ಪಂಚರಂಗಿ ಧ್ವನಿಸುರುಳಿ ಸಖತ್ ಹಾಟ್ ಮಗಾ!
ಯೋಗರಾಜ್ ಭಟ್ಟರ ಮಹತ್ವಾಕಾಂಕ್ಷಿ 'ಪಂಚರಂಗಿ' ಚಿತ್ರದ ಧ್ವನಿಸುರುಳಿ ಸಖತ್ ಹಾಟ್ ಆಗಿ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ರೇಡಿಯೋ ಮಿರ್ಚಿ 98.3 ಎಫ್ ಎಂ ಮುಖಾಂತರ ಶುಭ ಶುಕ್ರವಾರ (ಆ.13) ಪಂಚರಂಗಿ ಧ್ವನಿಸುರುಳಿಯನ್ನು ಬಿಡುಗಡೆ ಮಾಡಲಾಯಿತು.
ನಮ್ಮ ಪೋರಿ ಠಪೋರಿ ರಚನಾ ಜೊತೆ ಬೆಳಗಿನ 'ಹಾಯ್ ಬೆಂಗಳೂರು'(ಬೆಳಗ್ಗೆ 7 ರಿಂದ 11 ಗಂಟೆ) ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್, ದಿಗಂತ್ ಮತ್ತು ನಿಧಿ ಸುಬ್ಬಯ್ಯ ಮನಬಿಚ್ಚಿ ಕೇಳುಗರೊಂದಿಗೆ ಮಾತನಾಡಿದರು.
ರಚನಾ ಜೊತೆ ಹರಟೆ ಹೊಡೆಯುತ್ತಾ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ರೇಡಿಯೋ ಮಿರ್ಚಿ ಕೇಳುಗರಿಗೆ ಹಬ್ಬದೂಟ ಮಾಡಿಸಿದರು. ಯೋಗರಾಜ್ ಭಟ್ಟರು ತಮ್ಮ ಎಂದಿನ ಹಾಸ್ಯ ಚಟಾಕಿಗಳೊಂದಿಗೆ ಕೇಳುಗರನ್ನು ರಂಜಿಸಿದರು. ಪೋರಿ ಠಪೋರಿ ರಚನಾ ತಮ್ಮ ಆರ್ ಜೆ ಕುರ್ಚಿಯನ್ನು ಯೋಗರಾಜ್ ಭಟ್ಟರಿಗೆ ಹಸ್ತಾಂತರಿಸಿದರು.
ಕುರ್ಚಿ ಮಹಾತ್ಮೆಯೋ ಏನೋ ಭಟ್ಟರು ಕೂರುತ್ತಿದ್ದಂತೆ ರಚನಾ ತರಹ ವಟ ವಟ ಎಂದು ಮಾತನಾಡ ತೊಡಗಿದರು. ರಚನಾ ಮತ್ತು ಭಟ್ಟರ ನಡುವೆ ಚುಟುಕುಗಳು ವಿನಿಮಯವಾಗುತ್ತಿದ್ದರೆ ಕೇಳುಗರಿಗೆ ಮೃಷ್ಟಾನ್ನದಂತಿತ್ತು. ಇವರಿಬ್ಬರು ಹಾಸ್ಯ ಚಟಾಕಿಗಳನ್ನು ಹಾರಿಸುತ್ತಿದ್ದರೆ ದಿಗಂತ್ ಮತ್ತು ನಿಧಿ ಸುಬ್ಬಯ್ಯ ಕೇಳುತ್ತಾ ಕೂರಲು ಸಾಧ್ಯವೆ?
ಅವರು ಒಂದು ಕೈ ನೋಡೆ ಬಿಡೋಣ ಎಂದು ಮಾತಿಗೆ ಇಳಿದರು. ಏನಾಶ್ಚರ್ಯ! ರಚನಾ ಮತ್ತು ನಿಧಿ ಸುಬ್ಬಯ್ಯ ಒಂದಾದರೆ ಯೋಗರಾಜ್ ಭಟ್ಟರ ಜೊತೆ ದಿಗಂತ್ ಕೈಜೋಡಿಸಿದ. ಮಾತಿನಲ್ಲಿ ಮಹಿಳೆಯರನ್ನು ಗೆಲ್ಲಲು ಸಾಧ್ಯವೆ? ಕಿತ್ತೂರು ಚೆನ್ನಮ್ಮ ಮತ್ತು ಒನಕೆ ಓಬವ್ವ ಅವತಾರ ಎತ್ತಿದ ಇವರ ಕೈಗೆ ಸಿಕ್ಕ ಶತ್ರುಗಳಂತಾದರು ಭಟ್ಟರು ಮತ್ತು ದಿಗಂತ್.
ಒಂದು ಗಂಟೆ ಕಾಲ ನಡೆದ ಈ ಕಾರ್ಯಕ್ರಮ ಕೇಳುಗರ ಪಾಲಿಗೆ ರಸದೌತಣ ನೀಡಿತು. ಈ ಕಾರ್ಯಕ್ರಮದಲ್ಲಿ ದಿಗಂತ್ ಗೆ ನಿಧಿಸುಬ್ಬಯ್ಯ ಅವರಿಗೆ 10ಕ್ಕೆ 20 ಅಂಕ ಕೊಟ್ಟರು. ದಿಗಂತ್ ಕೆನ್ನೆ ಮೇಲಿನ ಕುಳಿ ಮತ್ತ್ತಷ್ಟು ಆಳವಾಗಿ ಮೂಡಿತ್ತು. ತಾನೇನು ಕಮ್ಮಿ ಎಂಬಂತೆ ದಿಗಂತ್ ರೇಡಿಯೋ ಮಿರ್ಚಿ ರೀತಿಯೇ ನಿಧಿ ಸುಬ್ಬಯ್ಯ ಸಹ ಸಖತ್ ಹಾಟ್ ಮಗಾ! ಎಂದರು.


Click it and Unblock the Notifications











