ಸ್ತ್ರೀಶಕ್ತಿ ಚಿತ್ರದಲ್ಲಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಕವಿತೆ
ಇತ್ತಿತ್ತಲಾಗಿ ಖ್ಯಾತ ಸಾಹಿತಿಗಳ, ಕವಿಗಳ ಕವಿತೆಗಳನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳುವ ಪರಿಪಾಠ ಇಲ್ಲವೇ ಇಲ್ಲವೇನೋ ಎಂಬಂತಿದೆ. ಆದರೆ ಇದಕ್ಕೆ ಭಿನ್ನವಾದ ಪ್ರಯತ್ನವನ್ನು ಮಾಡಿದೆ 'ಸ್ತ್ರೀಶಕ್ತಿ' ಚಿತ್ರ. ಈ ಚಿತ್ರದಲ್ಲಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಕವಿತೆಯನ್ನು ಬಳಸಿಕೊಳ್ಳಲಾಗಿದೆ.
ಕಿಚ್ಚ ಸುದೀಪ್ ಅರ್ಪಿಸುವ, ಈಶಾ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಸ್ತ್ರೀಶಕ್ತಿ ಚಿತ್ರಕ್ಕಾಗಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ನಾವಿಬ್ಬರು ಅಂದು ಹೊಳೆ ದಡದಲ್ಲಿ ನಿಂದು ಮರುಳು ಮನೆಗಳ ಕಟ್ಟಿ ಆಟವಾಡಿದ ನೆನಪಿದೆಯೇ..." ಎಂಬ ಕವಿತೆಯನ್ನು ಬಳಸಿಕೊಳ್ಳಲಾಗಿದೆ.
ಈ ಕವಿತೆಯನ್ನು ಚಿತ್ರದಲ್ಲಿ ಬಳಸಿಕೊಳ್ಳಲು ಸಂಗೀತ ನಿರ್ದೇಶಕ ವಿ.ಮನೋಹರ್ ಅವರೊಂದಿಗೆ ಜಿ.ಎಸ್.ಎಸ್ ಅವರನ್ನು ನಿರ್ದೇಶಕ ಎಸ್.ವಿ.ಸುರೇಶ್ ಭೇಟಿ ಮಾಡಿ ಅನುಮತಿ ಪಡೆದಿದ್ದಾರೆ. ನಾಯಕಿ ಸೋನು ಹಾಗೂ ನಾಯಕ ರಾಜೀವ್ ಅಭಿನಯಿಸಿದ ಈ ಕವಿತೆಯ ಚಿತ್ರೀಕರಣ ಕೆಳಗೂರು ಟೀ ಎಸ್ಟೇಟ್, ಹೊರನಾಡು, ಕಳಸ ಮುಂತಾದ ಕಡೆ ನಡೆದಿದೆ.
ನಿರ್ದೇಶಕ ಎಸ್.ವಿ.ಸುರೇಶ್ ನಿರ್ಮಾಣದ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಕೆ.ಶಶಿಧರ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಚಂದ್ರು ಸಾಹಸ ನಿರ್ದೇಶನ, ಅರುಣ್‌ಸಾಗರ್ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಹೊ.ನ.ಸತ್ಯ ಕಥೆ, ಸಂಭಾಷಣೆ ಬರೆದಿದ್ದಾರೆ.
ಅಚ್ಯುತರಾವ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ರಾಜೀವ್, ಸೋನು, ಸುಂದರರಾಜ್, ಗೋಪಿನಾಥ್‌ಭಟ್, ತುಳಸಿಶಿವಮಣಿ, ಕಾಶಿ, ರಾಮಕೃಷ್ಣ ಮುಂತಾದವರಿದ್ದಾರೆ. ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











