ಆಲ್ಓಕೆ vs ರಾಹುಲ್ ಡಿಟ್ಟೋ ರ‍್ಯಾಪ್ ಕಿತ್ತಾಟ: ನಾಳೆ 10 ಗಂಟೆಗೆ ಮುಹೂರ್ತ ಇಟ್ಟ ಆಲ್‌ಓಕೆ?
ಈ ಹಿಂದೆ ರ‍್ಯಾಪರ್‌ಗಳ ನಡುವಿನ ಕಿತ್ತಾಟವನ್ನು ಹಿಂದಿ ಭಾಷೆಯಲ್ಲಿ ನೋಡುತ್ತಿದ್ದ ನಮಗೆ ಇದೀಗ ಕನ್ನಡದಲ್ಲಿಯೇ ರ‍್ಯಾಪರ್‌ಗಳ ಕಿತ್ತಾಟ ಕಾಣಸಿಗುತ್ತಿದೆ. ಈ ಹಿಂದೆ ಬ್ರದರ್ ಫ್ರಮ್ ಅನದರ್ ಮದರ್ ಎನ್ನುತ್ತಿದ್ದ ಗಾಯಕರಾದ ಆಲ್ ಓಕೆ ಹಾಗೂ ರಾಹುಲ್ ಡಿಟ್ಟೋ ಈಗ ಒಬ್ಬರನ್ನೊಬ್ಬರು ಕಂಡರೆ ಎಣ್ಣೆ ಸೀಗೆಕಾಯಿ ಹಾಗೆ ವರ್ತಿಸುತ್ತಿದ್ದಾರೆ.
ಫೆಬ್ರವರಿ 1 2018ರಂದು ಬಿಡುಗಡೆಯಾದ ನಂಗನ್ಸಿದ್ದು ಹಾಡಿನವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಈ ಹಾಡು ಇದೇ ಆಲ್ ಓಕೆ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿತ್ತು ಹಾಗೂ ರಾಹುಲ್ ಡಿಟ್ಟೋ ಬರೆದು ಹಾಡಿದ್ದರು. ಹಾಡನ್ನು ಕೇಳಿದ ಚಿಕ್ಕ ಮಕ್ಕಳೂ ಸಹ ಇದು ಆಗಿನ ಕಾಲಕ್ಕೆ ಟಾಪ್‌ನಲ್ಲಿದ್ದ ಚಂದನ್ ಶೆಟ್ಟಿಯ ವಿರುದ್ಧ ಮಾಡಿರುವ ಹಾಡು ಎಂದು ಸುಲಭವಾಗಿ ಊಹಿಸಿಬಿಟ್ಟಿದ್ದರು.

ಈ ಹಾಡು ಬಿಡುಗಡೆಯಾದ ಬಳಿಕ ಆಗಿದ್ದೆಲ್ಲವೂ ಉಲ್ಟಾ ಪಲ್ಟಾ. ಚಂದನ್ ಶೆಟ್ಟಿಯನ್ನು ಭೇಟಿ ಮಾಡಿದ್ದ ಆಲ್‌ಓಕೆ ಶೆಟ್ರು ನನ್ನ ಬೆಸ್ಟ್ ಫ್ರೆಂಡ್ ಎಂದಿದ್ದರು. ಇತ್ತ ಆಲ್‌ಓಕೆ ಜತೆಗೆ ತಂಡವಾಗಿ ಕೆಲಸ ಮಾಡುತ್ತಿದ್ದ ರಾಹುಲ್ ಡಿಟ್ಟೋ, ಬಿಜು ಸೇರಿದಂತೆ ಹಲವರು ಆಲ್‌ಓಕೆ ತಂಡವನ್ನು ಬಿಟ್ಟು ಆಚೆ ಬಂದು ತಮ್ಮದೇ ಹೊಸ ಚಾನೆಲ್‌ಗಳನ್ನು ಆರಂಭಿಸಿದರು. ತಗೋ ಎಂಬ ಹಾಡನ್ನು ಮಾಡಿದ ರಾಹುಲ್ ಡಿಟ್ಟೋ ನಂಗನ್ಸಿದ್ದು ಹಾಡಿನ ಬಗ್ಗೆ ಇದ್ದ ಗೊಂದಲಗಳಿಗೆಲ್ಲಾ ತೆರೆ ಎಳೆದರು.
ಇಷ್ಟೆಲ್ಲಾ ಆದ ಬಳಿಕ ಒಟ್ಟಿಗೆ ಇದ್ದ ರಾಹುಲ್ ಡಿಟ್ಟೋ ಹಾಗೂ ಆಲ್‌ಓಕೆ ದೂರಾಗಿದ್ದೇಕೆ ಎಂಬ ಪ್ರಶ್ನೆಯೂ ಸಹ ಸಹಜವಾಗಿಯೇ ಹುಟ್ಟಿಕೊಂಡಿತು. ಕೆಲವೊಂದಷ್ಟು ಲೈವ್‌ಗಳಲ್ಲಿ ಈ ಬಗ್ಗೆ ಮಾತಾನಡಿದಾಗ ಸಮಯ ನೋಡಿ ಉತ್ತರ ಕೊಡುತ್ತೇನೆ ಎಂದಿದ್ದ ರಾಹುಲ್ ಡಿಟ್ಟೋ ನಿನ್ನೆ ( ಫೆಬ್ರವರಿ 28 ) ನಂಗನ್ಸಿದ್ದು ಎರಡನೇ ಭಾಗವನ್ನು ಬಿಡುಗಡೆ ಮಾಡುವ ಮೂಲಕ ತಾನು ಹಾಗೂ ಆಲ್‌ಓಕೆ ದೂರಾಗಿದ್ದೇಕೆ ಎಂಬುದನ್ನು ರ‍್ಯಾಪ್ ಮೂಲಕವೇ ಬಿಚ್ಚಿಟ್ಟಿದ್ದಾರೆ.

ಮೊದಲ ಹಾಡಿನಲ್ಲಿ ಚಂದನ್ ಶೆಟ್ಟಿಯನ್ನು ಟ್ರೋಲ್ ಮಾಡಿದ್ದ ರಾಹುಲ್ ಡಿಟ್ಟೋ ಎರಡನೇ ಹಾಡಿನಲ್ಲಿ ಆಲ್‌ಓಕೆ ತನಗೆ ಮೋಸ ಮಾಡಿದ, ಹಣ ನೀಡದೇ ಕಾಡಿಸಿದ, ನಮ್ಮ ನಮ್ಮಲ್ಲೇ ತಂದಿಡುವ ಕೆಲಸಗಳನ್ನು ಮಾಡಿದ ಎಂದೆಲ್ಲಾ ಸಾಹಿತ್ಯ ಬರೆದು ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಇಷ್ಟು ದಿನಗಳ ಕಾಲ ಎಲ್ಲಿಯೂ ಆಲ್‌ಓಕೆ ಹೆಸರನ್ನು ತೆಗೆದುಕೊಳ್ಳದೇ ಇದ್ದ ರಾಹುಲ್ ಡಿಟ್ಟೋ ಈ ಹಾಡಿನಲ್ಲಿ ಆಲ್‌ಓಕೆ ಫೋಟೊವನ್ನೇ ಬಳಸಿ ನೇರವಾಗಿಯೇ ಟಾಂಗ್ ನೀಡಿದ್ದಾರೆ.
ಇನ್ನು ಇಷ್ಟೆಲ್ಲಾ ಆರೋಪಗಳು ಎದುರಾದಾಗ ಯಾರು ತಾನೇ ಸುಮ್ಮನೆ ಇರುತ್ತಾರೆ ಹೇಳಿ. ಸಖತ್ತಾಗಿ ಸಾಹಿತ್ಯ ಬರೆದು ತಮ್ಮ ಹಾಡುಗಳಿಂದ ಜನರನ್ನು ಒಳ್ಳೆಯ ಕೆಲಸಗಳನ್ನು ಮಾಡಿ, ಚಿಂತೆ ಬಿಡಿ, ಆರಾಮಾಗಿ ಬದುಕು ನಡೆಸಿ ಎಂದೆಲ್ಲಾ ಹೇಳುವ ಆಲ್‌ಓಕೆ ಕೂಡ ತೊಡೆ ತಟ್ಟಿದಂತಿದೆ. ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಅಧಿಕೃತ ಖಾತೆಗಳಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಆಲ್‌ಓಕೆ 'ನಾಳೆ ಬೆಳಗ್ಗೆ ಹತ್ತು ಗಂಟೆಗೆ 02/03/2023' ಎಂದು ಬರೆದುಕೊಂಡಿದ್ದಾರೆ.
ಹೀಗಾಗಿ ನಾಳೆ ಬೆಳಗ್ಗೆ ಹತ್ತು ಗಂಟೆಗೆ ಆಲ್‌ಓಕೆ ರಾಹುಲ್ ಡಿಟ್ಟೋಗೆ ಟಾಂಗ್ ನೀಡಲಿದ್ದಾರೆ ಎಂಬ ಊಹೆಗಳನ್ನು ನೆಟ್ಟಿಗರು ಮಾಡುತ್ತಿದ್ದಾರೆ. ಆಲ್‌ಓಕೆ ಸಹ ಹಾಡೊಂದರ ಮೂಲಕ ರಾಹುಲ್ ಡಿಟ್ಟೋ ಮಾಡಿದ ಆರೋಪಗಳಿಗೆ ಉತ್ತರ ನೀಡುವ ಸಾಧ್ಯತೆ ಇದ್ದು, ಕೇವಲ ಒಂದು ಕಡೆಯ ಅಪವಾದವನ್ನು ಕೇಳಿದ್ದ ಕೇಳುಗರಿಗೆ ಮತ್ತೊಂದು ಕಡೆಯವರ ವಾದವೇನು ಎಂಬುದೂ ಸಹ ತಿಳಿಯಲಿದೆ.


Click it and Unblock the Notifications











