»   » ಶಬ್ದ ಗಾರುಡಿಗನ ಜಾಲಕ್ಕೆ ಸಿಗದವರೇ ವಿರಳ

ಶಬ್ದ ಗಾರುಡಿಗನ ಜಾಲಕ್ಕೆ ಸಿಗದವರೇ ವಿರಳ

Subscribe to Filmibeat Kannada

ನೊಂದ ಜೀವಕ್ಕೆ ಸಾಂತ್ವನ ನೀಡುವ, ಮೊಗದಲ್ಲಿ ಊರಗಲ ಉತ್ಸಾಹ ಮೂಡಿಸುವ, ಪ್ರೀತಿ ಪ್ರೇಮಗಳ ಸರಿಗಮ ನುಡಿಸುವ, ಭಾವ ತರಂಗಗಳನ್ನು ಹೊಮ್ಮಿಸುವ ಕವನಗಳನ್ನು ಕಟ್ಟಿಕೊಟ್ಟ ವರಕವಿ ಬೇಂದ್ರೆ ಹುಟ್ಟುಹಬ್ಬ ಇಂದು(ಜ.31).

ರಸವೆ ಜನನ, ವಿರಸವೆ ಮರಣ, ಸಮರಸವೇ ಜೀವನ ಎಂದು ಪದಗಳಲ್ಲಿ ಬದುಕಿನ ಅರ್ಥವನ್ನು ಹಿಡಿದಿಟ್ಟ ಶಬ್ದಗಳ ಗಾರುಡಿಗ. ಅವರ ಎಷ್ಟೋ ಕವಿತೆಗಳು ಸಿನಿಮಾದ ಹಾಡುಗಳಾಗಿ ಸಾಮಾನ್ಯನ ಕಿವಿಗೆ ಬಿದ್ದು ಕಣ್ಣಲ್ಲಿ ಹೊಸ ಹೊಳಪು ಮೂಡಿಸಿವೆ.

"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಹಾಡಿ ಕನ್ನಡಿಗರ ಹೃದಯ ಶ್ರೀಮಂತಿಕೆಯನ್ನು ಇಡೀ ಜಗತ್ತಿಗೆ ಸಾರಿದ ಧೀಮಂತ ಕವಿ. 1939ರಲ್ಲಿ ಪ್ರಕಟವಾದ 'ಗರಿ' ಕವನ ಸಂಕಲನದ 'ಬೆಳಗು' ಕವನ ', ಮೂಡಲ ಮನೆಯ ಮುತ್ತಿನ ನೀರಿನ...' ಬೆಳ್ಳಿಮೋಡ ಚಿತ್ರದಲ್ಲಿ ಮೂಡಿತ್ತು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈಚಿತ್ರದಲ್ಲಿ ಕಲ್ಯಾಣ್ ಕುಮಾರ್ ಹಾಗೂ ಕಲ್ಪನಾ ಅಭಿನಯಿಸಿದ್ದರು. ಬೇಂದ್ರೆಯವರ ಸಾಲುಗಳಿಗೆ ವಿಜಯಭಾಸ್ಕರ್ ಸಂಗೀತ ನೀಡಿದ್ದರು. ಆ ಸಾಲುಗಳ ಮೆಲಕು ಇಲ್ಲಿದೆ.

ಮೂಡಲ ಮನೆಯಾ ಮುತ್ತಿನ ನೀರಿನ
ಎರಕsವ ಹೊಯ್ದಾ
ನುಣ್ಣ್-ನ್ನೆರಕsವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾತೊಯ್ದಾ

ರತ್ನದರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು

ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂದವು-ಅಮೃತsದ ಬಿಂದು
ಯಾರಿರಿಸಿದವರು ಮುಗಿಲsಮೇಲಿಂ-
ದಿಲ್ಲಿಗೇ ತಂದು
ಈಗ -ಇಲ್ಲಿಗೇ ತಂದು

ತಂಗಾಳೀಯ ಕೈಯೊಳಗಿರಿಸೀ
ಎಸಳೀನಾ ಚವರೀ
ಹೂವಿನ-ಎಸಳೀನಾ ಚವರಿ
ಹಾರಿಸಿ ಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ

ಗಿಡಗಂಟೆಯಾ ಕೊರಳೊಳಗಿಂದ
ಹಕ್ಕಿಗಲಾ ಹಾಡು
ಹೊರಟಿತು-ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.

ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ

ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣ
ಕಣ್ಣಿದೆ-ಕಾಣsದೋ ಬಣ್ಣ
ಶಾಂತಿರಸವೇ ಪ್ರೀತಿಯಿಂದಾ
ಮೈದೋರಿತಣ್ಣ
ಇದು ಬರಿ-ಬೆಳಗಲ್ಲೋ ಅಣ್ಣಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada