ಶಿವರಾಜ್ ಕುಮಾರ್ 'ಮೈಲಾರಿ'ಗೆ ಗುರುಬಲ
ನವೆಂಬರ್ ತಿಂಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ 'ಮೈಲಾರಿ' ತೆರೆಗೆ ಧುಮುಕಲಿದೆ. ಈ ಚಿತ್ರದ ಸದ್ಯದ ಹಾಟ್ ಸುದ್ದಿ ಏನೆಂದರೆ, 'ಮೈಲಾರಿ' ಆಡಿಯೋ ನಿರೀಕ್ಷೆಗೂ ಮೀರಿ ಮಾರಾಟವಾಗಿದೆ. ಮೂಲಗಳ ಪ್ರಕಾರ, ಬಿಡುಗಡೆಯಾದ ಮೊದಲ ದಿನವೇ 22 ಸಾವಿರ ಕಾಪಿಗಳು ಖರ್ಚಾಗಿರುವುದು.
ಗುರುಕಿರಣ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ 'ಮೈಲಾರಿ'ಗೆ ಗುರುಬಲ ಕೂಡಿಬಂದಂತಿದೆ. ಚಿತ್ರದ ಒಂದು ಹಾಡನ್ನು ಸ್ವತಃ ಗುರು ಬರೆದಿದ್ದು ಅವರೇ ಹಾಡಿದ್ದಾರೆ. ಹಾಗೆಯೇ 'ಮೈಲಾರಿ' ಚಿತ್ರದ "ಮೈಲಾಪುರದ ಮೈಲಾರಿ..." ಹಾಡನ್ನು ಪುನೀತ್ ಹಾಡಿರುವುದು ವಿಶೇಷ.
ಮೊದಲೆ ಪೈರಸಿ ಹಾವಳಿಯಿಂದ ಕಂಗಾಲಾಗಿದ್ದ ಆಡಿಯೋ ಮಾರುಕಟ್ಟೆಗೆ 'ಮೈಲಾರಿ' ಹೊಸ ಚೈತನ್ಯ ತುಂಬಿದ್ದಾನೆ. ಆರ್ ಚಂದ್ರು ನಿರ್ದೇಶನದ ಚಿತ್ರದ ಆಡಿಯೊ ಈಗ ಬಿಸಿ ಬಿಸಿ ಬೋಂಡಾಗಳಂತೆ ಬಿಕರಿಯಾಗುತ್ತಿವೆ. ಆಡಿಯೋ ಮಾರುಕಟ್ಟೆಯಲ್ಲಿ 'ಮೈಲಾರಿ' ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾನೆ.
ಆನಂದ್ ಆಡಿಯೋದ ಮೋಹನ್ ಮಾತನಾಡುತ್ತಾ, ಶಿಡ್ಲಘಟ್ಟದಂತಹ ಗಡಿಪ್ರದೇಶದಲ್ಲಿ ಕನ್ನಡ ಸಿಡಿಗಳು 20ಕ್ಕಿಂತಲೂ ಹೆಚ್ಚಾಗಿ ಮಾರಾಟವಾಗಲ್ಲ. ಆದರೆ ನಮ್ಮ ಮೈಲಾರಿ ಸಿಡಿಗಳು ಮಾತ್ರ 200ಕ್ಕೂ ಅಧಿಕ ಮಾರಾಟವಾಗಿವೆ. ಮೈಲಾರಿಯ ಈ ಅದ್ಭುತ ಪ್ರತಿಕ್ರಿಯೆ ಸಂತಸ ತಂದಿದೆ ಎಂದಿದ್ದಾರೆ.
ಚಿತ್ರದ ಧ್ವನಿಸುರುಳಿಯನ್ನು ಅಧಿಕೃತವಾಗಿ ಇನ್ನೂ ಬಿಡುಗಡೆ ಮಾಡಿಲ್ಲ. ಇದಕ್ಕಾಗಿ ಚಿತ್ರದುರ್ಗದಲ್ಲಿ ಅದ್ದೂರಿ ಸಮಾರಂಭವನ್ನು ಆಯೋಜಿಸಲಿದ್ದೇವೆ. ಸುಮಾರು ರು. 18 ಲಕ್ಷದಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಆಡಿಯೋ ಬಿಡುಗಡೆ ಸಮಾರಂಭಕ್ಕೆ ತೆಲುಗಿನ ಜನಪ್ರಿಯನಟ ಅಲ್ಲು ಅರ್ಜುನ್ ಅವರನ್ನು ಆಹ್ವಾನಿಸುತ್ತಿರುವುದಾಗಿ ಚಿತ್ರದ ನಿರ್ದೇಶಕ ಆರ್ ಚಂದ್ರು ತಿಳಿಸಿದ್ದಾರೆ.


Click it and Unblock the Notifications











