Grammy Award: ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಪಿಎಂ ಮೋದಿ!
ಈ ವರ್ಷದ ಗ್ರ್ಯಾಮಿ ಅವಾರ್ಡ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರಿರುವ ಸಿರಿಧಾನ್ಯಗಳ ಮೇಲಿನ ಹಾಡನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಹಾಡು ಸಿರಿಧಾನ್ಯಗಳ ಆರೋಗ್ಯ ಪ್ರಯೋಜನಗಳನ್ನು ತಿಳಿಸುವುದು ಮತ್ತು ಪೌಷ್ಟಿಕ ಧಾನ್ಯಗಳನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ.
'ಅಬಂಡನ್ಸ್ ಆಫ್ ಮಿಲೆಟ್ಸ್' ಎಂದು ಹೆಸರಿಡಲಾಗಿರುವ ಈ ಹಾಡಿಗೆ ಭಾರತೀಯ ಅಮೆರಿಕನ್ ಗ್ರ್ಯಾಮಿ ವಿಜೇತ ಗಾಯಕ ಫಾಲು (ಫಲ್ಗುಣಿ ಶಾ) ಮತ್ತು ಅವರ ಪತಿ ಮತ್ತು ಗಾಯಕ ಗೌರವ್ ಶಾ ದನಿ ನೀಡಿದ್ದಾರೆ. ಈ ಸುಂದರ ಹಾಡು ಈ ವರ್ಷದ ಜೂನ್‌ನಲ್ಲಿ ಬಿಡುಗಡೆಯಾಗಿತ್ತು. ಹಾಡಿಗೆ ಪ್ರಧಾನಿ ಮೋದಿ ಸಾಹಿತ್ಯ ಬರೆದಿದ್ದಾರೆ.

"ಪ್ರಧಾನಿ ಮೋದಿ ಅವರು ನನ್ನ ಮತ್ತು ನನ್ನ ಪತಿ ಗೌರವ್ ಶಾ ಅವರೊಂದಿಗೆ ಈ ಹಾಡನ್ನು ಬರೆದಿದ್ದಾರೆ" ಎಂದು ಫಲ್ಗುಣಿ ಶಾ ಪಿಟಿಐಗೆ ತಿಳಿಸಿದ್ದಾರೆ. ಕಳೆದ ವರ್ಷ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದ ನಂತರ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು, ಆಗ ಈ ಹಾಡನ್ನು ಬರೆಯುವ ಬಗ್ಗೆ ಯೋಚನೆ ಬಂದಿತ್ತು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತನಾಡುವ ಸಮಯದಲ್ಲಿ ಹಸಿವನ್ನು ಕೊನೆಗೊಳಿಸುವ ಸಂದೇಶವನ್ನು ಹೊಂದಿರುವ ಹಾಡನ್ನು ಬರೆಯುವಂತೆ ಪ್ರಧಾನಿ ಮೋದಿ ಸೂಚಿಸಿದರು. ಬದಲಾವಣೆಯನ್ನು ತರಲು ಮತ್ತು ಮಾನವೀಯತೆಯನ್ನು ಉಳಿಸಲು ಸಂಗೀತದ ಶಕ್ತಿ ಹೆಚ್ಚು ಪ್ರಯೋಜನಕಾರಿ ಎಂದು ಹೇಳಿದ್ದರು. ಈ ವೇಳೆ ಸಿರಿಧಾನ್ಯಗಳ ಮೇಲೆ ಹಾಡು ಬರೆಯಲು ಸೂಚಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

'ಅಬಂಡನ್ಸ್ ಆಫ್ ಮಿಲೆಟ್ಸ್'
'ಅಬಂಡನ್ಸ್ ಆಫ್ ಮಿಲೆಟ್ಸ್' ಮ್ಯೂಸಿಕ್ ವೀಡಿಯೋ ಭಾರತದಲ್ಲಿ ಸಿರಿಧಾನ್ಯ ಕೃಷಿಯನ್ನು ಸೆರೆಹಿಡಿಯುತ್ತದೆ. ಹಸಿವನ್ನು ನಿಗ್ರಹಿಸುವಲ್ಲಿ ಅದು ಹೇಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ. ಎಲ್ಲಾ ವರ್ಗದ ಜನರು ಹೇಗೆ ಸಿರಿಧಾನ್ಯಗಳನ್ನು ಬಳಸಬಹುದು ಎಂಬುದು, ಸಿರಿಧಾನ್ಯಗಳ ಆರೋಗ್ಯ ಪ್ರಯೋಜನಗಳನ್ನು ತಿಳಿಸುತ್ತದೆ. ಇದರ ಜೊತೆಗೆ ನಮ್ಮ ಜೀವನಶೈಲಿಯ ಭಾಗವಾಗಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳನ್ನು ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ.
'ಅಬಂಡನ್ಸ್ ಆಫ್ ಮಿಲೆಟ್ಸ್' ಈ ಹಾಡು ಈ ವರ್ಷ ವಿಶ್ವಸಂಸ್ಥೆಯಿಂದ ಘೋಷಿಸಲ್ಪಟ್ಟ 'ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ' ವನ್ನು ನೆನಪಿಸುತ್ತದೆ. ಈ ಪ್ರಸ್ತಾಪವನ್ನು ಭಾರತವೇ ವಿಶ್ವಸಂಸ್ಥೆ ಮುಂದಿಟ್ಟಿತ್ತು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಆಡಳಿತ ಮಂಡಳಿಗಳ ಸದಸ್ಯರು ಮತ್ತು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ 75 ನೇ ಅಧಿವೇಶನದಲ್ಲಿ 72 ದೇಶಗಳು ಇದಕ್ಕೆ ಅನುಮೋದನೆ ನೀಡಿವೆ.
ಗ್ರ್ಯಾಮಿ ಅವಾರ್ಡ್ಸ್‌ಗೆ ನಾಮನಿರ್ದೇಶನಗೊಂಡ ಇತರೆ ಹಾಡುಗಳು ಹೀಗಿವೆ. ಅರೂಜ್ ಅಫ್ತಾಬ್, ವಿಜಯ್ ಅಯ್ಯರ್ ಮತ್ತು ಶಹಜಾದ್ ಇಸ್ಮಾಯಿಲಿ ಅವರ ಶಾಡೋ ಫೋರ್ಸಸ್, ಬರ್ನಾ ಬಾಯ್ ಅವರ ಅಲೋನ್, ಡೇವಿಡೋ ಅವರ ಫೀಲ್, ಸಿಲ್ವಾನಾ ಎಸ್ಟ್ರಾಡಾ ಅವರ ಮಿಲಾಗ್ರೊ ವೈ ಡಿಸಾಸ್ಟ್ರೆ ಮತ್ತು ಬೇಲಾ ಫ್ಲೆಕ್ ಸೇರಿದಂತೆ ಹಲವು ಮಂದಿ ಸ್ಪರ್ಧೆಯಲ್ಲಿದ್ದಾರೆ.


Click it and Unblock the Notifications











