ಪ್ರಜ್ವಲ್ ಅವರ ಸೂಪರ್ ಮ್ಯಾನ್ ಚಿತ್ರಕ್ಕೆ ಗೀತೆಯೊಂದನ್ನು ಹಾಡಲಿದ್ದಾರೆ.

ರಘುವಿನೊಂದಿಗೆ ಚುಟುಕು ಮಾತುಕತೆ:
ಈ ತನುವು ನಿನ್ನದೇ. .. ಈ ಮನವು ನಿನ್ನದೇ ಎಂದು ಗುನುಗುನಿಸುವ ಮೊಬೈಲ್ ಕಾಲರ್ ಟ್ಯೂನ್ ಕಟ್ ಆಗಿ ಹಲೋ ಎಂದು ಕಂಚಿನ ಕಂಠದಿಂದ ಸ್ವರ ಹೊಮ್ಮಿತು.. ನಂತರ ನಡೆದ ಸಂಭಾಷಣೆಯ ಸಾರ ನಿಮ್ಮ ಮುಂದೆ. ..

ಈ ಎರಡು ಚಿತ್ರಗಳನ್ನು ಬಿಟ್ಟರೆ ಈ ತಿಂಗಳಂತೂ ಎಲ್ಲೆಡೆ ರಾಜ್ಯೋತ್ಸವಕ್ಕೆ ಬನ್ನಿ ಎಂದು ಬೇಡಿಕೆ ಹೆಚ್ಚಾಗಿದೆ.. ಮೊನ್ನೆ ಜಯನಗರ 9 ನೇ ಬಡಾವಣೆ ಅವರ ಪೋಗ್ರಾಂಗೆ ಹೋಗಿ ಶರೀಫಜ್ಜನ ಎರಡು ಹಾಡು ಗುನುಗಿದ್ದಾಯ್ತು. ಜೊತೆಗೆ ಸೈಕೊ ಚಿತ್ರ ಹೀರೋ ಧನುಷ್ ಕೂಡಾ ಬಂದಿದ್ದರು. ಜನರ ಅಭಿಮಾನದಿಂದ ಹೃದಯ ತುಂಬಿಬಂತು. ಎಲ್ಲಾ ಪೋಗ್ರಾಂಗಳಿಗೂ ಹೋಗೋ ಆಸೆಯೇನೊ ಇದೆ ಆದರೆ ಇತರೆ ಕಾರ್ಯಗಳ ಒತ್ತಡದಿಂದ ಹೋಗೋದು ಸ್ವಲ್ಪ ಕಷ್ಟವಾಗುತ್ತದೆ. ಏನು ಮಾಡೋದು.. ಅಂತಾ ಮೈಸೂರು ಶೈಲಿಯ ಕನ್ನಡದಲ್ಲಿ ಸ್ಪಷ್ಟವಾಗಿ ರಘು ಹೇಳುತ್ತಾರೆ.

ಹಿಂದಿ ಚಿತ್ರರಂಗಗೇನಾದರೂ ಹೋಗೋ ಐಡಿಯಾ ಇದ್ಯಾ ಎಂದರೆ, ನೋಡಿ.. ರಾಕ್ ಬ್ಯಾಂಡ್ ಮೂಲಕ ದೇಶ ವಿದೇಶ ಎಲ್ಲಾ ಸುತ್ತಿ ಬಂದಿದ್ದೀವಿ. ಎಲ್ಲಾ ಕಡೆ ಕನ್ನಡದ ಕಂಪು ಬೀರಬೇಕು. ಬಾಲಿವುಡ್ ನನಗೆ ಹೊಸತೇನಲ್ಲ. ಆದರೆ ನನಗೆ ನಮ್ಮ ಕನ್ನಡ ಚಿತ್ರರಂಗದ ಮೂಲಕ ಏನಾದರೂ ಸಾಧಿಸಬೇಕು. ನಮ್ಮ ಇಂಡಸ್ಟ್ರೀನಾ ಬಾಲಿವುಡ್ ಲೆವಲ್ ಗೆ ತಗೊಂಡು ಹೋಗಬೇಕು. ನಮ್ಮಲ್ಲಿ ಪ್ರತಿಭೆಗಳಿಗೇನೂ ಕಮ್ಮಿಯಿಲ್ಲ. ಸ್ವಲ್ಪ ಪರಿಶ್ರಮ, ತಾಳ್ಮೆ ಹಾಗೂ ನಂಬಿಕೆಯಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದರು.

ಸೈಕೋ ಎಫೆಕ್ಟ್
ರಘು ತಮ್ಮ ಬ್ಲಾಗಿನ ಕಮೆಂಟ್ ಫೀಲ್ಡ್ ನೋಡಿ ದಂಗಾಗಿ ಹೋಗಿದ್ದಾರೆ. ಜನರ ಪ್ರತಿಕ್ರಿಯೆ ಕಂಡು ಹರ್ಷಗೊಂಡಿದ್ದಾರೆ. ಅವರ ಈ ಮೇಲೆ ಐಡಿಗೆ ಪ್ರತಿ ದಿನ ಶುಭ ಹಾರೈಕೆ ಮೆಸೇಜ್ ಗಳಂತೂ ಇದ್ದದ್ದೇ. ಇನ್ನೂ ಆರ್ಕುಟ್ ನಲ್ಲಿ ಈಗಾಗಲೇ ಎರಡು ಪ್ರೋಫೈಲ್ ಮುಗಿದು ಮೂರನೇ ಪ್ರೊಫೈಲ್ ರಚಿಸಿಕೊಂಡಿದ್ದಾರೆ. ಕನಿಷ್ಠವೆಂದರೂ 3 ಸಾವಿರಕ್ಕೂ ಅಧಿಕ ಮಂದಿ ಫ್ರೆಂಡ್ಸ್ ಲಿಸ್ಟ್ ನಲ್ಲಿದ್ದಾರೆ. ಸಂಖ್ಯೆ ದಿನದಿನ ಹೆಚ್ಚುತ್ತಲೇ ಇದೆ. ಯೂಟ್ಯೂಬ್ ನಲ್ಲಂತೂ 'ಮಾದೇಶ್ವರ...' ಹಾಡಿನಿಂದ ಇವರ ಅಲ್ಬಂನ ಉಳಿದ ಹಾಡುಗಳಿಗೂ ಬೇಡಿಕೆ ಹೆಚ್ಚಾಗಿದೆ..

ಈ ಮೇಲ್, ಸ್ಫ್ರಾಪ್ ಗೆಲ್ಲಾ ಉತ್ತರಿಸುತ್ತ್ರೀರಾ ಎಂದಿದ್ದಕ್ಕೆ.. ಖಂಡಿತಾ ಬಿಡುವಿದ್ದಗಂತೂ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಆಗಾಗ ಸಿನಿಮಾ ರಿಲೇಟೆಡ್ ಫೋರಂಗಳಿಗೂ ಭೇಟಿ ಕೊಡುತ್ತೇನೆ ಎನ್ನುತ್ತಾರೆ.

ಈ ಬಾರಿ ಹುಟ್ಟುಹಬ್ಬ ಎಲ್ಲಿ ಆಚರಣೆ ಎಂದಿದ್ದಕ್ಕೆ, ಬಹುಶಃ ನಮ್ಮೂರು ಮೈಸೂರಲ್ಲೇ.. ಏನು ಫುಲ್ ಗ್ರಾಂಡ್ ಆಗಿರುತ್ತಾ.? ಏನು ಸ್ಪೆಷಲ್ ಅಂದ್ರೆ..

ಗ್ರಾಂಡ್ ಏನಿಲ್ಲ. ಸ್ಪೆಷಲ್ ಅಂದ್ರೆ ಇವತ್ತು ಒಂದೆರಡು ಗಂಟೆ ಹೆಚ್ಚಿಗೆ ಕೆಲ್ಸ ಮಾಡೋದು ಅಷ್ಟೇ.ಉಳಿದಂತೆ ಮನೆಯವರ ಜತೆ ಕಾಲ ಕಳೆಯೋದು ಎಂದ ರಘು ಅವರಿಗೆ ಜನ್ಮದಿನದ ಶುಭ ಹಾರೈಸಿ.. ಫೋನ್ ಕಾಲ್ ಕಟ್ ಮಾಡಿದೆ.

Please Wait while comments are loading...