ಹಾಡಿಗೆ ಮಾರು ಹೋದ ಅಲ್ಲು ಅರ್ಜುನ್: ಹಾಡುಗಾರನಿಗೆ ವಿಶೇಷ ಪತ್ರ
ಅಲ್ಲು ಅರ್ಜುನ್ ನಟಿಸಿ, ಸುಕುಮಾರ್ ನಿರ್ದೇಶನ ಮಾಡಿರುವ 'ಪುಷ್ಪ' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಸಿನಿಮಾ ಈಗಾಗಲೇ 300 ಕೋಟಿಗೂ ಹೆಚ್ಚು ಹಣ ಗಳಿಸಿದೆ.
'ಪುಷ್ಪ' ಸಿನಿಮಾ ಅದ್ಯಾವ ಪರಿ ಜನಮೆಚ್ಚುಗೆ ಗಳಿಸಿದೆಯೆಂದರೆ ವಿದೇಶಗಳಲ್ಲೂ ಅಲ್ಲು ಅರ್ಜುನ್ ಡ್ಯಾನ್ಸ್, ಮ್ಯಾನರಿಸಂಗಳನ್ನು ಅನುಕರಣೆ ಮಾಡುತ್ತಿದ್ದಾರೆ. ಸಿನಿಮಾದ ಹಾಡುಗಳಂತೂ ಸೂಪರ್-ಡೂಪರ್ ಹಿಟ್ ಆಗಿವೆ. ಇನ್‌ಸ್ಟಾಗ್ರಾಂ ರೀಲ್‌ಗಳಂತೂ 'ಪುಷ್ಪ' ಸಿನಿಮಾದ ಹಾಡುಗಳಿಂದ ತುಂಬಿ ಹೋಗಿವೆ.
ಅದರಲ್ಲೂ ವಿಶೇಷವಾಗಿ 'ಶ್ರೀವಲ್ಲಿ' ಹಾಡಂತೂ ಮೆಗಾ ಹಿಟ್ ಆಗಿದೆ. 'ಶ್ರೀವಲ್ಲಿ' ಹಾಡಿಗೆ ಅಲ್ಲು ಅರ್ಜುನ್‌ನಂತೆ ಕುಂಟುತ್ತಾ ಸ್ಟೆಪ್ ಹಾಕಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಹರಿದಾಡುತ್ತಿವೆ.
'ಪುಷ್ಪ' ಸಿನಿಮಾದ 'ಶ್ರೀವಲ್ಲಿ' ಹಾಡನ್ನು ಹಾಡಿರುವುದು ತಮಿಳಿನ ಜನಪ್ರಿಯ ಹಾಡುಗಾರ ಸಿದ್ ಶ್ರೀರಾಮ್. ಅವರ ಹಾಡಿಗೆ ಸಿನಿಪ್ರಿಯರು ಮಾರು ಹೋಗಿದ್ದಾರೆ. ಸಿದ್ ಶ್ರೀರಾಮ್ ದನಿಗೆ ಮನಸೋತಿರುವವರಲ್ಲಿ ನಟ ಅಲ್ಲು ಅರ್ಜುನ್ ಸಹ ಒಬ್ಬರು. ಸಿದ್ ಶ್ರೀರಾಮ್ ಹಾಡು ಕೇಳಿ ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಅಲ್ಲು ಅರ್ಜುನ್.
'ಪುಷ್ಪ' ಸಿನಿಮಾದ ಬಿಡುಗಡೆ ಪೂರ್ವ ನಡೆದ ಕಾರ್ಯಕ್ರಮದಲ್ಲಿ ಗಾಯಕ ಸಿದ್ ಶ್ರೀರಾಮ್ ಲೈವ್‌ನಲ್ಲಿ 'ಶ್ರೀವಲ್ಲಿ' ಹಾಡು ಹಾಡಿದ್ದರು ಅಂದು ತಮಗೆ ಆದ ಅನುಭವವನ್ನು ಸಾಮಾಜಿಕ ಜಾಲತಾಣದ ಮೂಲಕ ಅಲ್ಲು ಅರ್ಜುನ್ ಹಂಚಿಕೊಂಡಿದ್ದಾರೆ.

ಸಿದ್ ಶ್ರೀರಾಮ್ ಹಾಡಿನ ಮೋಡಿಯ ಬಗ್ಗೆ ಅಲ್ಲು ಅರ್ಜುನ್ ಮಾತು
''ಬಿಡುವಿನ ವೇಳೆಯಲ್ಲಿ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದುಕೊಂಡಿದ್ದೆ. ನನ್ನ ಸಹೋದರ ಸಿದ್ ಶ್ರೀರಾಮ್ 'ಪುಷ್ಪ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ 'ಶ್ರೀವಲ್ಲಿ' ಹಾಡನ್ನು ವೇದಿಕೆ ಮೇಲೆ ಹಾಡಿದ್ದರು. ಸಿದ್ ಶ್ರೀರಾಮ್ ಅಂದು ಹಾಡನ್ನು ಹಿನ್ನೆಲೆ ಸಂಗೀತ ಇಲ್ಲದೆ ಹಾಡಲು ಪ್ರಾರಂಭಿಸಿದರು. ಹಿನ್ನೆಲೆ ಸಂಗೀತವು ಅವರ ನಿಧಾನಕ್ಕೆ ಅವರ ಹಾಡಿನೊಂದಿಗೆ ಬೆರೆತುಕೊಳ್ಳುತ್ತದೇನೋ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಯಾವ ಹಿನ್ನೆಲೆ ಸಂಗೀತವೂ ಬರಲಿಲ್ಲ. ಆದರೆ ಸಿದ್ ಶ್ರೀರಾಮ್ ಸಂಗೀತದ ಹೊರತಾಗಿಯೇ ಹಾಡು ಮುಂದುವರೆಸಿದರು. ಅದೆಷ್ಟು ಅದ್ಭುತವಾದ ಹಾಡುಗಾರಿಕೆ ಅವರದ್ದು, ನನಗೆ ಅಂದು ಅನ್ನಿಸಿತು, ಸಿದ್ ಶ್ರೀರಾಮ್‌ಗೆ ಸಂಗೀತವೇ ಬೇಕಿಲ್ಲ ಆತನೇ ಸಂಗೀತ'' ಎಂದು ಬರೆದುಕೊಂಡಿದ್ದಾರೆ ನಟ ಅಲ್ಲು ಅರ್ಜುನ್.
ವಿಡಿಯೋ ಹಂಚಿಕೊಂಡಿರುವ ಅಲ್ಲು ಅರ್ಜುನ್
ಜೊತೆಗೆ ಅಂದಿನ ಕಾರ್ಯಕ್ರಮದಲ್ಲಿ ಸಿದ್ ಶ್ರೀರಾಮ್ ಹಾಡಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಸಿದ್ ಶ್ರೀರಾಮ್ ವೇದಿಕೆ ಮೇಲೆ ಹಿನ್ನೆಲೆ ಸಂಗೀತವಿಲ್ಲದೆ 'ಶ್ರೀವಲ್ಲಿ' ಹಾಡು ಹಾಡುತ್ತಿದ್ದರೆ, ವೇದಿಕೆ ಮುಂದೆ ಕೂತಿದ್ದ ಅಲ್ಲು ಅರ್ಜುನ್ ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡುತ್ತಲೇ ಇರುತ್ತಾರೆ. ಅಂತಿಮವಾಗಿ ಸಿದ್ ಶ್ರೀರಾಮ್ ಹಾಡಿನ ಪಲ್ಲವಿ ಹಾಡುವ ವೇಳೆಗೆ ಅಬ್ಬಾ ಎನ್ನುತ್ತಾ ತಲೆ ದೂಗಿದ್ದಾರೆ. ಅಲ್ಲು ಅರ್ಜುನ್ ಪಕ್ಕದಲ್ಲೇ ಕೂತಿದ್ದ ರಶ್ಮಿಕಾ ಸಹ ಸಿದ್ ಶ್ರೀರಾಮ್ ಹಾಡಿಗೆ ತಲೆದೂಗಿದ್ದಾರೆ.

ಅಮೆರಿದಲ್ಲಿದ್ದ ಸಿದ್ ಶ್ರೀರಾಮ್ ಅನ್ನು ಗುರುತಿಸಿದ್ದ ರೆಹಮಾನ್
ಸಿದ್ ಶ್ರೀರಾಮ್ ಭಾರತದ ಪ್ರಸ್ತುತ ಅತ್ಯುತ್ತಮ ಗಾಯಕರಲ್ಲಿ ಒಬ್ಬರು. ಅಮೆರಿಕದಲ್ಲಿದ್ದ ಸಿದ್ ಶ್ರೀರಾಮ್ ಅನ್ನು ಮೊದಲು ಗುರುತಿಸಿದ್ದು ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್. ಬ್ರೂಕ್ಲಿ ಸಂಗೀತ ಯುವಿನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದ ಸಿದ್ ಶ್ರೀರಾಮ್ ಹಾಡುಗಾರಿಕೆ ಮೆಚ್ಚಿದ ಎ.ಆರ್.ರೆಹಮಾನ್, ಮಣಿರತ್ನಂ ನಿರ್ದೇಶನದ 'ಕಡಲ್' ಸಿನಿಮಾದಲ್ಲಿ ಮೊದಲ ಹಾಡು ಹಾಡಲು ಅವಕಾಶ ಕೊಟ್ಟರು. ಆ ನಂತರ ಸಿದ್ ಶ್ರೀರಾಮ್‌ಗೆ ಅದೆಷ್ಟು ಅವಕಾಶಗಳು ಹುಡುಕಿ ಬಂದವೆಂದರೆ ಅವರು ಅಮೆರಿಕ ಬಿಟ್ಟು ಭಾರತಕ್ಕೇ ಬಂದು ನೆಲೆಸಿಬಿಟ್ಟರು.

ಕನ್ನಡದಲ್ಲೂ ಹಾಡಿದ್ದಾರೆ ಸಿದ್ ಶ್ರೀರಾಮ್
ಸಿದ್ ಶ್ರೀರಾಮ್‌ಗೆ ಹಿನ್ನೆಲೆ ಸಂಗೀತದ ವಿನಃ ಹಾಡುವುದು ಬಹಳ ಇಷ್ಟ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವು ಹಾಡುಗಳನ್ನು ಹಿನ್ನೆಲೆ ಸಂಗೀತವಿಲ್ಲದೆ ಹಾಡಿದ್ದಾರೆ. ಬೇರೆಯವರು ಹಾಡಿದ, ತಮಗೆ ಇಷ್ಟವಾದ ಹಾಡುಗಳನ್ನು ತಾವೊಬ್ಬರೇ ಹಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ಸಿದ್ ಶ್ರೀರಾಮ್. ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಇರುವ 'ಅಪ್ಸರಾ ಆಲಿ' ಮರಾಠಿ ಹಾಡಂತೂ ಭಾರಿ ಹಿಟ್ ಅಗಿಬಿಟ್ಟಿದೆ. ಸಿದ್ ಶ್ರೀರಾಮ್ ಕನ್ನಡದಲ್ಲಿಯೂ ಕೆಲವು ಹಾಡುಗಳನ್ನು ಹಾಡಿದ್ದಾರೆ. 'ಭಜರಂಗಿ 2' ಸಿನಿಮಾಕ್ಕಾಗಿ ಹಾಡಿದ 'ನೀ ಸಿಗೊವರೆಗೂ', 'ಟಾಮ್ ಆಂಡ್ ಜೆರ್ರಿ' ಸಿನಿಮಾಕ್ಕಾಗಿ ಹಾಡಿದ 'ಹಾಯಾಗಿದೆ ಎದೆಯೊಳಗೆ' ಹಾಡುಗಳು ಸೂಪರ್ ಹಿಟ್ ಆಗಿವೆ.


Click it and Unblock the Notifications











