ಕಣ್ಣು ಬೇರೆ, ನೋಟವೊಂದು - ನಾವು ಭಾರತೀಯರು

ಕೆಎಸ್ ನ ಅವರ ನನವ ಪಲ್ಲವ(1989)ಸಾಹಿತ್ಯ ಗುಚ್ಛದಿಂದ ಆಯ್ದ 'ನಮ್ಮ ಹಾಡು' ಕವನ ಮುಂದೆ ಮೈಸೂರು ಮಲ್ಲಿಗೆ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಎಸ್ ಬಿ ಬಾಲಸುಬ್ರಮಣ್ಯಂ ಅವರ ಕಂಠದಲ್ಲಿ ಶಕ್ತಿಯುತವಾಗಿ ಹಾಡು ಹೊರ ಹೊಮ್ಮಿದೆ ಕೂಡಾ...ಕವಿ ಹಾಗೂ ಗಣತಂತ್ರದಿನದ ನಿಮಿತ್ತ ಈ ಗೀತ ಸಾಹಿತ್ಯ ನಿಮ್ಮ ಮುಂದೆ...
ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ ಮುತ್ತನಿಡುವ ಪೆರ್ದೆರೆಗಳ ಗಾನದಲ್ಲಿ
ಬಯಲು ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
ನೀಲಿಯಲ್ಲಿ ಹೊಗೆಯ ಚಲ್ಲಿ ಯಂತ್ರ ಘೋಷವೇಳುವಲ್ಲಿ
ಕಣ್ಣು ಬೇರೆ, ನೋಟವೊಂದು-
ನಾವು ಭಾರತೀಯರು.
ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ
ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಲಿನಲ್ಲಿ
ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ
ಭಾಷೆ ಬೇರೆ, ಭಾವವೊಂದು-
ನಾವು ಭಾರತೀಯರು.
ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ
ನಮ್ಮ ಕಷ್ಟದಲ್ಲು ನೆರೆಗೆ ನೆರೆಳನೀವ ಕರುಣೆಯಲ್ಲಿ
ದಾರಿ ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ
ನಮ್ಮ ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ
ಎಲ್ಲೆ ಇರಲಿ, ನಾವು ಒಂದು-
ನಾವು ಭಾರತೀಯರು.


Click it and Unblock the Notifications











