»   » ಗುರುಕಿರಣ್‌ರ ಹೊಸ ಅಲೆಗೆ ಐವತ್ತರ ಮೋಡಿ!

ಗುರುಕಿರಣ್‌ರ ಹೊಸ ಅಲೆಗೆ ಐವತ್ತರ ಮೋಡಿ!

Subscribe to Filmibeat Kannada

ತಮ್ಮ ಮೆಚ್ಚಿನ ನಾಯಕ ಅಥವಾ ನಾಯಕಿಯ ಚಿತ್ರಗಳನ್ನು ನೆಚ್ಚಿಕೊಂಡು ಸಿನೆಮಾ ನೋಡುವ ಕಾಲವೊಂದಿತ್ತು. ಆದರೆ ಬರು ಬರುತ್ತಾ ಚಿತ್ರದ ನಿರ್ದೇಶನ, ಸಂಗೀತ, ಸಾಹಿತ್ಯ , ಹಿನ್ನಲೆ ಗಾಯನ ಯಾರದು? ಎಂದು ಕೇಳುವ ಪ್ರಬುದ್ಧ ಪ್ರೇಕ್ಷಕ ವಲಯ ಹುಟ್ಟಿಕೊಂಡಿತು. ಸಂಗೀತ ಪ್ರಧಾನ ಚಿತ್ರಗಳು ತೆರೆಕಂಡವು.

ಷಡ್ಜ

ಪಿ.ಶ್ಯಾಮಣ್ಣ, ಪಿ.ಕಾಳಿಂಗರಾಯ, ಜಿ.ಕೆ.ವೆಂಕಟೇಶ್,ವಿಜಯಭಾಸ್ಕರ್,ಟಿ.ಜಿ.ಲಿಂಗಪ್ಪ, ರಾಜನ್-ನಾಗೇಂದ್ರ... ಮುಂತಾದ ಸಂಗೀತ ನಿರ್ದೇಶಕರು ಅಂದು ಕೊಟ್ಟ ಹಾಡುಗಳು ಇಂದಿಗೂ ಕಿವಿಯ ಮೇಲೆ ಬಿದ್ದರೆ ಮನಸ್ಸಿನ ಕಷ್ಟ ದುಃಖ ಮರೆಯುತ್ತೇವೆ. ಅಬ್ಬರದ ಸಂಗೀತ ಅಲೆಯಲ್ಲಿ ತೇಲಿ ಬಂದ ಕೆಲವು ಸಂಗೀತ ನಿರ್ದೇಶಕರು ಅಷ್ಟೇ ವೇಗವಾಗಿ ಮರೆಯಾದರು. ಕಿವಿಗೆ ಇಂಪಾದ ಸಂಗೀತ ಕೊಟ್ಟ ಸಂಗೀತ ನಿರ್ದೇಶಕರನ್ನು ಶ್ರೋತೃಗಳು ತಬ್ಬಿ ಹಿಡಿದರು. ಹಾಗೆ ಉಳಿದವರಲ್ಲಿ ಯುವ ಸಂಗೀತ ನಿರ್ದೇಶಕ ಗುರುಕಿರಣ್ ಸಹಾ ಒಬ್ಬರು. ಅವರ ಸಂಗೀತ ನಿರ್ದೇಶನದ 50ನೇ ಚಿತ್ರ 'ಸತ್ಯ ಇನ್ ಲವ್' ಬಿಡುಗಡೆಗೆ ಸಿದ್ಧವಾಗಿದೆ.

ಮಂಗಳೂರು ಮೂಲದ ಗುರುಕಿರಣ್ ಕನ್ನಡಿಗರಿಗೆ ಪರಿಚಯವಾಗಿದ್ದು ಉಪೇಂದ್ರ ನಿರ್ದೇಶನದ ಬುದ್ಧಿವಂತರಿಗೆ ಮಾತ್ರ ಎಂಬ ಅಡಿಬರಹದ 'ಎ' ಚಿತ್ರದ ಮೂಲಕ. ಅದು1998ರಲ್ಲಿ ಬಿಡುಗಡೆಯಾಗಿತ್ತು. ಹತ್ತು ವರ್ಷಗಳಲ್ಲಿ ಐವತ್ತು ಚಿತ್ರಗಳಿಗೆ ಸಂಗೀತ ನಿರ್ದೇಶನ. ಆಪ್ತಮಿತ್ರ, ಕರಿಯ, ಜೋಗಿ, ಚೆಲ್ಲಾಟ, ರಾಮ ಶಾಮ ಭಾಮ...ಚಿತ್ರಗಳ ಮೂಲಕ ಮರೆಯದ ಹಾಡುಗಳನ್ನು ಕೊಟ್ಟವರು.

ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರು ಸಿಗದೆ ಪಕ್ಕದ ರಾಜ್ಯಗಳಿಂದ ಕರೆತರಬೇಕಾದ ಪರಿಸ್ಥಿತಿ ಇತ್ತು. ಆದರೆ ನಮ್ಮ ಸಂಗೀತ ನಿರ್ದೇಶಕರನ್ನು ಪಕ್ಕದ ರಾಜ್ಯದವರು ಕರೆದುಕೊಂಡು ಹೋಗುವಂತ ಸನ್ನಿವೇಶ ಸೃಷ್ಟಿಸಿದವರು ಗುರುಕಿರಣ್‌ರಂಥ ಹೊಸ ಅಲೆಯ ಸಂಗೀತ ನಿರ್ದೇಶಕರು. ಹಾಗಂತ ಗುರುಕಿರಣ್ ತಾವಷ್ಟೇ ಬೆಳೆಯಲಿಲ್ಲ. ಹೊಸ ಪ್ರತಿಭೆಗಳನ್ನು ಹುಟ್ಟುಹಾಕಿದರು. ಸಾಕಷ್ಟು ಯುವ ಕವಿಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಹೊಸಬರೊಂದಿಗೆ ಕೆಲಸ ಮಾಡುವುದು ನನಗಿಷ್ಟ. ಅವರಿಂದ ಸಾಕಷ್ಟು ಕೆಲಸ ತೆಗೆಸಬಹುದು ಎನ್ನುತ್ತಾರೆ ಗುರುಕಿರಣ್.

ನೂರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುತ್ತೇನೋ ಇಲ್ಲವೊ ಗೊತ್ತಿಲ್ಲ. ಆದರೆ ಐವತ್ತು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವುದಂತೂ ಸಂತೋಷ ತಂದಿದೆ ಎನ್ನುತ್ತಾರೆ ಗುರುಕಿರಣ್. ಅವರ ಸಂಗೀತ ನಿರ್ದೇಶನದಲ್ಲಿ ಮತ್ತಷ್ಟು ಚಿತ್ರಗಳು ಮೂಡಿಬರಲಿ ಎಂದು ಹಾರೈಸೋಣ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada