Pushpa- 2 Song : ಜಗ್ಗಲ್ಲ, ಕುಗ್ಗಲ್ಲ ಈ ಪುಷ್ಪರಾಜ್; 'ಪುಷ್ಪ'-2 ಫಸ್ಟ್ ಸಾಂಗ್ ಬಂತು
'ಪುಷ್ಪ-2' ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿದೆ. ಮೇಡೇ ಸಂಭ್ರಮದಲ್ಲಿ ಫಸ್ಟ್ ಸಾಂಗ್ ರಿಲೀಸ್ ಮಾಡಿ ಚಿತ್ರತಂಡ ಹೈಪ್ ಕ್ರಿಯೇಟ್ ಮಾಡುವ ಪ್ರಯತ್ನ ಮಾಡಿದೆ. ಪೋಸ್ಟರ್, ಟೀಸರ್ ಹೀಗೆ ಚಿತ್ರದ ಸ್ಯಾಂಪಲ್‌ಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಗುತ್ತಿತ್ತು. ಸದ್ಯ ಬಂದಿರುವ ಲಿರಿಕಲ್ ಸಾಂಗ್ ತಕ್ಕಮಟ್ಟಿಗೆ ಪ್ರೇಕ್ಷಕರ ಮನಗೆದ್ದಿದೆ.
ದೇವಿಶ್ರೀ ಪ್ರಸಾದ್ ಮ್ಯೂಸಿಕ್‌ನಲ್ಲಿ 5 ಭಾಷೆಗಳಲ್ಲಿ 'ಪುಷ್ಪ ಪುಷ್ಪ ಪುಷ್ಪ' ಸಾಂಗ್ ಮೂಡಿ ಬಂದಿದೆ. ತೆಲುಗಿನಲ್ಲಿ ಚಂದ್ರಬೋಸ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್, ದೀಪಕ್ ದನಿಯಾಗಿದ್ದಾರೆ. ಕನ್ನಡದಲ್ಲಿ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯಕ್ಕೆ ವಿಜಯ ಪ್ರಕಾಶ್ ಕಂಠವಿದೆ. ಆಗಸ್ಟ್ 15ಕ್ಕೆ 'ಪುಷ್ಪ-2' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದಕ್ಕೂ ಮುನ್ನ ಒಂದೊಂದೇ ಹಾಡು ಬಿಡುಗಡೆ ಮಾಡಲಾಗುತ್ತಿದೆ.

ಮತ್ತೊಮ್ಮೆ ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಸ್ಟೈಲ್, ಡ್ಯಾನ್ಸ್ ಝಲಕ್ ಮಿಕ್ಸ್ ಮಾಡಿ ಲಿರಿಕಲ್ ವೀಡಿಯೋ ಡಿಸೈನ್ ಮಾಡಿದ್ದಾರೆ. ಅಸಲು ತಗ್ಗೋದೆ ಇಲ್ಲ ಎಂದು ಈ ಬಾರಿ ಪುಷ್ಪರಾಜ್ ಡೈಲಾಗ್ ಜೊತೆಗೆ ಸಾಂಗ್ ಮುಗಿಯುತ್ತದೆ. ಪ್ರೀಕ್ವೆಲ್ ಆರಂಭದಲ್ಲಿ ಪುಷ್ಪರಾಜ್ ರಕ್ತಚಂದನ ಸ್ಮಗ್ಲರ್ ಆಗಿದ್ದ. ಕ್ಲೈಮ್ಯಾಕ್ಸ್ ವೇಳೆಗೆ ಅಕ್ರಮ ರಕ್ತಚಂದನ ಸಾಗಾಣಿಕೆಯ ಸಿಂಡಿಕೇಟ್ ಅನ್ನೂ ತನ್ನ ಹತೋಟಿಗೆ ತೆಗೆದುಕೊಂಡಿದ್ದ. ಅಲ್ಲಿಂದ ಮುಂದಿನ ಕಥೆ ಸೀಕ್ವೆಲ್‌ನಲ್ಲಿ ಇರಲಿದೆ.
ಪುಷ್ಪರಾಜ್ ಆರ್ಭಟ ಈಗ ಹೇಗಿರುತ್ತದೆ? ಆತನ ಶಕ್ತಿ ಸಾಮರ್ಥ್ಯ ಏನು? ಬಂಡತನ ಏನು? ಎನ್ನುವುದನ್ನು ಬಿಲ್ಡಪ್ ಕೊಟ್ಟು ಕಟ್ಟಿಕೊಟ್ಟಿರುವ ಸಾಂಗ್ ಇದು. ದೇವಿಶ್ರೀ ಮಾಸ್ ಬೀಟ್‌ಗೆ ಅಭಿಮಾನಿಗಳು 'ಪುಷ್ಪ ಪುಷ್ಪ ಪುಷ್ಪ' ಎಂದು ಜಪ ಮಾಡುವಂತಾಗಿದೆ. ಅಭಿಮಾನಿಗಳಿಗೆ ಇಷ್ಟವಾಗಿದ್ದರೆ ಕೆಲವರಿಗೆ ಪರವಾಗಿಲ್ಲ ಎನಿಸಿದೆ. ಅಲ್ಲಿಗೆ 'ಪುಷ್ಪ-2' ಚಿತ್ರದ ಫಸ್ಟ್ ಸಾಂಗ್ ಗೆದ್ದಂತಾಗಿದೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ-2' ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. 'ಪುಷ್ಪ' ಸರಣಿಯನ್ನು 'ಕೆಜಿಎಫ್' ಸರಣಿಗೆ ಹೋಲಿಸಲಾಗುತ್ತಿದೆ. ಈಗಾಗಲೇ ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ ಆರಂಭವಾಗಿದ್ದು ಹಿಂದಿ ಥ್ರಿಯೇಟ್ರಿಕಲ್ ರೈಟ್ಸ್ ಹಾಗೂ 5 ಭಾಷೆಗಳ ಓಟಿಟಿ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿರುವ ಮಾತುಗಳು ಕೇಳಿಬರ್ತಿದೆ.

'ಪುಷ್ಪ' ಮೊದಲ ಭಾಗ ಅಂದಾಜು 300 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಚಿತ್ರದ 2ನೇ ಭಾಗ ತೆರೆಗೆ ತಲಾಗುತ್ತಿದೆ. ಕಲಾವಿದರು, ತಂತ್ರಜ್ಞರ ಸಂಭಾವನೆ ಕೂಡ ಹೆಚ್ಚಾಗಿದೆ. ಚಿತ್ರದ ಬಜೆಟ್ ಕೂಡ ಹಲವು ಪಟ್ಟು ಹೆಚ್ಚಾಗಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ 'ಪುಷ್ಪ'-2 ಸಿನಿಮಾ ತೆರೆಗೆ ತರಲಾಗುತ್ತಿದೆ.
ಚಿತ್ರದಲ್ಲಿ ಫಹಾದ್ ಫಾಸಿಲ್, ಜಗಪತಿ ಬಾಬು, ಪ್ರಕಾಶ್ ರಾಜ್, ಅನಸೂಯ ಭಾರಧ್ವಜ್, ಧನಂಜಯ್, ಬ್ರಹ್ಮಾಜಿ ಸೇರಿದಂತೆ ಘಟಾನುಘಟಿ ಕಲಾವಿದರು 'ಪುಷ್ಪ'-2 ಚಿತ್ರದಲ್ಲಿದ್ದಾರೆ. ಮಿರೋಸ್ಲಾ ಕುಬಾ ಬ್ರೋಜೆಕ್ ಛಾಯಾಗ್ರಹಣ ಚಿತ್ರಕ್ಕಿದೆ. ಈ ಬಾರಿ ಬೆಂಗಾಲಿ ಭಾಷೆಯಲ್ಲಿ ಕೂಡ ಸಿನಿಮಾ ರಿಲೀಸ್ ಆಗುತ್ತಿದೆ. ದೇಶ ವಿದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications










