»   » ಅಕ್ಕ ತಂಗಿ, ಆಕ್ಸಿಡೆಂಟ್, ಜಿಂದಗಿ ಸಂಗೀತ ಪೂರ್ಣ

ಅಕ್ಕ ತಂಗಿ, ಆಕ್ಸಿಡೆಂಟ್, ಜಿಂದಗಿ ಸಂಗೀತ ಪೂರ್ಣ

Subscribe to Filmibeat Kannada

ಕರ್ನಾಟಕ ಚಲನಚಿತ್ರರಂಗದ ಇತ್ತೀಚಿನ ಸುದ್ದಿಗಳಂತೆ, ಅಕ್ಕತಂಗಿ, ಅಕ್ಸಿಡೆಂಟ್ ಹಾಗೂ ಜಿಂದಗಿ ಚಿತ್ರಗಳು ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಳಿಸಿದ್ದು, ಮುಕ್ಕಾಲು ಪಾಲು ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಿದ್ಧವಾಗಿದೆ.

ಅಕ್ಕ ತಂಗಿ

ಯಶಸ್ವಿ ನಿರ್ಮಾಪಕ ರಮೇಶ್ ಯಾದವ್ ಅವರ 16ನೇ ಕಾಣಿಕೆ 'ಅಕ್ಕ ತಂಗಿ'ಗೆ ಪ್ರಸಾದ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಕಾರ್ಯ ಮುಕ್ತಾಯಗೊಂಡಿದೆ. ಸಹೋದರಿಯರ ಭಾವನಾತ್ಮಕ ಸಂಬಂಧಗಳ ಸನ್ನಿವೇಶಗಳನ್ನೊಳಗೊಂಡಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.

'ಕೃಷ್ಣ' ಚಿತ್ರದ ಪ್ರಚಂಡ ಯಶಸ್ಸಿನ ಸಂತಸದಲ್ಲಿರುವ ನಿರ್ಮಾಪಕರು 'ಅಕ್ಕ ತಂಗಿ'ಯರಿಗೆ ಮಲೆಮಹದೇಶ್ವರ ಬೆಟ್ಟ ಹಾಗೂ ಸುತ್ತಲ್ಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಗೋವಿನ ಹಾಡು ಹಾಗೂ ಕವಿ ಸತ್ಯಾನಂದ ಪತ್ರೊಟ ಅವರ 'ಬಡವನಾದರೆ ಏನು ಪ್ರಿಯೆ' ಎಂಬ ಅರ್ಥಪೂರ್ಣ ಗೀತೆಗಳನ್ನು ಚಿತ್ರದಲ್ಲಿ ಅಳವಡಿಸುವುದರ ಮೂಲಕ ಹಲವು ಹೊಸತುಗಳನ್ನು ನೀಡುತ್ತಿದ್ದಾರೆ ರಮೇಶ್‌ಯಾದವ್.

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಶೃತಿ ಅಕ್ಕರೆಯ ಅಕ್ಕನಾಗಿ 'ದುನಿಯಾ' ಖ್ಯಾತಿಯ ರಶ್ಮಿ ವಾತ್ಸಲ್ಯಮಯಿ ತಂಗಿಯಾಗಿ ಅಭಿನಯಿಸುತ್ತಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಮೋಹನ್, ಶರಣ್, ಕಿಶೋರ್, ಎಂ.ಎನ್.ಲಕ್ಷ್ಮೀದೇವಿ, ಕಿಶೋರಿಬಲ್ಲಾಳ್, ಶಂಕರ್‌ರಾವ್, ಬಿರಾದಾರ್ ಮುಂತಾದವರಿದ್ದಾರೆ.

ಗಿನ್ನಿಸ್ ದಾಖಲೆಗೆ ಭಾಜನವಾಗಿರುವ 'ಶಾಂತಿ' ಚಿತ್ರದ ನಿರ್ಮಾಪಕರಾದ ರಮೇಶ್‌ಯಾದವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಸ್.ಮಹೇಂದರ್ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಬಿ.ಸುರೇಶ್‌ಬಾಬು ಛಾಯಾಗ್ರಹಣ, ಪಿ.ಆರ್.ಸೌಂದರ್ ರಾಜ್ ಸಂಕಲನ, ವಿ.ಮನೋಹರ್ ಸಂಗೀತ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಸತ್ಯಾನಂದ ಪತ್ರೊಟ, ಕಲ್ಯಾಣ್, ಕವಿರಾಜ್, ಎಸ್.ಮಹೇಂದರ್ ಗೀತರಚನೆ, ಜಿ.ಮೂರ್ತಿ ಕಲೆ,ಫೈವ್ ಸ್ಟಾರ್ ಗಣೇಶ್ ನೃತ್ಯ 'ಅಕ್ಕ ತಂಗಿ'ಯರಿಗಿದೆ.


ಆಕ್ಸಿಡೆಂಟ್
ವಿಶಿಷ್ಟ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ.ರಘುನಾಥ್ ಹಾಗೂ ಸ್ನೇಹಿತರು ಪ್ರಥಮ ಬಾರಿಗೆ ನಿರ್ಮಿಸಿರುವ ಹಾಗೂ ನಟ ರಮೇಶ್‌ಅರವಿಂದ್ ನಿರ್ದೇಶನದ ಮೂರನೇ ಚಿತ್ರ 'ಆಕ್ಸಿಡೆಂಟ್'ಗೆ ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ಪೂರ್ಣಗೊಂಡಿದೆ.

ಇತ್ತೀಚೆಗೆ ಏರ್‌ಟೆಲ್ ಸಂಸ್ಥೆಯ ಮೂಲಕ ರಿಂಗ್‌ಟೋನ್, ಸಂಭಾಷಣ್, ವೀಡಿಯೋಕ್ಲಿಪ್ಸ್ ಹಾಗೂ ಚಿತ್ರದ ಸ್ಟಿಲ್ಸ್ ಗಳ ಡೌನ್‌ಲೋಡ್ ಬಿಡುಗಡೆ ಮಾಡಿಕೊಂಡಿರುವ 'ಆಕ್ಸಿಡೆಂಟ್' ಬೇಸಿಗೆ ರಜದಲ್ಲಿ ಮಜಾ ನೀಡಲು ಮುಂದಿನ ತಿಂಗಳು ಕರ್ನಾಟಕದಾದ್ಯಂತ ಪ್ರದರ್ಶನವಾಗಲಿದೆ.

ನಟ ರಮೇಶ್ ಅರವಿಂದ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವರುವ ಈ ಚಿತ್ರಕ್ಕೆ ಜಿ.ಎಸ್.ಭಾಸ್ಕರ್ ಅವರ ಛಾಯಾಗ್ರಹಣವಿದೆ. ರಿಕ್ಕಿಕೆಜ್ ಸಂಗೀತ, ರಾಜೇಂದ್ರ ಕಾರಂತ್ ಸಂಭಾಷಣೆ, ಪಿ.ಆರ್.ಸೌಂದರ್‌ರಾಜ್ ಸಂಕಲನ, ರವಿವರ್ಮ ಸಾಹಸ, ರಮೇಶ್‌ದೇಸಾಯಿ ಕಲೆ, ಟಿ ಎನ್ ಎಲ್ ಶಾಸ್ತ್ರಿ ನಿರ್ಮಾಣ ನಿರ್ವಹಣೆ, ಕೆ.ಬಿ.ಹಿರೇಮಠ್ ಹಾಗೂ ಬಿ.ಮೋಹನ್ ಸಹನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಮೇಶ್ ಅರವಿಂದ್, ರೇಖಾ, ಪೂಜಾಗಾಂಧಿ, ಮೋಹನ್, ತಿಲಕ್, ಬಾಲಾಜಿ, ದಿನೇಶ್‌ಬಾಬು, ಚೈತನ್ಯ ಮುಂತಾದವರಿದ್ದಾರೆ. ರವಿಜೋಷಿ 'ಆಕ್ಸಿಡೆಂಟ್'ನ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.


ಜಿಂದಗಿ
ಸಪ್ತಗಿರಿ ಗ್ರೂಪ್ ಲಾಂಛನದಲ್ಲಿ ಎ.ಟಿ.ಲೋಕೇಶ್ ನಿರ್ಮಿಸಿರುವ, ಪ್ರೀತಿ ಜೀವನದ ಹಾದಿಯನ್ನು ಬದಲಿಸುತ್ತದೆ. ಈ ಜಿಂದಗಿ ಅಂದುಕೊಂಡ ಹಾಗೆ ಸಾಗುವುದಿಲ್ಲ ಎಂದು ಸಾರುವ 'ಜಿಂದಗಿ' ಚಿತ್ರಕ್ಕೆ ವಿಜಯ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಕಾರ್ಯ ಪೂರ್ಣಗೊಂಡಿದೆ.

ಮುಗಿಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿರುವ ಈ ಚಿತ್ರಕ್ಕೆ ಮೈಸೂರ್ ಮೋಹನ್ ಸಂಗೀತ ಸಂಯೋಜಿಸಿದ್ದಾರೆ. ಹಂಸಲೇಖ, ನಾಗೇಂದ್ರಪ್ರಸಾದ್, ಗೋಟೂರಿ ಗೀತರಚನೆ ಮಾಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಕೌರವ ವೆಂಕಟೇಶ್ ಸಾಹಸ, ಹೊಸ್ಮನೆ ಮೂರ್ತಿ ಕಲೆ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಜೀವ್, ಪ್ರಿಯಾಂಕ, ಹೇಮಶ್ರೀ, ಅವಿನಾಶ್, ಮಂಡ್ಯರಮೇಶ್, ನಮಿತಾರಾವ್, ಸಿಲ್ಲಿಲಲ್ಲಿಯ ಮಿತ್ರ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada