twitter
    For Quick Alerts
    ALLOW NOTIFICATIONS  
    For Daily Alerts

    ಅನಿವಾಸಿ ಕನ್ನಡಿಗನ ಆಲ್ಬಂ 'ಚಿಂ ಚಿನ್ನ'

    By *ಮಲೆನಾಡಿಗ
    |

    ಚಿನ್ನ ಎಂದರೆ ನಿಮಗೆ ಗೊತ್ತಿರುತ್ತೆ. .. ನಮ್ಮ ಪ್ರೀತಿ ಪಾತ್ರರನ್ನು ಹಾಗೆ ಕರೆಯಲು ಬಳಸುತ್ತೇವೆ. ಚಿಂಚಿನ್ನ ಅನ್ನೋದು ನಾನು ಹುಟ್ಟುಹಾಕಿದ ಒಂದು ಹೊಸ ಪದ ಎನ್ನುತ್ತಾರೆ ಇಂಗ್ಲೆಂಡ್ ನ ವೈದ್ಯ ನರಸಿಂಹಮೂರ್ತಿ ಅಲಿಯಾಸ್ ಆದಿತ್ಯ(ಆದಿ). ಕೈಯಲ್ಲಿ ಸ್ಟೆಥೋಸ್ಕೋಪ್ ಹಿಡಿದು, ರೋಗಿಗಳ ಎದೆಬಡಿತ, ನಾಡಿಮಿಡಿತ ಕೇಳುತ್ತಾ, ಕೇಳುತ್ತಾ ತಮ್ಮ ಹೃದಯಾಂತರಾಳದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಸಂಗೀತ ಸಂಯೋಜನೆಯ ತುಡಿತವನ್ನು ಹೆಚ್ಚಿಸಿಕೊಂಡ ಆದಿ, ಇತ್ತೀಚೆಗೆ 'ಚಿಂ ಚಿನ್ನ' ಎಂಬ ಹೆಸರಿನಲ್ಲಿ ತಮ್ಮದೇ ಸ್ವಂತ ಕನ್ನಡ ಆಲ್ಬಂ ಅನ್ನು ಹೊರತಂದಿದ್ದಾರೆ.

    ಎಲ್ಲ ಸ್ತರದ ಜನಕ್ಕೆ ಮುದ ನೀಡುವ ಸಂಗೀತ ನೀಡಬೇಕೆಂಬ ಉದ್ದೇಶ ಹೊಂದಿರುವ ಆದಿ, ಪೂರ್ವ ಹಾಗೂ ಪಶ್ಚಿಮದ ಸಂಸ್ಕೃತಿಯ ಸಂಮಿಶ್ರಣ ಮಾಡಿ, ಜನಪ್ರಿಯ ದಾಟಿಯ ಸಂಗೀತವನ್ನು ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಹಾಗಂತ, ನಾನೇನು ಸಂಗೀತದಲ್ಲಿ ಪಳಗಿದ ಅನುಭವಿಯಲ್ಲ. ಸಂಗೀತದಲ್ಲಿ ನಾನಿನ್ನು ವಿದ್ಯಾರ್ಥಿ. ಆದರೂ, ಜನರಿಗೆ ಹೊಸದನ್ನು ನೀಡಬೇಕೆಂದು ಈ ಆಲ್ಬಂ ಹೊರ ತಂದಿದ್ದೇನೆ ಎನ್ನುತ್ತಾರೆ.

    ಸರಳ ಸಂಮಿಶ್ರತ ಪ್ರೇಮಗೀತೆಗಳು :ಇದರಲ್ಲಿ 8 ಹಾಡುಗಳಿವೆ. ಈ ಹಾಡುಗಳ ಪಾಲನೆ ಪೋಷಣೆ ಸಂಯೋಜನೆ ಎಲ್ಲ ಜವಾಬ್ದಾರಿಯನ್ನು ಆದಿ ಒಬ್ಬರೇ ಮಾಡಿದ್ದಾರೆ ಎಂಬುದು ವಿಶೇಷ. ಸದ್ಯ ಒಂದು ಹಾಡಿಗೆ ವಿಡಿಯೋ ಚಿತ್ರೀಕರಣಗಳನ್ನು ಮಾಡಲಾಗಿದ್ದು ಯೂಟೂಬ್ ನಲ್ಲಿ ಅದರ ಮುನ್ನೋಟ ಲಭ್ಯವಿದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಇನ್ನುಳಿದ ಹಾಡುಗಳನ್ನು ಚಿತ್ರೀಕರಿಸುವ ಇರಾದೆ ಆದಿಗಿದೆ.

    ಎಂಟು ಹಾಡುಗಳಲ್ಲಿ ಮೊದಲ ಹಾಡು ಪ್ರೇಮಿಗಳ ಆಸೆ, ಕಾಮ ಹಾಗೂ ಮಾನಸಿಕ ಅವಲಂಬನೆಯ ಕುರಿತಾಗಿದೆ. ಎರಡನೇ ಹಾಡು ವಿರಹ ವೇದನೆಯಲ್ಲಿ ಸಿಲುಕಿ ನಲುಗಿರುವ ಯುವತಿಯ ಗೀತೆ. ಮೂರನೆಯದು ಶಾಂತಿ, ಸೌಹಾರ್ದತೆಯ ಬಗ್ಗೆ ಇದೆ. ನಾಲ್ಕನೆಯದು ಯುವ ಪೀಳಿಗೆಗೆ ಹುಚ್ಚು ಹಿಡಿಸಬಲ್ಲ ಹಿಪ್ ಹಾಪ್ ಶೈಲಿಯ ಪೆಪ್ಪಿ ಸಂಗೀತದಿಂದ ಕೂಡಿದೆ.

    ಆಸೆ ಹಾಗೂ ಕಲ್ಪನಾತೀತ ಲೋಕದಲ್ಲಿ ನಿರ್ಧಾರ ಹಾಗೂ ಗೊಂದಲದಕ್ಕೆ ಸಿಲುಕುವ ಯುವಕನ ಬಗ್ಗೆ ಐದನೇ ಹಾಡಿನಲ್ಲಿದೆ. ಆರನೇ ಹಾಡು ಮನುಷ್ಯರ ಅಹಂ ಹಾಗೂ ಪ್ರೀತಿಯ ಕಥೆ ಹೇಳುತ್ತದೆ. ಮತ್ತೊಂದು ಶಾಂತಿ ಹಾಡಿನ ರೀಮಿಕ್ಸ್ ಇದೆ. ಎಲ್ಲ ಹಾಡುಗಳಿಗೆ ಸಾಹಿತ್ಯ ಗೀಚಿ, ಸಂಗೀತ ಸಂಯೋಜನೆ ಮಾಡಲು ಆದಿಗೆ ಸುಮಾರು ಮೂರು ತಿಂಗಳು ಹಿಡಿದಿದೆ. ಆದಿಯ ಸರಿ ತಪ್ಪುಗಳನ್ನು ತಿದ್ದುವಲ್ಲಿ ಗೆಳೆಯರಾದ ಗ್ರೇಗ್ ಹಾಗೂ ಸೆಬಾಸ್ಟಿಯನ್ ಮಹತ್ವದ ಪಾತ್ರ ವಹಿಸಿದ್ದಾರೆ. ಆದಿ ಅಲ್ಲದೆ ಸುಮನಾ ಪ್ರೇಮ್ ಕುಮಾರ್ , ಲೌರಾ ಹ್ಯೂಸ್ ಹಾಗೂ ರೂಪ ಪ್ರಶಾಂತ್ ಈ ಅಲ್ಬಂಗೆ ತಮ್ಮ ಕಂಠಸಿರಿಯನ್ನು ತುಂಬಿದ್ದಾರೆ.

    ಕನ್ನಡದ ನಂಟು: ಯುಕೆಯಲ್ಲಿ ಮನರೋಗ ತಜ್ಞರಾಗಿ ಹೆಸರು ಗಳಿಸುವ ಆದಿ, ಬೆಂಗಳೂರು ಮೂಲದವರು. ಕೋರಮಂಗಲದ ಬೆಥನಿ ಹೈಸ್ಕೂಲ್ ನಲ್ಲಿ ಓದಿದವರು. ಮೈಸೂರು ವಿವಿಯಿಂದ ಸೈಕಾಲಜಿ ಪದವಿ ಪಡೆದವರು. ಕನ್ನಡ ಸಂಗೀತ ಲೋಕಕ್ಕೆ ಏನಾದರೂ ಹೊಸದನ್ನು ನೀಡಬೇಕು ಎಂಬ ಅವರ ಆಸೆಗೆ ಅವರ ಸ್ನೇಹಿತರು, ಹಿತೈಷಿಗಳು ಬೆನ್ನಲುಬಾಗಿ ನಿಂತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಆಲ್ಬಂ ಬಿಡುಗಡೆ ಮಾಡಿದ ಹಿರಿಯ ನಟ ಶ್ರೀನಿವಾಸ ಮೂರ್ತಿ, ನಿರ್ದೇಶಕರಾದ ಪ್ರೇಮ್, ಸಾಯಿ ಪ್ರಕಾಶ್ ಕೂಡ ಆದಿ ಅವರ ಪ್ರಯತ್ನವನ್ನು ಮೆಚ್ಚಿ ಶುಭ ಹಾರೈಸಿದ್ದಾರೆ.

    ಅಂತಾರಾಷ್ಟ್ರೀಯ ಗುಣಮಟ್ಟದ ಸಂಗೀತವನ್ನು ನೀಡಿ, ಕನ್ನಡ ಸಂಗೀತವನ್ನು ಇನ್ನಷ್ಟು ಬೆಳೆಸಬೇಕು ಎಂಬ ಆಸೆಯನ್ನು ಆದಿ ಇಟ್ಟುಕೊಂಡಿದ್ದಾರೆ. ತಮ್ಮ ಇತಿಮಿತಿಯನ್ನು ಅರಿತಿರುವ ಆದಿ, ಗುಣಾತ್ಮಕ ಹಾಗೂ ಋಣಾತ್ಮಕ ಅಭಿಪ್ರಾಯಗಳನ್ನು ಮುಕ್ತವಾಗಿ ಸ್ವೀಕರಿಸಿ, ಇದೇ ರೀತಿ ಹೊಸದನ್ನು ನೀಡಲು ಮುಂದಾಗಿದ್ದಾರೆ. ಸ್ವತಃ ತಾವೇ ಆಸ್ತ್ರೇಲಿಯಾ, ಕೆನಡಾ, ಅಮೆರಿಕಾದಲ್ಲಿ ಆಲ್ಬಂ ಮಾರಾಟ ಮಾಡಲು ಮುಂದಾಗಿದ್ದಾರೆ. ಕರ್ನಾಟಕದ ಎಲ್ಲೆಡೆ ಸಿಡಿಗಳು ಲಭ್ಯವಿದ್ದು, ಬೆಂಗಳೂರಿನ ಪ್ಲಾನೆಟ್ ಎಂ, ಕ್ಯಾಲಿಪ್ಸೊ, ಟೆಂಪ್ಟೇಷನ್ ಮುಂತಾದೆಡೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿ ಸಿಡಿಯ ಬೆಲೆ 120 ರುಗಳು ಮಾತ್ರ. ಇವರ ಹಾಡುಗಳ ಬಗ್ಗೆ ಇನ್ನಷ್ಟು ತಿಳಿಯಲು ಆದಿ ಅವರನ್ನೇ ಫೇಸ್ ಬುಕ್ ಮೂಲಕ ಸಂಪರ್ಕಿಸಿ. ಅಥವಾ ಅವರಿಗೆ ಇಮೇಲ್ ಬರೆಯಿರಿ : [email protected]

    Tuesday, April 27, 2010, 15:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X