ವರಮಹಾಲಕ್ಷ್ಮಿ ಹಬ್ಬದ ದಿನ ಮನಸಾರೆ ಆಡಿಯೋ
ಪ್ರೇಕ್ಷಕರ ಕುತೂಹಲ ಕೆರಳಿಸುತ್ತಿರುವ ಯೋಗರಾಜ್ ಭಟ್ ರ 'ಮನಸಾರೆ' ಚಿತ್ರದ ಧ್ವನಿಸುರುಳಿ ಬಿಡುಗಡೆಗೆ ಮುಹೂರ್ತ ನಿರ್ಧಾರವಾಗಿದೆ. ವರಮಹಾಲಕ್ಷಿ ಹಬ್ಬದ ದಿನ ಅಂದರೆ ಜುಲೈ 31ರಂದು ಮನೋಮೂರ್ತಿ ಸಂಗೀತ ಸಂಯೋಜಿಸಿರುವ 'ಮನಸಾರೆ' ಸಿಡಿ ಮತ್ತು ಧ್ವನಿಸುರುಳಿಗಳು ಮಾರುಕಟ್ಟೆಗೆ ಲಗ್ಗೆ ಹಾಕಲಿವೆ.
ಮಡಿಕೇರಿಯ ಬಂಧೀಖಾನೆಯಲ್ಲಿ 65 ದಿನಗಳ ಕಾಲ ಮನಸಾರೆ ಚಿತ್ರೀಕರಿಸಿದ್ದೇವೆ. ಚಿತ್ರದ ಮೇಲೆ ಗಾರ್ಸಿಯಾ ಗಾಬ್ರಿಯಲ್ ಅವರ ಕಾದಂಬರಿ ಆಧಾರಿತ 'ವಾರ್ಡ್ ನಂ.9'ನ ಪ್ರಭಾವ ಶೇ.10ರಷ್ಟಿದೆ. ಒಟ್ಟಾರೆ ಪ್ರೇಮದ ಅಂಶಗಳನ್ನು ಒಳಗೊಂಡಿರುವ ಮನರಂಜನಾತ್ಮಕ ಸಿನಿಮಾ ಎನ್ನುತ್ತಾರೆ ನಿರ್ದೇಶಕ ಯೋಗರಾಜ್ ಭಟ್.
ರಾಕ್ ಲೈನ್ ಪ್ರೊಡಕ್ಷನ್ಸ್ ನ ಮಾಲೀಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ರಾಕ್ ಲೈನ್ ವೆಂಕಟೇಶ್ ಮಾತನಾಡುತ್ತಾ, ಯೋಗರಾಜ್ ಭಟ್ ಹಾಗೂ ಚಿತ್ರತಂಡದ ದುಡಿಮೆಗೆ ಮನಸಾರೆ ಕನ್ನಡಿ ಹಿಡಿಯುತ್ತದೆ ಎಂದರು. ಮುಂಗಾರು ಮಳೆಯ ನಂತರ ಮನಸಾರೆ ಚಿತ್ರಕ್ಕೆ ಯೋಗರಾಜ್ ಭಟ್ ರೊಂದಿಗೆ ಕೆಲಸ ಮಾಡಿದ್ದು ನಿಜಕ್ಕೂ ಖುಷಿ ಕೊಟ್ಟಿದೆ ಎನ್ನುತ್ತಾರೆ ಮನೋಮೂರ್ತಿ.
ಮುಂಗಾರು ಮಳೆ ಮತ್ತು ಗಾಳಿಪಟ ಚಿತ್ರಗಳ ನಂತರ ಭಟ್ ರೊಂದಿಗೆ ದಿಗಂತ್ ನಟಿಸುತ್ತಿರುವ ಮೂರನೇ ಚಿತ್ರವಿದು. ಪ್ರತಿಷ್ಠಿತ ರಾಕ್ ಲೈನ್ ಬ್ಯಾನರಿನಲ್ಲಿ ನಟಿಸುತ್ತಿರುವುದು ತುಂಬ ಖುಷಿಯಾಗಿದೆ ಎನ್ನುತ್ತಾರೆ ದಿಗಂತ್. ಮನಸಾರೆ ಚಿತ್ರ ದಾಖಲೆ ನಿರ್ಮಿಸುವ ವಿಶ್ವಾಸವನ್ನು ಐಂದ್ರಿತಾ ರೇ ವ್ಯಕ್ತಪಡಿಸಿದರು. ಅಂದಹಾಗೆ ಸೆಪ್ಟೆಂಬರ್ ತಿಂಗಳಲ್ಲಿ ಮನಸಾರೆ ತೆರೆಕಾಣಲಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











