ಡಿ-ಬಾಸ್ ಮೆಚ್ಚಿದ 'ಗೋರಿ' ಹಾಡು: ಸಿನಿಮಾ ಪತ್ರಕರ್ತರ ಕನಸಿನ ಚಿತ್ರ
'ಬ್ಯಾರೇನೆ ಐತಿ.....' ಹಾಡಿನಿಂದ ಸದ್ದು ಮಾಡಿದ್ದ 'ಗೋರಿ' ಸಿನಿಮಾ ತಂಡ ಈಗ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ. ಈ ಹಾಡನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆ ಮಾಡಿದ್ದು, ಮನಸಾರೆ ಮೆಚ್ಚಿಕೊಂಡು ಶುಭಹಾರೈಸಿದ್ದಾರೆ.
ಪ್ರೇಮಿಗಳ ದಿನದ ಪ್ರಯುಕ್ತ 'ಗೋರಿ' ಚಿತ್ರದ ಪರವಾಗಿ ರೊಮ್ಯಾಂಟಿಕ್ ಹಾಡೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಡಿ ಬಾಸ್. ಆನಂದ್ ಆಡಿಯೋ ಯ್ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿರುವ ಈ ಹಾಡು ಒಳ್ಳೆಯ ರೆಸ್‌ಪಾನ್ಸ್ ಪಡೆದುಕೊಳ್ಳುತ್ತಿದೆ.
ಅಂದ್ಹಾಗೆ, ಈ ಹಾಡಿಗೆ ಸಾಹಿತ್ಯ ರಚಿಸಿರುವುದು ಸಿನಿಮಾ ಪತ್ರಕರ್ತ ಮಾಲ್ತೇಶ್ ಜಗ್ಗಿನ್. ಬಹಳ ವರ್ಷಗಳಿಂದ ಸಿನಿಮಾ ಪತ್ರಕರ್ತನಾಗಿ ಅನೇಕ ಸಿನಿಮಾಗಳ ಸುದ್ದಿಯನ್ನು ಜನರಿಗೆ ತಲುಪಿಸಿದ್ದ ಮಾಲ್ತೇಶ್ ಈಗ ತಮ್ಮದೇ ಹಾಡೊಂದನ್ನು ಜನರ ಮುಂದೆ ತಂದಿದ್ದಾರೆ.

''ಹೃದಯದ ಪರಿಚಯಕೆ ನಿನ್ನಯ ಹೆಸರಿಡುವೆ.....' ಮಾಲ್ತೇಶ್ ಅವರ ಚೊಚ್ಚಲ ಹಾಡು ಇದಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಾಡು ಕೇಳಿ ಖುಷಿಯಿಂದ ರಿಲೀಸ್ ಮಾಡಿಕೊಟ್ಟಿದ್ದಾರೆ. ಸಂತೋಷ್ ವೆಂಕಿ ಈ ಹಾಡಿಗೆ ದನಿಗೂಡಿಸಿದ್ದಾರೆ.
ಇನ್ನು ಈ ಚಿತ್ರದ ನಾಯಕ ಕಿರಣ್ ಹಾವೇರಿ ಸಹ ಸಿನಿಮಾ ಪತ್ರಕರ್ತ. ಸಿನಿಮಾ ರಿಪೋರ್ಟರ್ ಆಗಿ ಜನರಿಗೆ ಸುದ್ದಿ ನೀಡುವ ಕೆಲಸದ ಜೊತೆ ತನ್ನ ಕನಸಿನ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಸ್ಮಿತಾ ಹಾವೇರಿ ಅವರು ಕಿರಣ್‌ಗೆ ನಾಯಕಿಯಾಗಿ ನಟಿಸಿದ್ದಾರೆ.

ಈ ಹಿಂದೆ 'ಬ್ಯಾರೇನೆ ಐತಿ...' ಹಾಡು ಬಹಳ ದೊಡ್ಡ ಮಟ್ಟದ ಹಿಟ್ ಆಗಿತ್ತು. ಈ ಹಿಂದೆ ಶರಣ್ ನಟನೆಯಲ್ಲಿ ಮೂಡಿಬಂದಿದ್ದ ''ಚುಟು ಚುಟು'' ಹಾಡಿನ ಶೈಲಿನಲ್ಲಿ ಈ ಹಾಡು ಬಂದಿತ್ತು. ಆ ಹಾಡಿಗೆ ಸಾಹಿತ್ಯ ರಚಿಸಿದ್ದ ಶಿವು ಬೇರ್ಗಿ 'ಬ್ಯಾರೇನೆ ಐತಿ...' ಹಾಡು ಬರೆದಿದ್ದರು.
ಹಾವೇರಿ ಟಾಕೀಸ್ ಬ್ಯಾನರ್ ನಲ್ಲಿ ತಯಾರಾಗಿರುವ 'ಗೋರಿ' ಚಿತ್ರಕ್ಕೆ ಗೋಪಾಲ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಿಗೂ ಇದು ಚೊಚ್ಚಲ ಸಿನಿಮಾ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿನು ಮನಸು ಸಂಗೀತ ನೀಡಿದ್ದಾರೆ.

ಎಂ ಹೆಚ್ ಜಗ್ಗೀನ್ ಜೊತೆ ಉಳಿದ ಹಾಡುಗಳಿಗೆ ಶಿವು ಬೇರ್ಗಿ, ಕೆ ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ. ರವೀಂದ್ರ ಸೊರಗಾವಿ, ಸರಿಗಮಪ ಖ್ಯಾತಿಯ ಮೆಹಬೂಬ್ ಸಾಬ್, ಸಂತೋಷ್ ವೆಂಕಿ ಹಾಡುಗಳಿಗೆ ಧ್ವನಿ ನೀಡಿದ್ದಾರೆ.


Click it and Unblock the Notifications











