»   » ಮುಂಬೈನಲ್ಲೂ ಮನೋಮೂರ್ತಿ ಸಂಗೀತ ವರ್ಷ

ಮುಂಬೈನಲ್ಲೂ ಮನೋಮೂರ್ತಿ ಸಂಗೀತ ವರ್ಷ

Subscribe to Filmibeat Kannada

ಅನಿಸುತಿದೆ ಯಾಕೋ ಇಂದು... ಹಾಡಿನ ಹ್ಯಾಂಗೋವರ್‌ನಿಂದ ನಾನಂತೂ ಯಾವಾಗಲೋ ಹೊರಬಂದಿದೀನಿ. ಆದರೆ ಜನ ಇನ್ನೂ ಆ ಗುಂಗಿನಲ್ಲೇ ಇದ್ದಾರೆ. ನನ್ನ ಈ ಬೆಳವಣಿಗೆ ನನ್ನನ್ನು ಯಾವುದೇ ರೀತಿ ಕಾಡದ ಹಾಗೆ ಎಚ್ಚರಿಕೆ ವಹಿಸಿದ್ದೇನೆ ಎನ್ನುತ್ತಾರೆ ಮನೋಮೂರ್ತಿ.

"ಮಾದೇಶ" ಚಿತ್ರ ಬಿಟ್ಟು ಮನೋಮೂರ್ತಿ ಅವರ ಕೈಯಲ್ಲಿ "ಮೊಗ್ಗಿನ ಮನಸು", "ಜನ್ಮ ಜನ್ಮದಲ್ಲೂ", "ಮುತ್ತುರಾಜ್", "ರಾಕ್‌ಲೈನ್ ಪ್ರೊಡಕ್ಷನ್ಸ್", ಪ್ರೀತಂ ಗುಬ್ಬಿಯ ಚಿತ್ರಗಳೂ ಇವೆ. ಅವರು ಬೇಕಾಬಿಟ್ಟಿಯಾಗಿ ಚಿತ್ರಗಳನ್ನು ಒಪ್ಪುತ್ತಿಲ್ಲ ಅನ್ನುವುದಕ್ಕೆ ಇದೇ ನಿದರ್ಶನ. ಇಷ್ಟರಲ್ಲೇ ಆಲ್ಬಂ ಒಂದನ್ನು ಬಿಡುಗಡೆ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ. ಅದು ಏನು, ಎತ್ತ ಎಂದು ಸದ್ಯದಲ್ಲೇ ತಿಳಿಸುತ್ತೇನೆ ಎಂದಷ್ಟೇ ಹೇಳಿ ಸಂಗೀತಾಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ ಮನೋ ಮೂರ್ತಿ.

ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಒಮ್ಮೆ ಗೋವಾಗೆ ಹೋಗಿದ್ದರಂತೆ. ಅಲ್ಲಿನ ರೆಸ್ಟೋರೆಂಟ್ ಒಂದರಲ್ಲಿ 'ಅನಿಸುತಿದೆ ಯಾಕೋ ಇಂದು' ಹಾಡನ್ನು ಬ್ಯಾಂಡ್‌ನವರು ನುಡಿಸುತ್ತಿರುವುದನ್ನು ಕೇಳಿ, ಅರೆ ಇದೇನಿದು, ಈ ಹಾಡು ನಿಮಗ್ಹೇಗೆ ಗೊತ್ತು? ಇದರ ಸಂಗೀತ ನಿರ್ದೇಶಕ ಯಾರು ಅಂತ ನಿಮಗೆ ಗೊತ್ತಾ? ಅಂತ ಕೇಳಿದ್ದಕ್ಕೆ. ಇಲ್ಲಾ ಗುರು ಎಂದು ತಲೆ ಆಡಿಸಿ ಸಿ.ಡಿ. ತಂದು ತೋರಿಸಿದರಂತೆ. ಆ ಟ್ಯೂನ್‌ಗಳ ಹಿಂದಿರುವ ಕೈಗಳು ಯಾವುದು ಎಂದು ತಿಳಿಯದೆ ಆ ಹಾಡನ್ನು ಇಷ್ಟ ಪಡುತ್ತಾರೆ ಎಂದರೆ, ಒಬ್ಬ ಸಂಗೀತ ನಿರ್ದೇಶಕನಿಗೆ ಇದಕ್ಕಿಂತಲೂ ದೊಡ್ಡ ಗೌರವ ಇನ್ನೇನು ಬೇಕು ಎಂದು ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚುತ್ತಾರೆ ರಾಜೇಶ್ ರಾಮನಾಥ್.

ಸರಿ, ಮನೋಮೂರ್ತಿ ಕನ್ನಡ ಕಂಪನ್ನು ದೇಶದೆಲ್ಲೆಡೆ ಪಸರಿಸಿದರು. ಮನೆ ಮಾತಾಗಿ ಹೋದರು. ಆದರೂ ಬಾಲಿವುಡ್ ಮಂದಿ ಕಣ್ಣಿಗೆ ಇನ್ನೂ ಬಿದ್ದಿಲ್ವಲ್ಲ , ಬಾಲಿವುಡ್ ಅವರಿಗೆ ಇನ್ನೂ ಎಷ್ಟು ದೂರ? ಇದೇ ಪ್ರಶ್ನೆಯನ್ನು ಮನೋಮೂರ್ತಿಯವರ ಎದುರಿಗೇ ಇಟ್ಟರೆ. ಅರೆ! ಇಷ್ಟು ಬೇಗ ನಿಮಗ್ಹೇಗೆ ಸುಳಿವು ಸಿಕ್ಕಿತು ಅಂತ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಹಾಗಾಗಿ ಅವರ ಬಾಲಿವುಡ್ ಪ್ರವೇಶ ಖಚಿತವಾಗಿದೆ. ಈಗವರು ಅಮೆರಿಕಾ, ಬೆಂಗಳೂರು, ಬಾಂಬೆ ಅಂತ ಸುತ್ತುತ್ತಿದ್ದರೂ ಹೆಚ್ಚಾಗಿ ಬಾಂಬೆಯಲ್ಲೇ ಕಳೆಯುತ್ತಿದ್ದಾರೆ. ಏಕೆಂದರೆ ಬಾಲಿವುಡ್ ಮಂದಿಗೆ ಸ್ಪರ್ಧೆ ಹಾಗೂ ಮರೆವು ಎರಡೂ ಹೆಚ್ಚು. ನೆನಪಾದಾಗ ಫೋನ್ ಮಾಡಿ ಬನ್ನಿ ಅನ್ನುತ್ತಾರೆ. ಆಗ ಹೋಗಲಿಲ್ಲ ಅಂದ್ರೆ ಅವಕಾಶ ಕೈಜಾರಿಹೋಗಿರುತ್ತದೆ.

ಮನೋಮೂರ್ತಿ ಬಾಲಿವುಡ್‌ನಲ್ಲಿ ಕಳೆದು ಹೋದರೆ ನಮಗೆ ತ್ರಾಸ್ ಆಗಲ್ವಾ? ಹಾಗೇನೂ ಇಲ್ಲ. ನನ್ನ ಪ್ರಥಮ ಆದ್ಯತೆ ಕನ್ನಡ, ಅದೆಂದೂ ತಪ್ಪುವುದಿಲ್ಲ ಎನ್ನುತ್ತಾರೆ ಮೂರ್ತಿ. ಬಾಲಿವುಡ್‌ನಲ್ಲಿ ಕನ್ನಡದ ಗಾಯಕರಿಗೆ ಅವಕಾಶ ಕೊಡುತ್ತೇನೆ. ಇದು ನನ್ನ ಕನಸು. ನಮ್ಮವರು ಯಾವುದರಲ್ಲೂ ಕಡಿಮೆ ಇಲ್ಲ. ಹೊಸ ಪ್ರತಿಭೆ, ಹೊಸತನಗಳಿಗೆ ನನ್ನ ಸಂಗೀತದಲ್ಲಿ ಅವಕಾಶವಿದೆ ಎಂದು ಮನೋಮೂರ್ತಿ ಹೇಳುತ್ತಾರೆ. ಬಾಲಿವುಡ್‌ನಲ್ಲೂ ಸಂಗೀತದ ಮಳೆ ಸುರಿದು, ಕನ್ನಡದ ಪ್ರತಿಭೆಗಳಿಗೂ ಬಾಲಿವುಡ್‌ನಲ್ಲಿ ಅವಕಾಶ ದೊರೆಯಲಿ. ಬಾಲಿವುಡ್‌ನವರು ಇಲ್ಲಿ ಬಂದು ಹಾಡುವಾಗ, ಇಲ್ಲಿಯವರು ಅಲ್ಲಿಗೆ ಹೋಗಿ ಯಾಕೆ ಹಾಡಬಾರದು? ಒಟ್ಟಿನಲ್ಲಿ ನಮ್ಮ ಕನ್ನಡದ ಪ್ರತಿಭೆಗಳು ಎಲ್ಲಿಗೇ ಹೋದರೂ ನಮ್ಮ ನೆಲವನ್ನು ಮರೆಯದಿದ್ದರೆ ಅಷ್ಟೇ ಸಾಕು.

(ದಟ್ಸ್‌‍ ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada