"ನಿರ್ಮಾಪಕನಿಲ್ಲದೇ ನಡೆಯದು ನಮ್ಮ ನಾಟಕ": ದರ್ಶನ್- ಉಮಾಪತಿ ಫೈಟ್ ಮಧ್ಯೆ ಹೊಸ ಸಾಂಗ್ ರಿಲೀಸ್
ಕಳೆದ ಮೂರ್ನಾಲ್ಕು ದಿನಗಳಿಂದ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವಿನ ತಿಕ್ಕಾಟ ತಾರಕ್ಕೇರಿದೆ. ಈ ಸಂಬಂಧ ದರ್ಶನ್ ವಿರುದ್ಧ ದೂರುಗಳು ದಾಖಲಾಗುತ್ತಿದೆ. ಇನ್ನು ದರ್ಶನ್ ತಗಡು ಹೇಳಿಕೆಗೆ ಉಮಾಪತಿ ಶ್ರೀನಿವಾಸ್ ಟಾಂಗ್ ಕೊಡುತ್ತಾ ಬರುತ್ತಿದ್ದಾರೆ. ಇಂದು(ಫೆಬ್ರವರಿ 23) ಡಿಸಿಎಂ ಡಿಕೆಶಿ ಭೇಟಿ ಬಳಿಕ ದರ್ಶನ್ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿನಿಮಾ ನಿರ್ಮಾಪಕರ ಬಗ್ಗೆ ನಟ ದರ್ಶನ್ ಹೇಳಿಕೆಯನ್ನು ಕೆಲವರು ಖಂಡಿಸುತ್ತಿದ್ದಾರೆ. ಜನಪ್ರಿಯ ನಟನಾಗಿ ಸಾರ್ವಜನಿಕ ಜೀವನದಲ್ಲಿರುವ ದರ್ಶನ್ ಈ ರೀತಿ ಮಾತನಾಡುವುದು ಸರಿಯಲ್ಲ. ಡಾ. ರಾಜ್‌ಕುಮಾರ್ ನಿರ್ಮಾಪಕರನ್ನು ಅನ್ನದಾತರು ಎಂದು ಕರೆಯುತ್ತಿದ್ದರು. ಆದರೆ ದರ್ಶನ್ ತಗಡು, ಗುಮ್ಮಿಸ್ಕೊತ್ತಿಯಾ ಎಂದು ಹೇಳಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ.

ಉಮಾಪತಿ ಶ್ರೀನಿವಾಸ್ ಸಹ ಮಾತನಾಡಿ ದರ್ಶನ್ ಅವರ ಹೇಳಿಕೆ ಬೆದರಿಕೆ ರೀತಿ ಇದೆ ಎಂದಿದ್ದಾರೆ. ಆದರೂ ಅವರು ದೊಡ್ಡವರು, ಸಿನಿಮಾ ನಿರ್ಮಾಣ ಮಾಡಿದ ನಾವು ತಗಡುಗಳೇ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ. ಕೆಲವರು ಉಮಾಪತಿ ಪರ ಸೋಶಿಯಲ್ ಮೀಡಿಯಾದಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ. ಇನ್ನು ನಟ ಹಾಗೂ ನಿರ್ಮಾಪಕರ ನಡುವೆ ಇಂತಹ ಕಿರಿಕ್ ಶುರುವಾಗಿರುವ ಬೆನ್ನಲ್ಲೇ 'ನಿರ್ಮಾಪಕನಿಲ್ಲದೇ ನಡೆಯದು ನಮ್ಮ ನಾಟಕ' ಎನ್ನುವ ಆಲ್ಬಮ್ ಸಾಂಗ್ ಬಿಡುಗಡೆಯಾಗಿದೆ.
ಮಂಜು ಕವಿ ಎಂಬುವವರು ಕನ್ನಡ ಸಿನಿಮಾ ನಿರ್ಮಾಪಕರ ಕುರಿತು ಈ ಆಲ್ಬಮ್ ಸಾಂಗ್ ಬರೆದು, ಹಾಡಿ, ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರ ನಿರ್ಮಾಣಕ್ಕೆ ಹಣ ಹಾಕುವ ನಿರ್ಮಾಪಕರು ಬಹಳ ಮುಖ್ಯ, ಅವರಿಲ್ಲದೇ ನಮ್ಮ ನಟನೆಗೆ ಬೆಲೆಯಿಲ್ಲ ಎನ್ನುವ ದಾಟಿಯಲ್ಲಿ ಹಾಡನ್ನು ಕಟ್ಟಿಕೊಡಲಾಗಿದೆ. ನಿರ್ಮಾಪಕನಿಲ್ಲದೇ ನಡೆಯದು ನಮ್ಮ ನಾಟಕ, ನಿರ್ಮಾಪಕನಿಂದಲೇ ಬದಲಾಗುವುದು ನಮ್ಮ ಜಾತಕ ಎಂದು ಹಾಡು ಮುಂದುವರೆಯುತ್ತದೆ.
ಕನ್ನಡ ಸಿನಿಮಾ ನಿರ್ಮಾಪಕರ ಫೋಟೊಗಳನ್ನೆಲ್ಲಾ ಸೇರಿಸಿ ಈ ಆಲ್ಬಮ್ ವಿಡಿಯೋ ರಿಲೀಸ್ ಮಾಡಲಾಗಿದೆ. ಸಾಮಾನ್ಯವಾಗಿ ಸ್ಟಾರ್ ನಟರಿಗೆ ಇಂತಹ ಆಲ್ಬಮ್ ಸಾಂಗ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಆದರೆ ನಿರ್ಮಾಪಕರ ಕುರಿತು ಅದರಲ್ಲೂ ಮುಖ್ಯವಾಗಿ ಉಮಾಪತಿ ಶ್ರೀನಿವಾಸ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಸಾಂಗ್ ಮಾಡಿರುವುದು ಗೊತ್ತಾಗುತ್ತಿದೆ.

ಕಳೆದ ಮೂರು ದಿನಗಳಿಂದ ನಟ ದರ್ಶನ್‌ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ತಿರುಗೇಟು ನೀಡುತ್ತಿದ್ದಾರೆ. ನಾವು ಹಣ ಹಾಕಿದ್ದಕ್ಕೆ ನೀವು ಸಿನಿಮಾ ಮಾಡಿದ್ದು. ನಿಮ್ಮ ಕರಿಯರ್‌ನ ದೊಡ್ಡ ಬ್ಲಾಕ್‌ಬಸ್ಟರ್ 'ರಾಬರ್ಟ್' ಸಿನಿಮಾ ಮಾಡಿದ್ದು ನಾವೇ ಎಂದಿದ್ದಾರೆ. ಈ ಆಲ್ಬಮ್ ಸಾಂಗ್‌ನಲ್ಲಿ ಕೂಡ ಅದನ್ನೇ ಸಾರಿ ಸಾರಿ ಹೇಳಲಾಗಿದೆ. ಒಟ್ಟಾರೆ ದರ್ಶನ್- ಉಮಾಪತಿ ನಡುವಿನ ಶೀತಲ ಸಮರ ಜೋರಾಗಿರುವ ಸಮಯದಲ್ಲೇ ಈ ಹಾಡು ಬಂದಿದೆ.
ಪುಟ್ಟಣ್ಣ ಕಣಗಾಲ್, ಪಾರ್ವತಮ್ಮ ರಾಜ್‌ಕುಮಾರ್, ದ್ವಾರಕೀಶ್, ಜಯಣ್ಣ ಭೋಗೇಂದ್ರ, ವಿಜಯ್ ಕಿರಗಂದೂರ್, ಶೈಲಜಾ ನಾಗ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಶ್ರೀ ದೇವಿ, ಮುನಿರತ್ನ, ಸೂರಪ್ಪ ಬಾಬು, ರಾಕ್‌ಲೈನ್ ವೆಂಕಟೇಶ್, ಕೋಟಿ ರಾಮು ಹೀಗೆ ಹಲವು ನಿರ್ಮಾಪಕ ಫೋಟೊಗಳನ್ನು ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ಈ ಆಲ್ಬಮ್ ಸಾಂಗ್ ಮೂಲಕ ನಟ ದರ್ಶನ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
'ಕಾಟೇರ' ಸಿನಿಮಾ ಟೈಟಲ್ ಕೊಟ್ಟಿದ್ದು, ಕಥೆ ಬರೆಸಿದ್ದು ನಾನು. ನನ್ನ ಜಡ್ಜ್‌ಮೆಂಟ್ ತಪ್ಪಾಗಲಿಲ್ಲ ಎಂದು ಹಿಂದೆ ಉಮಾಪತಿ ಹೇಳಿದ್ದರು. ಇದಕ್ಕೆ ಸ್ಪಷ್ಟನೆ ಕೊಡುವ ವೇಳೆ ನಟ ದರ್ಶನ್ ಅಯ್ಯೋ ತಗಡೇ. ನಿನಗೆ 'ರಾಬರ್ಟ್' ಕಥೆ ಕೊಟ್ಟದ್ದೇ ನಾವು. ಯಾಕಪ್ಪಾ ಬಂದು ಬಂದು ನಮ್ಮ ಕೈಯಲ್ಲಿ ಯಾಕೆ ಗುಮ್ಮಿಸಿಕೊಳ್ಳುತ್ತೀಯಾ? ಗುಮ್ಮಿಸಿಕೊಳ್ಳಬೇಡ" ಎಂದಿದ್ದರು. ಇದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರನ್ನು ಕೆರಳಿಸಿದೆ.


Click it and Unblock the Notifications











