ಮಾಗಡಿ ಆಡಿಯೋ ರಿಲೀಸ್ ಫುಲ್ ಹೌಸ್ ಫುಲ್
ಶಿಷ್ಯ ಖ್ಯಾತಿಯ ದೀಪಕ್ ಚಿತ್ರ 'ಮಾಗಡಿ'ಯ ಧ್ವನಿ ಸುರುಳಿ ಬಿಡುಗಡೆ ಇತ್ತೀಚಿಗೆ ಚಾಮರಾಜ ಪೇಟೆಯ 'ಸಿಟಿ ಸೆಂಟರ್' ನಲ್ಲಿ ನೆರವೇರಿತು. ಅದೆಷ್ಟು ಜನ ಸೇರಿದ್ದರು ಅಂದರೆ ಜಾತ್ರೆಯನ್ನೇ ಮಾಡಿಬಿಡಬಹುದಿತ್ತು ಎಂಬಷ್ಟು. ಈ ಚಿತ್ರದ ನಿರ್ಮಾಪಕ ಬಾ. ಮಾ. ಹರೀಶ್ ಹಾಗೂ ನಿರ್ದೇಶಕ ಸುರೇಶ್ ಗೋ ಸ್ವಾಮಿ ತುಂಬಾ ಖುಷಿಯಾಗಿದ್ದರು. ಕಾರಣ, ಚಿತ್ರದ ಮುಹೂರ್ತ ಹಾಗೂ ಆಡಿಯೋ ಬಿಡುಗಡೆ ಎರಡಕ್ಕೂ 'ಕಿಚ್ಚ ಸುದೀಪ್' ಆಗಮಿಸಿದ್ದರು.
ಮಾಗಡಿ ಊರಿಗೆ ಪ್ರಸಿದ್ಧಿ ತಂದುಕೊಟ್ಟವರು ಕೆಂಪೇಗೌಡರು. ಸುದೀಪ್ ತೆರೆಯ ಮೇಲೆ 'ಕೆಂಪೇಗೌಡ'ರಾಗಿ ಮೆರೆದವರು. ಮಾಗಡಿ ತಂಡ ಕಿಚ್ಚರನ್ನು ನೆಚ್ಚಿಕೊಳ್ಳಲು ಅದೂ ಕಾರಣ ಆಗಿರಬಹುದು. ಸುದೀಪ್, "ದೀಪಕ್ ನನಗೆ ಚೆನ್ನಾಗಿ ಗೊತ್ತು. ಇನೋಸಂಟ್ ಅಂಡ್ ಸ್ಮಾರ್ಟ್. ವಿದೇಶದಲ್ಲಿ ಶೂಟಿಂಗ್ ನಲ್ಲಿದ್ದಾಗ ಟಿವಿಯೊಂದರಲ್ಲಿ ಬಂದ ನ್ಯೂಸ್ ನೋಡಿ ಅಪ್ ಸೆಟ್ ಆಗಿದ್ದೆ. ನಂತರ ಸುದ್ದಿ ಸುಳ್ಳೆಂದು ತಿಳಿದು ಖುಷಿಯಾದೆ" ಅಂದರು.
ಯಾವುದೇ ರಿಸ್ಕ್ ಶಾಟ್ ಬೇಡ ಎಂದ ಸುದೀಪ್ ಕಾಳಜಿಯ ಮಾತಿಗೆ ಅಲ್ಲಿದ್ದ ಎಲ್ಲರ ತಲೆ ಅಲ್ಲಾಡಿತು. ಸುದೀಪ್ ಜೊತೆಯಲ್ಲಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ. ವಿ. ಚಂದ್ರಶೇಖರ್ ಶುಭಕೋರಿದರು. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಹಾಡು ಕೇಳಿ ಅಭಿಪ್ರಾಯ ತಿಳಿಸಲು ಸುದೀಪ್ ಗೆ ವಿನಂತಿಸಿಕೊಂಡರು. ಸಿನಿಮಾ ಬಿಡುಗಡೆ ದಿನ ಮತ್ತೆ ಸಿಗುವುದಾಗಿ ಹೇಳಿ ಎಲ್ಲರೂ ಹೊರಟಲ್ಲಿಗೆ ಕಾರ್ಯಕ್ರಮಕ್ಕೆ 'ಶುಭಂ.' (ಒನ್ ಇಂಡಿಯಾ ಕನ್ನಡ)


Click it and Unblock the Notifications











