ಹೊಸ ಪ್ರೇಮ ಪುರಾಣದಲ್ಲಿ ದ್ವಾರಕೀಶ್ ರಿವರ್ಸ್ ಗೇರ್
ಕನ್ನಡ ಚಿತ್ರಗಳ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಕೆಲವು ನಟರ ಧೋರಣೆ ಬಗ್ಗೆ ಕಿಡಿಕಾರಿದ್ದಾರೆ. ನಟಿ ರಾಧಿಕಾ ಗಾಂಧಿ ಮುಖ್ಯಭೂಮಿಕೆಯಲ್ಲಿರುವ 'ಹೊಸ ಪ್ರೇಮ ಪುರಾಣ' ಆಡಿಯೋ ಬಿಡುಗಡೇ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗೆ ಕೆಲವು ಹೀರೋಗಳು ಬೆಂಗಳೂರಿನ ಅತ್ಯಂತ ಸಣ್ಣ ಚಿತ್ರಮಂದಿರ ಸ್ವಪ್ನದಲ್ಲಿ ಹೇಗಾದರೂ ಮಾಡಿ ತಮ್ಮ ಚಿತ್ರವನ್ನು 100 ದಿನ ಪ್ರದರ್ಶಿಸಿ ಸಂಭಾವನೆಯನ್ನು ಸಿಕ್ಕಾಪಟ್ಟೆ ಏರಿಸಿಕೊಳ್ಳಲು ನೋಡುತ್ತಿದ್ದಾರೆ. ಅಂತಹವರನ್ನು ಮಟ್ಟ ಹಾಕಬೇಕೆಂದರೆ ಹೊಸ ಕಲಾವಿದರಿಗೆ ಅವಕಾಶ ಕೊಡಬೇಕು ಎಂದರು.
ಹೊಸ ಕಲಾವಿದರಿಗೆ ಅವಕಾಶ ಕೊಡುವುದರಲ್ಲಿ ಸದಾ ನಾನು ಮುಂದಿರುತ್ತೇನೆ. ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕಾದ ಅನಿವಾರ್ಯತೆ ಬಹಳಷ್ಟು ಇದೆ. ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬರಲು ಇದೂ ಒಂದು ಕಾರಣ ಎಂದರು.
ಇನ್ನು ಚಿತ್ರಮಂದಿರಗಳ ಬಾಡಿಗೆ ವಿಚಾರದಲ್ಲೂ ನಿರ್ಮಪಕರು ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಿರ್ಮಾಪಕರ ಪರಿಸ್ಥಿತಿ ಶೋಚನೀಯವಾಗಿದೆ. ಈ ಸಮಸ್ಯೆಗಳೆಲ್ಲಾ ಎಲ್ಲರಿಗೂ ಗೊತ್ತಿರುವಂಹದ್ದೇ. ಆದರೂ ಫಿಲಂ ಚೇಂಬರ್ ಮಾತ್ರ ಕಣ್ಣು ಬಾಯಿ ಮುಚ್ಚಿ ಕುಳಿತಿದೆ ಎಂದು ತಮ್ಮ ಅಸಹನೆಯನ್ನು ತೋಡಿಕೊಂಡರು.
ಲಿವಿಂಗ್ ಟುಗೆದರ್ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ಕಥಾ ಹಂದರ ಈ ಚಿತ್ರಕ್ಕಿದೆ. ಅಂದಹಾಗೆ ರಾಧಿಕಾ ಗಾಂಧಿ ಮುಖ್ಯಭೂಮಿಕೆಯಲ್ಲಿರುವ ಚಿತ್ರದ ನಾಯಕ ನಟ ನಿತಿನ್. ಈ ಚಿತ್ರದಲ್ಲಿ ಶ್ರದ್ಧಾ ದಾಸ್, ಪೂಜಾಗಾಂಧಿ ಕೂಡ ಅಭಿನಯಿಸಿದ್ದಾರೆ. ಶಿವಕುಮಾರ್ ಅಂಚೆಹಳ್ಳಿ ಎಂಬುವವರು ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. ಚಿತ್ರ ಡಿಸೆಂಬರ್‌ಗೆ ತೆರೆಕಾಣುವ ಸಿದ್ಧತೆಯಲ್ಲಿದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











