ಪಂಚರಂಗಿ ಭಟ್ಟರು ತೆಂಡುಲ್ಕರ್ ಆದರೆ, ಕಾಯ್ಕಿಣಿ ದ್ರಾವಿಡ್!
ಸಖತ್ ಹಾಟ್ ರೇಡಿಯೋ ಸ್ಟೇಷನ್ ರೇಡಿಯೋ ಮಿರ್ಚಿ 98.3 ಯಲ್ಲಿ ಶುಕ್ರವಾರ (ಆ.13) 'ಪಂಚರಂಗಿ' ಚಿತ್ರದ ಧ್ವನಿಸುರುಳಿಯನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಶನಿವಾರ (ಆ.14) 'ಪಂಚರಂಗಿ' ಚಿತ್ರದಅಸಲಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಬೆಂಗಳೂರು ಗೋಲ್ಡನ್ ಪಿಂಚ್ ಹೋಟೆಲ್ ನಲ್ಲಿ ನೆರವೇರಿತು.
ಹೆಸರಾಂತ ಹಿನ್ನೆಲೆ ಗಾಯಕ ಸೋನು ನಿಗಂ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕ್ಯಾಸೆಟ್ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಕನ್ನಡ ಚಿತ್ರರಂಗದ ಬಹುತೇಕ ತಾರೆಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸೋನು ನಿಗಂ ಮಾತನಾಡುತ್ತಾ, ಇಲ್ಲಿಗೆ ಬಂದು ಕನ್ನಡ ಹಾಡಿನ ಆಲ್ಬಂ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು. ಇಲ್ಲಿನ ಸಂಗೀತ ನಿರ್ದೇಶಕರ ಶಿಸ್ತುಬದ್ಧ ಪ್ಲಾನ್ ಮೆಚ್ಚುವಂತದ್ದು. ಹಾಡಿನಲ್ಲಿ ಒಳ್ಳೆ ಪವರ್ ಇದೆ. ಚಿತ್ರತಂಡಕ್ಕೆ ನನ್ನ ಬೆಸ್ಟ್ ಆಫ್ ಲಕ್ ಎಂದು ಹೇಳಿದರು.
ಸೋನು ಜೊತೆ ಕ್ಯಾಸೆಟ್ ಬಿಡುಗಡೆ ಮಾಡುತ್ತಿರುವುದು ಹೆಮ್ಮೆ ಎನ್ನಿಸಿದೆ. ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಪುನೀತ್ ರಾಜ್ ಕುಮಾರ್ ಹಾರೈಸಿದರು. ಜಯಂತ್ ಕಾಯ್ಕಿಣಿ ಮಾತನಾಡಿ, ಯೋಗರಾಜ್ ಭಟ್ ತೆಂಡೂಲ್ಕರ್ ತರಹ ಆದರೆ ನಾನು ದ್ರಾವಿಡ್ ಇದ್ದಂಗೆ. ಕೆಲಸದಲ್ಲಿ ಭಟ್ಟರ ಇನ್ವಾಲ್ಮೆಂಟ್ ಮೆಚ್ಚುವಂತದ್ದು. ಅವರ ಚಿತ್ರವೆಂದರೆ ಜನರಿಗೆ ಬಹಳಷ್ಟು ನಿರೀಕ್ಷೆ ಇರುತ್ತದೆ. ಜನರ ನಿರೀಕ್ಷೆಗೆ ತಕ್ಕಂತೆ ಶ್ರಮವಹಿಸಿ ಅವರು ಚಿತ್ರ ತೆಗೆದಿದ್ದಾರೆಂದರು.
ಭಟ್ಟರ ಜೊತೆಗಿನ ನನ್ನ ಮೂರನೇ ಚಿತ್ರವಿದು. ಶ್ರಮವಹಿಸಿ ಟ್ಯೂನ್ ನೀಡಿದ್ದೇನೆ. ಚಿತ್ರ ಮತ್ತು ಆಡಿಯೋ ಹಿಟ್ ಆಗಲೆಂದು ವಿಷ್ ಮಾಡುತ್ತಿರುವುದಾಗಿ ಸಂಗೀತ ನಿರ್ದೇಶಕ ಮನೋಮೂರ್ತಿ ಹೇಳಿದರು. ಇದೇ ಸಂದರ್ಭದಲ್ಲಿ ಸೋನು ನಿಗಂ ತಮ್ಮ ನೆಚ್ಚಿನ ಹಿಂದಿ ಹಾಡೊಂದನ್ನು ಹಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದರು. ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್, ದುನಿಯಾ ಸೂರಿ, ದಿಗಂತ್, ಹರಿಕೃಷ್ಣ , ವಿ ಎಸ್ ಮೂರ್ತಿ, ಜಯಂತ್ ಕಾಯ್ಕಿಣಿ, ಚೇತನ್, ಚೇತನ್ ಸೊಸ್ಕಾ (ಹಿನ್ನೆಲೆ ಗಾಯಕ) ಮುಂತಾದವರು ಉಪಸ್ಥಿತರಿದ್ದರು.


Click it and Unblock the Notifications











