'ಅಪ್ಪಾ ಐ ಲವ್ ಯು' ಸಿನಿಮಾದ ಮೆಲೋಡಿ ಹಾಡು ರಿಲೀಸ್...ನೆನಪಿರಲಿ ಪ್ರೇಮ್ ಗೆ ಸಾಥ್ ಕೊಟ್ಟ ಯಂಗ್ ರೆಬಲ್ ಸ್ಟಾರ್
ಬಹಳ ದಿನಗಳ ಬಳಿಕ ಲವ್ಲಿ ಸ್ಟಾರ್ ಪ್ರೇಮ್ ನಟಿಸಿರುವ ಕನ್ನಡ ಸಿನಿಮಾವೊಂದು ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಟಗರು ಪುಟ್ಟಿ ಮಾನ್ವಿತಾ ಕಾಮತ್ ಕೂಡ ನಟಿಸುತ್ತಿದ್ದು, ಈ ಜೋಡಿ ಇದೇ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ. ಅಂದ್ಹಾಗೆ ಆ ಸಿನಿಮಾದ ಹೆಸರು 'ಅಪ್ಪಾ ಐ ಲವ್ ಯೂ'.
ಕನ್ನಡ ಚಿತ್ರರಂಗದ ಹಿರಿಯ ನಟ ತಬಲಾ ನಾನಿ ನಿರ್ಮಾಣ ಮಾಡಿ ನಟಿಸಿರುವ ಈ ಸಿನಿಮಾದ ಮೊದಲ ಹಾಡು ಈಗ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್‌ನ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಈ ಹಾಡನ್ನು ರಿಲೀಸ್ ಮಾಡಿದ್ದಾರೆ. ಈ ವೇಳೆ ಇಡೀ ಚಿತ್ರತಂಡ ಅಪ್ಪನ ಜೊತೆಗಿನ ಸವಿನೆನಪುಗಳನ್ನು ಹಂಚಿಕೊಂಡಿರು.

"ನಮ್ಮಅಪ್ಪನ ಬಗ್ಗೆ ಮಾತಾಡೋಕೆ ಹೊರಟರೆ ಗಂಟೆಗಟ್ಟಲೇ ಮಾತನಾಡಬೇಕಾಗುತ್ತದೆ. ಪ್ರೇಮಣ್ಣ ನನ್ನ ಯಾಕೆ ಪ್ರೋಗ್ರಾಂಗೆ ಕರೆಯುತ್ತಾರೆ ಎನಿಸಿತು. ನನಗಿಂತ ಸೀನಿಯರ್ ಅವರು. ಟೈಟಲ್ ನೋಡಿದಾಗ ಈ ಕಾರಣಕ್ಕೆ ನನ್ನ ಕರೆದಿದ್ದಾರೆ ಅಂದುಕೊಂಡೆ. ಪ್ರತಿಯೊಬ್ಬರಿಗೂ ತಮ್ಮ ಅಪ್ಪನ ಜೊತೆಗೆ ಒಂದು ನೆನಪು ಇದ್ದೇ ಇರುತ್ತದೆ. ತಂದೆ ಇರುವವರಿಗೂ ಅವರ ಬೆಲೆ ಏನು ಅಂತ ಗೊತ್ತಾಗಲ್ಲ. ಪ್ರೇಮ್ ಹೀರೋ ಆದವರು. ಮನೆಯಿಂದ ಹೀರೋಯಿನ್ ಕೂಡ ಕೊಟ್ಟಿದ್ದಾರೆ. ತಬಲ ನಾಣಿ ಸರ್ ಒಂದೊಳ್ಳೆ ಮೆಸೇಜ್ ಇಟ್ಟುಕೊಂಡು, ಒಂದೊಳ್ಳೆ ಕಂಟೆಂಟ್ ಇಟ್ಕೊಂಡು ಸೊಸೈಟಿಗೆ ಏನಾದರೂ ಕೊಡಬೇಕು ಅಂತಾ ಬಂದಿದ್ದೀರಾ. ನಿಮಗೆ ಒಳ್ಳೆಯದಾಗಲಿ" ಎಂದು ಅಭಿಷೇಕ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ನೆನಪಿರಲಿ ಪ್ರೇಮ್ ಕೂಡ ಕಷ್ಟ ಕಾಲದಲ್ಲಿ ತಮ್ಮ ತಂದೆ ಹೇಳಿದ ಮಾತನ್ನು ನೆನಪಿಸಿಕೊಂಡರು. " ಸಿನಿಮಾದಲ್ಲಿ 22 ವರ್ಷ ಪೂರೈಸಿದ್ದೇನೆ ಅಂದರೆ ಅದು ನಮ್ಮ ತಂದೆಯಿಂದ ಅಂತಾ ಹೆಮ್ಮೆಯಿಂದ ಹೇಳುತ್ತೇನೆ. ಸಿನಿಮಾ ಹೀರೋ ಆಗಬೇಕು ಅಂತಾ ಕನಸು ಕಟ್ಟಿಕೊಂಡಾಗ ಗಾಂಧಿನಗರದಲ್ಲಿ ಫೋಟೋ ಇಟ್ಟುಕೊಂಡು ತಿರುಗಾಡುತ್ತಿದ್ದೆ. ಮದುವೆ ಆಗಿತ್ತು. ಆಗ ತಾನೇ ಮಗಳು ಹುಟ್ಟಿದ್ದಳು. ಆಗ ಕಷ್ಟದಲ್ಲಿ ಇದ್ದೆ. ಕೆಲಸ ಮಾಡು ಅಂತಾ ಎಲ್ಲರೂ ಹೇಳೋರು. ಆಗ ನಮ್ಮತಂದೆ ಬಳಿ ಕೆಲಸಕ್ಕೆ ಹೋಗುತ್ತೇನೆ ಎಂದೆ. ನನ್ನ ತಂದೆ ಹೇಳಿದ ಒಂದು ಮಾತು ನನ್ನನ್ನು ಸ್ಟಾರ್ ಆಗಿ ಇಲ್ಲಿ ನಿಲ್ಲಿಸಿದೆ."ಎಂದು ನೆನಪಿಸಿಕೊಂಡಿದ್ದಾರೆ.

ಹಾಗೇ ನಿರ್ದೇಶಕ ಅಥರ್ವ ಆರ್ಯ ಸಿನಿಮಾ, ರೆಬೆಲ್ ಸ್ಟಾರ್ ಹಾಗೂ ಕಥೆಯ ಬಗ್ಗೆ ಮಾಹಿತಿ ಹಂಚಿಕೊಂಡರು. "ನಾವು ಮಂಡ್ಯದವರು. ಅಂಬರೀಶ್ ಅಣ್ಣ ಅಂದರೆ ನಮಗೆ ವಿಶೇಷವಾದ ಪ್ರೀತಿ. ಅವರು ರೋಲ್ ಮಾಡೆಲ್. ನಮಗೆ ಬುದ್ದಿ ಬಂದಾಗಿನಿಂದ ನಮ್ಮ ಫಸ್ಟ್ ಹೀರೋ ಯಾರು ಅಂದರೆ ಅಂಬರೀಶ್ ಅಣ್ಣ. ಅಂಬರೀಶ್ ಅಣ್ಣನ ಸಿನಿಮಾ ನೋಡಿಕೊಂಡು ಬಂದವರು ನಾವು. ಜೀವನದಲ್ಲಿ ಪ್ರತಿಯೊಬ್ಬ ಮಕ್ಕಳು ತಮ್ಮ ತಂದೆಗೆ ಅಪ್ಪ ಐ ಲವ್ ಯು ಅಂತಾ ಹೇಳಲೇಬೇಕು. ವಯಸ್ಸಾಗಿ, ಏನೂ ಆಗುತ್ತಿಲ್ಲ ಅಂತಾದಾಗ ಅವರ ಮುಂದೆ ನಿಂತು ಅಪ್ಪಾ ಐ ಲವ್ ಯು ಅಂತಾ ಹೇಳಬೇಕು. ಅವರ ಪ್ರೀತಿಗೆ,ತ್ಯಾಗಕ್ಕೆ ನಾವು ಪ್ರತಿಫಲ ಕೊಡಬೇಕು ಅಂದಾಗ ಅಪ್ಪಾ ಐ ಲವ್ ಯು ಅಂತಾ ಹೇಳಬೇಕು. ಸಂಸಾರದಲ್ಲಿ ಅಪ್ಪ ಎಷ್ಟು ಮುಖ್ಯ. ಸಮಾಜಕ್ಕೆ ತಂದೆ ಸ್ಥಾನ ಏನು ಅನ್ನೋದು ಕಥೆಯ ತಿರುಳು" ಎಂದು ಅಥರ್ವ ಆರ್ಯ ಹೇಳಿದ್ದಾರೆ.
ಅಪ್ಪ-ಮಗನ ಬಾಂಧವ್ಯ ಸಾರಿ ಹೇಳುವ ಮನೆಗೊಂದು ಮಾಳಿಗೆ ಹಾಡಿಗೆ ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಆಕಾಶ್ ಪರ್ವ ಸಂಗೀತ ನೀಡಿದ್ದಾರೆ. ತಬಲಾ ನಾಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸಂಜಯ್, ಜೀವಿತಾ, ರಂಗಿತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಇದ್ದಾರೆ.
ಅಥರ್ವ್ ಆರ್ಯ 'ಅಪ್ಪಾ ಐ ಲವ್ ಯೂ' ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಎರಡನೇ ಪ್ರಯತ್ನ. ಟೈಟಲ್ ಹೇಳುವಂತೆ ಇದು ತಂದೆಯ ಮಹತ್ವ ಸಾರುವ ಸಿನಿಮಾ. ಈ ಸಿನಿಮಾದಲ್ಲಿ ತಂದೆಯಾಗಿ ತಬಲಾನಾಣಿ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲಿಯೇ ಈ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.


Click it and Unblock the Notifications











