twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್ ರಾಜೇಶ್ ಅರ್ಥಪೂರ್ಣ ಸ್ನೇಹ ಸ್ಪರ್ಶ

    By * ಚಿನ್ಮಯ.ಎಂ.ರಾವ್, ಹೊನಗೋಡು
    |

    Sudeep,Rajesh friendship
    ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಓದುತ್ತಿದ್ದ ದೀಪು ಅಂದೇಕೋ ಕಾಲೇಜಿನ ಸಮೀಪದಲ್ಲೇ ಇರುವ ಒಂದು ಕಟ್ಟಡದ ಗ್ರೌಂಡ್ ಫ್ಲೋರ್‌ಗೆ ಬಂದಿದ್ದ.ಹೇಳಿ ಕೇಳಿ ಮೊದಲೇ ಭಾವಜೀವಿಯಾಗಿದ್ದ ಆತ ಏನನ್ನೋ ಯೋಚಿಸುತ್ತಾ ನಿಂತಲ್ಲೇ ನಿಂತು ಬಿಡುತ್ತಿದ್ದ,ಕುಂತಲ್ಲೇ ಕುಂತು ಬಿಡುತ್ತಿದ್ದ.ಹೀಗಿರುವಾತ ಮಹಡಿಯ ಮೆಟ್ಟಿಲನ್ನೇರುವ ಬದಲು ಅಲ್ಲೇ ನಿಂತು ಬಿಟ್ಟರೆ ಏನಾದರೊಂದು ಕಾರಣವಿರಬೇಕಲ್ಲ.ಕಾರಣವಿತ್ತು, ಮೂರನೆಯ ಮಹಡಿಯಿಂದ ಗಂಧರ್ವಲೋಕದ ಗಾಯನವೊಂದು ಧರೆಗಿಳಿಯುತ್ತಿತ್ತು.

    "ಎಹೆ..ಸಾನ್ ತೆರಾ ಹೋಗಾ ಮುಜ್‌ಪರ್...."ಜಂಗ್ಲೀ ಚಿತ್ರದ ಗೀತೆ ಮೇಲಿಂದ ಇಂಪಾಗಿ ತೇಲಿಬರುತ್ತಿದ್ದಂತೇ ದೀಪು ನಿಂತಲ್ಲೇ ಹಾಡಾದ,ಹಾಡೊಳಗೇ ಮುಳುಗಿಹೋದ.ಕಣ್‌ಮುಚ್ಚಿ ತಲೆದೂಗುತ್ತಿದ್ದವನ ಕೈಗಳು ರಾಗತರಂಗದಲ್ಲಿ ಹಾಡಿನ ಏರಿಳಿತಕ್ಕೆ ತಕ್ಕಂತೆ ಗಾಳಿಯಲ್ಲಿ ಚಿತ್ತಾರ ಬಿಡಿಸುತ್ತಿದ್ದವು.ಹಾಡು ಮುಗಿದರೂ ಮೈಮರೆತವನಿಗೆ ಎಚ್ಚರವಾದದ್ದು ಕೆಳಗಿಳಿದು ಬಂದ ವ್ಯಕ್ತಿಯೊಬ್ಬ ಎಚ್ಚರಿಸಿದಾಗಲೇ.ಒಮ್ಮೆಲೇ ಎಚ್ಚೆತ್ತುಕೊಂಡ

    ದೀಪು ಕಣ್ಣರಳಿಸುತ್ತಾ..."ಸಾರ್.. ಸಾರ್..ಯಾರು ಸಾರ್..ಮೇಲೆ ಅಷ್ಟೊಂದು ಚೆನ್ನಾಗಿ ಹಾಡ್ತಾ ಇದ್ದಾರೆ?" ಎಂದು ಕುತೂಹಲ ಮಿಶ್ರಿತ ಉತ್ಸಾಹದಲ್ಲಿ ಕೇಳಿದಾಗ ಒಮ್ಮೆ ನಕ್ಕ ಆ ವ್ಯಕ್ತಿ,"ನಾನೇ ಹಾಡ್ತಾ ಇದ್ದೆ...ಈ ಮೆಟ್ಟಿಲೇರುವ ಜಾಗದಲ್ಲಿ ತುಂಬಾ ಚೆನ್ನಾಗಿ ಎಕೋ ಬರುತ್ತೆ..ಹಾಗಾಗಿ ಮೆಟ್ಟಿಲ ಮೇಲೆ ಕುಳಿತು ಹಾಡ್ತಾ ಇದ್ದೆ.."ಎಂದಾಗ ದೀಪುವಿನ ಸಂತಸಕ್ಕೆ ಪಾರವೇ ಇರಲಿಲ್ಲ.ನಂತರ ಪರಸ್ಪರ ಪರಿಚಯ...ವಿಚಾರವಿನಿಮಯ...ಇಬ್ಬರೂ ಒಂದೇ ಕಾಲೇಜ್ ಎಂದು ತಿಳಿದಾಗ ದೀಪು ಆನಂದಮಯ.

    ಈಗಿನಂತೆ ಕೈಗೊಂದು ಕಾಲಿಗೊಂದು ಮೊಬೈಲ್ ಇರದ ಆ ಕಾಲದಲ್ಲಿ ಯಾವುದಕ್ಕೂ ಇರಲಿ ಎಂದು ಹರಿದ ಚೀಟಿಯೊಂದರಲ್ಲಿ ತನ್ನ ನೆಚ್ಚಿನ ಗಾಯಕನ ಸ್ಥಿರ ದೂರವಾಣಿ ಸಂಖ್ಯೆಯನ್ನು ಬರೆದುಕೊಂಡು ಜೇಬಿಗಿಳಿಸಿಕೊಂಡ.ಮೊದಲ ಭೇಟಿಯಲ್ಲೇ ಆಪ್ತಮಿತ್ರರಾದರು.ಎದೆಯಾಳದಲ್ಲಿ ಗೆಳೆಯನ ಸಿರಿಕಂಠವನ್ನು ಬಚ್ಚಿಟ್ಟುಕೊಂಡ ದೀಪು ಆಗಾಗ ಆ ಗಾಯನವನ್ನು ಅದೇ ಕಂಠದಲ್ಲಿ ನೆನಪಿಸಿಕೊಂಡು ಪುಳಕಿತನಾಗುತ್ತಿದ್ದ.

    ಸ್ವಲ್ಪ ಕಾಲದ ನಂತರ ಅತ್ತ ಆ ಗಾಯಕ ಹಂಸಲೇಖ ಅವರಲ್ಲಿ ಟ್ರ್ಯಾಕ್ ಸಿಂಗರ್ ಆಗಿ ಸ್ವರಗಳನ್ನೇ ಉಸಿರಾಡತೊಡಗಿದ.ಇತ್ತ ಈ ಹುಚ್ಚು ಹುಡುಗ ದೀಪುವಿನ ತಂದೆ ಪ್ರೀತಿಯ ಮಗರಾಯನಿಗಾಗಿ ಸಿನಿಮಾವೊಂದನ್ನು ನಿರ್ಮಿಸುವ ತಯಾರಿಯಲ್ಲಿದ್ದರು.ದೀಪುವಿಗೆ ಅಂದು ತಾನು ಮೈಮರೆತು ಆಲಿಸಿದ ಗೆಳೆಯನ ಮಾಧುರ್ಯಪೂರ್ಣ ಧ್ವನಿಯನ್ನು ತನ್ನ ಸಿನಿಮಾ ಗೀತೆಗಳಿಗೆ ಸ್ಪರ್ಶಿಸುವ ತವಕ.

    ಸ್ನೇಹ ಸ್ಪರ್ಶ:ಸರಿ..ಗೀತೆಗಳಿಗೆ ಧ್ವನಿಮುದ್ರಣ ಆರಂಭವಾದಾಗ ಹಂಸಲೇಖ ಅವರ ಜೊತೆ ಮತ್ತೆ ಆಕಸ್ಮಿಕವಾಗಿ ಅವರಿಬ್ಬರ ಭೇಟಿ.ಗಾಯಕ ಹಾಡುವ ಮೊದಲು ಹಳೆಯ ನೆನಪನ್ನು ಶೃತಿ ಮಾಡಿಕೊಂಡ.ದೀಪು ಅಭಿಮಾನದ ನಾದವನ್ನು ತನ್ನ ಕಂಗಳಿಂದ ಹೊರಚೆಲ್ಲಿದ.

    "ಮನಗಳ ಸರಿಗಮ ಪ್ರೇಮ" ಆರಂಭವಾಯಿತು."ಸಂಗಾತಿ ಹೀಗೇಕೆ ನೀ ದೂರ ಹೋಗುವೆ?"ಎಂಬ ಹಾಡಿನ ಜೊತೆಗೆ ಇಬ್ಬರ ಸ್ನೇಹಕ್ಕೆ ಹೊಸ ಅರ್ಥ ಬಂತು.ಸ್ನೇಹ ಅರ್ಥಪೂರ್ಣವಾಯಿತು.

    ಕೇಳುತ್ತ ಕೇಳುತ್ತ ಹುಚ್ಚುನಾದ ಹುಚ್ಚನಾದ .ಹಾಡು ಸುಂದರವಾಗಿ ಮೂಡಿಬಂದು ಮನೆಮಾತಾಯಿತು.ಮನೆಮನೆ ಹಾಡಾಯಿತು.ಬಾತ್ ರೂಮ್‌ನಲ್ಲೂ ನಿತ್ಯದ ಹಾಡಾಯಿತು! ಆ ಹಾಡಿಗೆ ಅಭಿನಯಿಸಿದ ಆ ಗಾಯಕನ ಅಭಿಮಾನಿ ದೀಪು...."ಸ್ಪರ್ಶ" ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಸ್ಪರ್ಶ ಮಾಡಿದ! ಹುಚ್ಚು ಅಭಿಮಾನಿಗಳ ಪಾಲಿಗೆ ಕಿಚ್ಚ-ಹುಚ್ಚನಾಗಿ "ಸುದೀಪ್"ಎಂದು ಪ್ರಖ್ಯಾತನಾದ.ಇದೇ ಸುದೀಪ್ ಅವರನ್ನು ಅಂದು ಪಾರೇಕ್ ಸ್ಟೂಡಿಯೋದ ಮೆಟ್ಟಿಲಿಳಿವ ಜಾಗದಲ್ಲಿ ತನ್ನ ಸಹಜ ಗಾಯನದಿಂದ ಹುಚ್ಚನನ್ನಾಗಿಸಿದ್ದು ಬೇರಾರೂ ಅಲ್ಲ...ಕನ್ನಡಿಗರ ಅಚ್ಚುಮೆಚ್ಚಿನ ಗಾಯಕ "ರಾಜೇಶ್ ಕೃಷ್ಣನ್"!.

    ಹೌದು..ನಾಯಕ ಸುದೀಪ್ ಅವರಿಗೆ ಗಾಯಕ ರಾಜೇಶ್ ಅವರ ಮೇಲೆ ಅದೆಷ್ಟು ಪ್ರೀತಿ ಅಭಿಮಾನ ಎಂಬುದಕ್ಕೆ ಹುಚ್ಚ ಚಿತ್ರದ "ಉಸಿರೇ..ಉಸಿರೇ..."ಹಾಡೇ ಸಾಕ್ಷಿ.ಆ ಗೀತೆಯನ್ನು ಅದಾಗಲೇ ಪರಭಾಷಾ ಗಾಯಕರೊಬ್ಬರು ಹಾಡಿದ್ದರೂ ಹಠ ಬಿಡದ ಸುದೀಪ್ ರಾಜೇಶ್ ಅವರ ಧ್ವನಿಯಲ್ಲೇ ಈ ಹಾಡು ಬೇಕೆಂದು ಹಠಮಾಡಿ ಹಾಡಿಸಿದರು!ಅವರಿಬ್ಬರ ಗಾಢವಾದ ಸ್ನೇಹಕ್ಕೆ ಕಳಶವಿಟ್ಟಂತೆ ರಾಜೇಶ್ ಅವರ ಹಾಡೇ ಜನಪ್ರಿಯವಾಯಿತು!

    ಇವರಿಬ್ಬರ ಸ್ನೇಹಪಯಣ ಹೀಗೆ ಮುಂದೆ ಸಾಗಲಿ.ಪರಭಾಷಾ ಗಾಯಕರಿಗೆ ನಿರಂತರವಾಗಿ ಪೈಪೋಟಿ ನೀಡುತ್ತಲೇ ಬಂದಿರುವ ಕನ್ನಡದ ಏಕೈಕ ಗಾಯಕ ಚಿನ್ನದಂತಹ ಕಲಾವಿದ ರಾಜೇಶ್ ಕೃಷ್ಣನ್ ತನ್ಮೂಲಕ ಕನ್ನಡಿಗರ ಕೀರ್ತಿಯನ್ನು ಜಗತ್ತಿಗೇ ಸಾರಲಿ.

    English summary
    Here is story of Kannada Actor Sudeep and Playback Singer Rajesh Krishnan friendship. Right from his college days Sudeep adored Rajesh's voice and later in his home production debut movie Sparsha and then for Usire usire song from Huchcha he used Rajesh Krishnan's voice. Actor and Singer friendship relation is proved good for film industry.
    Monday, May 30, 2011, 12:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X