For Quick Alerts
  ALLOW NOTIFICATIONS  
  For Daily Alerts

  ಎದ್ದುಬಿದ್ದು ಎದ್ದುಬಂದ ಎದ್ದೇಳು ಮಂಜ

  By Staff
  |

  *ಶ್ಯಾಮ್

  Endowment lecture by Jaggesh in Cubbon Park
  ಜಗ್ಗೇಶ್ ತಮ್ಮ ವೃತ್ತಿ ಜೀವನದ 25ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ತಮ್ಮದೇ ಆದ ವಿಶಿಷ್ಟ ಶೈಲಿಯ ಹಾಸ್ಯ ಮತ್ತು ಡೈಲಾಗ್ ಹೊಡೆಯುತ್ತ ಕ್ರಮೇಣ ಚಿತ್ರರಂಗದ ಏಣಿ ಹತ್ತಿ ನಾಯಕನ ಪಟ್ಟಕ್ಕೆ ಬಂದ ನಟ ಅವರು. ಅವರ ನೂರನೇ ಚಿತ್ರ ಗುರುಪ್ರಸಾದ್ ನಿರ್ದೇಶಿಸಿದ್ದ 'ಮಠ'. ಸದ್ಯದಲ್ಲೇ ತೆರೆ ಕಾಣುತ್ತಿರುವ ಗುರು ಅವರ ಹೊಸ ಚಿತ್ರ 'ಎದ್ದೇಳು ಮಂಜುನಾಥ'ದಲ್ಲಿ ಜಗ್ಗೇಶ್ ನಾಯಕ. ಕನ್ನಡ ಚಿತ್ರರಂಗದಲ್ಲಿ ಜಗ್ಗೇಶ್ ಅವರು ಕಾಲು ಶತಮಾನ ಪೂರೈಸಿದ ಸಂದರ್ಭದ ದ್ಯೋತಕವಾಗಿ 'ಎದ್ದೇಳು ಮಂಜುನಾಥ' ಪ್ರೇಕ್ಷಕರ ಮುಂದೆ ಹಾಜರಾಗುತ್ತಿದೆ.

  ಸಾಮಾನ್ಯ ಡಿಸೆಂಬರ್ ಮೂರನೇ ಅಥವಾ ಕ್ರಿಸ್ಮಸ್ ವೇಳೆಗೆ ತೆರೆಗೆ ಬರಲಿರುವ 'ಎದ್ದೇಳು' ಚಿತ್ರದ ಧ್ವನಿ ಸುರಳಿ ಮತ್ತು ಸಿಡಿ, ನವೆಂಬರ್ 26ರ ಬುಧವಾರ ಬೆಂಗಳೂರಿನಲ್ಲಿ ಬಿಡುಗಡೆ ಆಯಿತು. ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಧ್ವನಿ ಸುರುಳಿ ಮತ್ತು ಸಿಡಿ ಬಿಡುಗಡೆಯನ್ನು ಕನ್ನಡ ಸಿನಿಮಾ ಪತ್ರಕರ್ತರು , ಛಾಯಾಚಿತ್ರಕಾರ ಸಮೂಹ ನೆರವೇರಿಸಿತು. ಕನ್ನಡ ಚಿತ್ರಗಳ ಬಗೆಗೆ ಬರೆಯುವ ಉದಯವಾಣಿ, ಪ್ರಜಾವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ಬೆಂಗಳೂರು ಮಿರರ್, ಆಂದೋಳನ, ರೂಪತಾರಾ, ಚಿತ್ರಲೋಕ ಡಾಟ್ ಕಾಂ, ದಟ್ಸ್ ಕನ್ನಡ ಹಾಗೂ ಬಹುತೇಕ ಎಲ್ಲ ಕನ್ನಡ ಟಿವಿ ವಾಹಿನಿಗಳ ಸಿನಿಮಾ ವಿಭಾಗದ ಪತ್ರಕರ್ತರು ಮತ್ತು ತಂತ್ರಜ್ಞರು ಬಿಡುಗಡೆಗೆ ಕೈಯಾದರು.

  ಇದು ಸಿಡಿ ಮತ್ತು ಕ್ಯಾಸೆಟ್ಟುಗಳ ಪೈರಸಿ ಯುಗ. ಆದ್ದರಿಂದ ಚಲನಚಿತ್ರ ಸಂಗೀತ ಪ್ರೇಮಿಗಳು ಅಸಲಿ ಉತ್ಪನ್ನಗಳಿಗೆ ಮನ್ನಣೆ ನೀಡುವುದಲ್ಲದೆ ಸಿಡಿಯನ್ನು ಕೊಂಡು ಕೇಳುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದು ನಿರ್ದೇಶಕ ಗುರುಪ್ರಸಾದ್ ಮನವಿ ಮಾಡಿಕೊಂಡರು. ಎದ್ದೇಳು ಮಂಜುನಾಥ ಚಿತ್ರದಲ್ಲಿ ನಾಲಕ್ಕು ಹಾಡುಗಳಿವೆ. ಕೆ.ವಿ. ಪುಟ್ಟಪ್ಪ ಅವರ 'ಬಾ ಚಕೋರಿ..' ಕವನವನ್ನು ಒಂದು ಹಾಡಿಗೆ ಬಳಸಿಕೊಳ್ಳಲಾಗಿದೆ. ಉಳಿದ ಮೂರು ಹಾಡುಗಳಿಗೆ ಸಾಹಿತ್ಯವನ್ನು ನಿರ್ದೇಶಕ ಗುರುಪ್ರಸಾದ್ ಅವರೇ ರಚಿಸಿದ್ದಾರೆ.

  ಕನ್ನಡದ ಉದಯೋನ್ಮುಖ ಸಂಗೀತಗಾರರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಅನೂಪ್ ಸುಳೀನ್. ಅವರ ಸಂಗೀತ ಸಂಯೋಜನೆಯಿಂದ ಹೊರಹೊಮ್ಮಿರುವ ಹಾಡುಗಳು ಇಂಪಾಗಿವೋ? ರಿಂಗ್ ಟೋನ್ ಗೆ ಹಾಕಿಕೊಳ್ಳಬಹುದೋ ? ಸಾಹಿತ್ಯ, ಸಂಗೀತ ಮತ್ತು ಮಾಧುರ್ಯವನ್ನು ಅಳೆದು ಸುರಿದು ಸವಿಯುವ ಚಲನಚಿತ್ರ ಸಂಗೀತ ಪ್ರೇಮಿಗಳು ನಿರ್ಧರಿಸಬೇಕು. ಶಾಸ್ತ್ರೀಯ ಸಂಗೀತದ ಮಟ್ಟುಗಳನ್ನು ಬಲ್ಲ ಅಮಿತ್ ಹಾಡಲೂ ಬಲ್ಲರು. ಆವತ್ತಿನ ಸಿಡಿ ಬಿಡುಗಡೆ ಸಮಾರಂಭಕ್ಕೆ ಪ್ರಾರ್ಥನಾಗೀತೆಯನ್ನು ಹಾಡಿದ್ದು ಅವರೇ. ಪ್ರಾರ್ಥನೆಗೆ ಅವರು ಆರಿಸಿಕೊಂಡ ಕೀರ್ತನೆ ಪಂಚರತ್ನ ಕೃತಿಗಳಲ್ಲಿ ಮೊದಲನೆಯದಾದ 'ಮನಸಾಸ್ಮರಾಮಿ ಮಹಾ ಗಣಪತಿಂ..ಮನಸಾ, ಸ್ಮರಾಮಿ ಮಹಾ ಗಣಪತಿಂ..' (ನಾಟರಾಗ, ಏಕತಾಳ).

  ಕನ್ನಡದ ಹಿನ್ನೆಲೆ ಗಾಯಕರಿಗೆ ನಿರ್ಮಾಪಕರು ನಿರ್ದೇಶಕರು ಆದ್ಯತೆ ಕೊಡುವುದಿಲ್ಲ ಎಂಬ ಆರೋಪದಿಂದ ಮುಕ್ತವಾದ ಚಿತ್ರಗಳಲ್ಲಿ ಎದ್ದೇಳು ಮಂಜುನಾಥ ಕೂಡ ಒಂದು. ಹಿನ್ನೆಲೆ ಗಾಯನದಲ್ಲಿ ಹೊಸಬರ ಮತ್ತು ಹಳಬರ ತಾಳಮೇಳ ಹದವಾಗಿದ್ದು ಗುರುಪ್ರಸಾದ್ ಅವರು ರಾಜೇಶ್ ಕೃಷ್ಣನ್, ಬಿ.ಕೆ. ಸುಮಿತ್ರ, ಎಂ.ಡಿ.ಪಲ್ಲವಿ ಅವರ ಕಂಠವನ್ನು ಬಳಸಿಕೊಂಡಿದ್ದಾರೆ. ಧ್ವನಿ ಸುರುಳಿ ಮತ್ತು ಸಿಡಿ ನಿರ್ಮಾಣ, ಹಂಚಿಕೆ ಬಿಗ್ ಮ್ಯೂಸಿಕ್.

  ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಹಾಡು ಮತ್ತು ಕೆಲವು ದೃಶ್ಯಗಳ ತುಣುಕುಗಳನ್ನು ತೆರೆಯಮೇಲೆ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರ ನಿರ್ಮಾಣದ ತಂಡದ ವತಿಯಿಂದ ಇನ್ ಫಾರ್ಮಲ್ ಭಾಷಣಗಳಾದವು. ಕುಡಿತದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಬಗ್ಗಿಸುವಂಥ ತಮ್ಮ ಚಿತ್ರದ ಕಲ್ಪನೆ ಮೂಡಿದ್ದು ತಾವು ಮತ್ತು ನಿರ್ದೇಶಕ ಗುರುಪ್ರಸಾದ್ ಅವರು ಒಂದು ಸಂಜೆ ಹೀಗೆ ಸುಮ್ಮನೆ ಪ್ರೆಸ್ ಕ್ಲಬ್ಬಿನಲ್ಲಿ ವಿಸ್ಕಿ ಹೀರುತ್ತಾ ಕುಳಿತಾಗ ಎಂದು ನಿರ್ಮಾಪಕ ಸನತ್ ಕುಮಾರ್ ಹೇಳಿದರು. ಚಿತ್ರ ನಿರ್ಮಿಸುವ ಯೋಜನೆ ಕ್ರಮೇಣ ಚಿಗುರೊಡೆಯುತ್ತಾ ಅನೇಕರ ಸಹಭಾಗಿತ್ವ ಮತ್ತು ಸಹಕಾರಗಳನ್ನು ಪಡೆದುಕೊಂಡಿತು ಎಂದರು ಸನತ್. ಸನತ್ ಮೂಲತಃ ಮುದ್ರಣ ಮತ್ತು ವಿದ್ಯುನ್ಮಾನ ವಿಭಾಗದಲ್ಲಿ ಪತ್ರಕರ್ತ. ವಾರಪತ್ರಿಕೆ, ರಾಜು ಪತ್ರಿಕೆ ನಡೆಸಿ ಆನಂತರ ಮಾಧ್ಯಮ ಸಂಯೋಜನೆ, ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಪಳಗಿದವರು. ಎದ್ದೇಳು ಚಿತ್ರ ಅವರ ಚೊಚ್ಚಲ ಪ್ರಯೋಗ.

  ಸಣ್ಣಗೆ ಮಳೆ ಬೀಳುತ್ತಿದ್ದ ಸಂಜೆ ವೇಳೆಯ ಕಾರ್ಯಕ್ರಮದಲ್ಲಿ ಆಹ್ವಾನಿತರು ಮತ್ತು ಅತಿಥಿಗಳ ದೊಡ್ಡ ಬಳಗ ಪ್ರೆಸ್ ಕ್ಲಬ್ಬಿನಲ್ಲಿ ಮುಖಾಮುಖಿಯಾಯಿತು. ಉದ್ಯಮಿ ಕೆ. ಆರ್. ಶ್ರೀನಿವಾಸ ಮೂರ್ತಿ, ಚಿತ್ರದ ನಾಯಕಿ ಯಜ್ಞಾಶೆಟ್ಟಿ, ತಬಲ ನಾಣಿ, ಕೊಳಲು ಭುಟ್ಟೋ, ಛಾಯಾಚಿತ್ರಕಾರ ಅಶೋಕ್ ವಿ. ರಾಮನ್, ಸಹ ನಿರ್ಮಾಪಕರಾದ ಮಂಜುನಾಥ್, ಶಂಕರ ರಾವ್ ಹಾಗೂ ಇಡೀ ಚಿತ್ರ ನಿರ್ಮಾಣ ಸಂಸ್ಥೆಯ ಬಳಗವೇ ನೆರೆದಿತ್ತು.

  ಸಮಾರಂಭದ ಮುಖ್ಯ ಆಕರ್ಷಣೆ ಜಗ್ಗೇಶ್ ಅವರ ಭಾಷಣ. ನಿರರ್ಗಳವಾಗಿ ಅರ್ಧ ಗಂಟೆ ಮಾತನಾಡಿದ ಅವರು ಚಿತ್ರರಂಗದಲ್ಲಿ ತಾವು ನಡೆದು ಬಂದಗಲ್ಲಿಗಳು, ಸುವೇಗದಲ್ಲಿ ಓಡಿಬಂದ ಹಾದಿಗಳು, ಸ್ಕೂಟರ್ ಸುಂಯ್ ಎಂದು ಬಂದ ತಿರುವು ರಸ್ತೆಗಳು, ಫಿಯಟ್ ಕಾರಿನಲ್ಲಿ ಬಂದ ಮುಖ್ಯರಸ್ತೆಗಳ ಪ್ರಯಾಣದ ಸಿಂಹಾವಲೋಕನ ಮಾಡಿದರು. ಒಂದಿ ರೀತಿ ದತ್ತಿ ಭಾಷಣದಂತಿದ್ದ ಅವರ ಬಿಲ್ಟ್ ಅಪ್ ಮಾತುಗಳ ಸಾರಾಂಶ ಹೀಗಿದೆ.

  ಅ) ಚಿತ್ರರಂಗದಲ್ಲಿ ಎಲ್ಲರೂ ಕಲಾವಿದರೇ. ಪಾತ್ರ ಸಣ್ಣದಿರಲಿ ದೊಡ್ಡದಿರಲಿ,ಪಾತ್ರದ ಗಾತ್ರ ಆಧರಿಸಿ ಕಲಾವಿದರ ಕುಲದಲ್ಲಿ ವರ್ಗ ಬೇಧ ನಿರ್ಮಾಣಮಾಡಬಾರದು.
  ಆ) ದೇವರಾಜ್ ಮುಂತಾದ ನಾಯಕರಂತೆ ನಾನು ನನ್ನ ಜೀವನವನ್ನು ಎಂದೂ ಪ್ಲಾನ್ ಮಾಡಿದವನಲ್ಲ. ಪ್ಲಾನ್ ಮಾಡಿದ್ದರೆ ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗುತ್ತಿದ್ದೆನೋ ಏನೋ.
  ಇ) ಎಲ್ಲಾ ದೇವರ ಇಚ್ಛೆ. ಅವನು ನನ್ನನ್ನು ಚೆನ್ನಾಗಿ ಇಟ್ಟಿದ್ದಾನೆ. ಅಭಿಮಾನಿಗಳೇ ನನ್ನ ಆಸ್ತಿ. ಸಿಗ್ನಲ್ ನಲ್ಲಿ ಕಾರು ನಿಲ್ಲಿಸಿದಾಗ ಯಾರೋ ಅಭಿಮಾನಿಯೊಬ್ಬ ಬಂದು ಕೆನ್ನೆಗೆ ಒಂದು ಕಿಸ್ ಕೊಟ್ಟು ಹೊಗುತ್ತಾನೆ. ಆ ಪ್ರೀತಿ ದೊಡ್ಡದು.
  ಈ)ನಿರ್ದೇಶಕ ಗುರು ಪ್ರತಿಭಾವಂತ. ಆದರೆ ಗುಣಮಟ್ಟದ ಬಗ್ಗೆ ಆತನಿಗೆ ಅತಿಯಾದ ಮೋಹ. ಶ್ರೇಷ್ಠತೆಯ ವ್ಯಸನದಿಂದ ಬಳಲುವ ಅವನ ಜತೆ ಕೆಲಸಮಾಡುವುದು ತುಂಬಾ ಕಿರಿಕ್. ಅಂತಿಮವಾಗಿ ಚಿತ್ರ ಚೆನ್ನಾಗಿ ಬರುತ್ತದೆ, ಅದು ನನಗೆ ಇಷ್ಟ.
  ಉ) ಪುಟ್ಟಣ್ಣ ಕಣಗಾಲ್ ಕಣ್ಮರೆಯಾದನಂತರ ಅವರ ಜಾಗ ಖಾಲಿ ಬಿದ್ದಿದೆ. ಅದನ್ನು ತುಂಬುವುದಕ್ಕೆ ಯೋಗ್ಯತೆ ಇರುವ ನಿರ್ದೇಶಕ ಗುರು.
  ಊ) ನಾನು ಗುರು ಬಗ್ಗೆ ಹೀಗೆ ಹೇಳಿದ್ದೆ ಎಂದು ನೀವು ನೆನಪಿಸಿಕೊಳ್ಳುವ ದಿನ ಮುಂದೊಂದು ದಿನ ಬರತ್ತೆ.

  ಋ ) ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X