»   » ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ

Subscribe to Filmibeat Kannada


ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಭಕ್ತಿ ಪರಂಪರೆಗೆ ಸೇರಿದ ಚಿತ್ರಗಳ ಪೈಕಿ 1960ರಲ್ಲಿ ತೆರೆಕಂಡ 'ಭಕ್ತ ಕನಕದಾಸ'ಮನೋಜ್ಞವಾದುದು. ಈ ಚಿತ್ರದ 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ...' ಹಾಡನ್ನು ಎಷ್ಟು ಬಾರಿ ಆಲಿಸಿದರೂ ದಾಹ ಹಿಂಗುವುದಿಲ್ಲ. ಪಿ.ಬಿ. ಶ್ರೀನಿವಾಸ್‌ರವರ ಕಂಠಸಿರಿಯಿಂದ ಹೊಮ್ಮಿದ ಹಾಡಿಗೆ ಕನಕದಾಸರ ಪಾತ್ರದಲ್ಲಿ ರಾಜ್‌ರ ಮನೋಜ್ಞ ಅಭಿನಯ ಮತ್ತೆ ಮತ್ತೆ ನೆನಪಾಗುತ್ತದೆ. ಈ ಚಿತ್ರಕ್ಕೆ ಸಂಗೀತವನ್ನು ಎಂ. ವೆಂಕಟರಾಜು ಸಂಯೋಜಿಸಿದ್ದರು. ಪೋಷಕ ಪಾತ್ರಗಳಲ್ಲಿ ಉದಯಕುಮಾರ್, ಕೃಷ್ಣಕುಮಾರ್, ಹೆಚ್.ಆರ್.ಶಾಸ್ತ್ರಿ, ಅಶ್ವಥ್ ಮುಂತಾದವರು ನಟಿಸಿದ್ದರು. ವೈ.ಆರ್. ಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರವನ್ನು ಶ್ಯಾಮಪ್ರಸಾದ್ ಮೂವೀಸ್ ನಿರ್ಮಿಸಿತ್ತು.

ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವಿಚಾರಿಸಲು ಮತಿಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು|

ಏನ ಬಲ್ಲೆನು ನಾನು ನೆರೆಸುಜ್ನಾನಮೂರುತಿ ನೀನು
ನಿನ್ನ ಸಮಾನರುಂಟೇ ದೇವ ರಕ್ಷಿಸು ನಮ್ಮ ಅನವರತ ||
ದೇವ ... ದೇವ.... ದೇವ....

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ ಬಾಗಿಲನು ತೆರೆದು

ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರಿಧಿಯೊಳಿರಲೂ...
ಕರಿರಾಜ ಕಷ್ಟದಲಿ ಆದಿಮೂಲ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೆ ಬಾಗಿಲನು ತೆರೆದು

ಕಡುಕೋಪದಿಂ ಖಳನು ಖಡ್ಗವನೆ ಪಿಡಿದು..
ನಿನ್ನೊಡೆಯ ಎಲ್ಲಿಹನು ಎಂದು ನುಡಿಯೇ..
ಧೃಢ ಭಕುತಿಯಲು ಶಿಶುವು ಬಿಡದೆ ನಿನ್ನನು ಭಜಿಸೆ..
ಸಡಗರದಿ ಸ್ತಂಭದಿಂದೊಡೆದೆ ನರಹರಿಯೆ ಬಾಗಿಲನು ತೆರೆದು...

ಯಮಸುತನ ರಾಣಿಗೆ ಅಕ್ಷಯವಸನವನಿತ್ತೆ
ಸಮಯದಲಿ ಅಜಮಿಳನ ಪೊರೆದೇ...
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿಕೇಶವನೇ ಬಾಗಿಲನು ತೆರೆದು...

ಬಾಗಿಲನು ತೆರೆದು
ಬಾಗಿಲನು ತೆರೆದು... ಸೇವೆಯನು ಕೊಡೊ ಹರಿಯೇ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada