»   » ಗಾಳಿಪಟ ಆಡಿಯೋ ಮಾರುಕಟ್ಟೆಯಲ್ಲಿ ನಂ.1

ಗಾಳಿಪಟ ಆಡಿಯೋ ಮಾರುಕಟ್ಟೆಯಲ್ಲಿ ನಂ.1

Subscribe to Filmibeat Kannada

'ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ, ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ' ಎಂದು ಗೋಲ್ಡನ್ ಸ್ಟಾರ್ ಗಣೇಶ್ ಗಾಳಿಪಟ ಚಿತ್ರದಲ್ಲಿ ಹಾಡಿದ್ದು ಎಲ್ಲರ ಮನಸೂರೆ ಮಾಡಿದೆ. ಆಡಿಯೋ ಮಾರುಕಟ್ಟೆಯಲ್ಲಿ ಗಾಳಿಪಟ ಚಿತ್ರಕ್ಕೆ ನಂ.1 ಸ್ಥಾನ ಗಳಿಸಲು ಕಾರಣವಾಗಿದೆ.

ಗಾಳಿಪಟ ಚಿತ್ರದ ಸಾಹಿತ್ಯ, ಸಂಗೀತ ಯೋಗರಾಜ ಭಟ್ಟರ ಹೇಳಿಕೆಯಂತೆ ನಿಧಾನವಾಗಿ ನಶೆಯೇರಿಸುತ್ತಿದೆ. ಕಳೆದ ವಾರದ ವರದಿಯ ಪ್ರಕಾರ ಗಾಳಿಪಟದ ಕ್ಯಾಸೆಟ್ ಹಾಗೂ ಸಿಡಿಗಳು ಬಿಸಿ ದೋಸೆಯಂತೆ ಖರ್ಚಾಗುತ್ತಿದೆ. ಈ ಯಶಸ್ಸಿನಿಂದ ಸಂಗೀತ ನಿರ್ದೇಶಕ ಹರಿಕೃಷ್ಣ ಉದ್ಯಮದಲ್ಲಿನ ಮೇರು ಸಂಗೀತಗಾರರ ಸಾಲಿಗೆ ಸೇರಿದಂತಾಗಿದೆ. ಸೋನು ನಿಗಂ ಗಾಯನ, ಚಿತ್ರಾರವರ 'ನಧೀಂ ಧೀಂ ತನ' ಹಾಡು ಸದಾ ಗುನುಗುವಂತೆ ಮಾಡುವಲ್ಲಿ ಹರಿಕೃಷ್ಣ ಯಶಸ್ವಿಯಾಗಿದ್ದಾರೆ.

ಎರಡನೇ ಸ್ಥಾನದಲ್ಲಿರುವ ದರ್ಶನ್ ಅಭಿನಯದ 'ಗಜ' ಚಿತ್ರಕ್ಕೆ ಕೂಡ ಹರಿಕೃಷ್ಣ ಅವರ ಸಂಗೀತವಿದ್ದು, ಯುವಜನರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. 'ಐತಲಕ್ಕಡಿ', 'ಬಂಗಾರಿ ಯಾರೇ ನೀ ಬುಲ್ ಬುಲ್', 'ಮಾತು ನನ್ನೋಳು..' ಹಾಡುಗಳು ಗಜ ಚಿತ್ರ ಸಂಗೀತವನ್ನು ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿ ಉಳಿಸಿವೆ.

ವರ್ಷದ ಅತ್ಯುತ್ತಮ ಸಂಗೀತ ಸಂಯೋಜನೆಯ ಹಾಡುಗಳನ್ನುಳ್ಳ ಪುನೀತ್ ಅಭಿನಯದ'ಮಿಲನ' ಚಿತ್ರ ಹಲವು ವಾರಗಳ ನಂತರ ಕೆಳಗಿಳಿದು ಮೂರನೇ ಸ್ಥಾನದಲ್ಲಿದೆ. ಮನೋಮೂರ್ತಿ ಅವರ ಮಧುರ ಸಂಯೋಜನೆಯಲ್ಲಿ ಮೂಡಿದ 'ನಿನ್ನಿಂದಲೇ..ನಿನ್ನಿಂದಲೇ', 'ಮಳೆ ನಿಂತು ಹೋದ ಮೇಲೆ' 'ಅಂತೂ ಇಂತೂ ಪ್ರೀತಿ ಬಂತು' , 'ಕದ್ದು ಕದ್ದು ..'ಹಾಡುಗಳು ಜನಮೆಚ್ಚುಗೆ ಗಳಿಸಿವೆ. ಇದಕ್ಕೆ ಜಯಂತ್ ಕಾಯ್ಕಿಣಿಯವರ ಸಾಹಿತ್ಯದ ಟಚ್ ಕೂಡ ಇರುವುದರಿಂದ ಟಾಪ್ ಸ್ಥಾನದಲ್ಲಿ ಮುಂದುವರೆದಿದೆ.

ಗುರುಕಿರಣ್ ಸಂಗೀತ ನಿರ್ದೇಶನದ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಪುನೀತ್ ಅವರ 'ಬಿಂದಾಸ್ 'ಚಿತ್ರದ ಸಂಗೀತ್ ನಾಲ್ಕನೇ ಸ್ಥಾನದಲ್ಲಿದೆ. ಬಿಂದಾಸ್ ಶೀರ್ಷಿಕೆ ಹಾಡು, ಥರ ಥರಾ ಒಂಥರಾ, ಗುಬ್ಬಚ್ಚಿ ಗೂಡಿನಲ್ಲಿ ಹಾಡುಗಳು ಯುವಜನರ ಮನಗೆದ್ದಿದೆ.

ಬಹುನಿರೀಕ್ಷಿತ ಶಿವರಾಜ್ ಕುಮಾರ್ ಅಭಿನಯದ 'ಸತ್ಯ ಇನ್ ಲವ್' ಚಿತ್ರದ ಹಾಡುಗಳು ದಿನೇ ದಿನೇ ಜನಪ್ರಿಯತೆ ಗಳಿಸುತ್ತಿದ್ದು, ಗುರುಕಿರಣ್ ಸಂಗೀತದಲ್ಲಿ ಮೂಡಿ ಬಂದಿದೆ. 'ಲವ್ಲಿ ಲವ್ಲಿ,', 'ಸತ್ಯ ಇಸ್ ಇನ್ ಲವ್ 'ಎಂಬ ಹಾಡುಗಳು ಯಶಸ್ಸಿನತ್ತ ದಾಪುಗಾಲಿಡುತ್ತಿವೆ.

(ದಟ್ಸ್ ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada