'ಗಂಧದ ಗುಡಿ'ಯಲ್ಲಿ ಇರದಿದ್ದ ಈ ಹಾಡು ಸೇರಿದಂತೆ ಒಟ್ಟು ಐದು ಹಾಡುಗಳನ್ನು ಈ ಅಪ್ಲಿಕೇಶನ್‌ನಲ್ಲಿ ಕೇಳಿ
ಪುನೀತ್ ರಾಜ್‌ಕುಮಾರ್ ಅವರ ಅಂತಿಮ ಚಿತ್ರ, ಅಪ್ಪು ಕನಸಿನ ಕೂಸು 'ಗಂಧದ ಗುಡಿ' ಚಿತ್ರ ಕಳೆದ ಅಕ್ಟೋಬರ್ 28ರಂದು ರಾಜ್ಯಾದ್ಯಂತ ಬಿಡುಗಡೆಗೊಂಡಿತ್ತು. ಅಪ್ಪು ನಟಿಸಿರುವ ಕೊನೆಯ ಚಿತ್ರವನ್ನು ಕಣ್ತುಂಬಿಕೊಳ್ಳೋಣ ಎಂದು ಚಿತ್ರಮಂದಿರಕ್ಕೆ ನುಗ್ಗಿದ್ದ ಸಿನಿ ರಸಿಕರು ಹಾಗೂ ಅಭಿಮಾನಿಗಳು ಚಿತ್ರದ ಕಂಟೆಂಟ್ ಕಂಡು ನಿಜಕ್ಕೂ ಮೂಕವಿಸ್ಮಿತರಾಗಿದ್ದರು.
ಪುನೀತ್ ರಾಜ್‌ಕುಮಾರ್ ಹಾಗೂ ಅಮೋಘ ವರ್ಷ ಜೋಡಿ ಚಿತ್ರದಲ್ಲಿ ಕರ್ನಾಟಕದ ವನ್ಯ ಸಂಪತ್ತನ್ನು ತೋರಿಸಿದ್ದ ರೀತಿಗೆ ಬಹುಪರಾಕ್ ದೊರೆತಿತ್ತು. ಓರ್ವ ಸ್ಟಾರ್ ನಟ ಇಂಥ ಪ್ರಯತ್ನ ಮಾಡಲು ಸಾಧ್ಯವಾ ಎಂದು ಸಿನಿ ರಸಿಕರು ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಎಪಿಕ್ ಪಯಣವನ್ನು ಶ್ಲಾಘಿಸಿದ್ದರು.
ಹೀಗೆ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದವರು ವಿಶೇಷವಾಗಿ ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತವನ್ನು ಮೆಚ್ಚಿಕೊಂಡು ಕೊಂಡಾಡಿದ್ದರು. ಇತ್ತೀಚೆಗೆ ಕಾಂತಾರ ಮೂಲಕ ಸೆನ್ಸೇಷನ್ ಹುಟ್ಟುಹಾಕಿದ್ದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಗಂಧದ ಗುಡಿಗೂ ಸಹ ಜನರನ್ನು ಕಾಡುವಂತಹ ಸಂಗೀತ ಸಂಯೋಜಿಸಿದ್ದರು. ಅದರಲ್ಲೂ ಚಿತ್ರದ ಕೊನೆಯಲ್ಲಿ ಬರುವ ಮಹಿಳಾ ಧ್ವನಿಯ 'ಅಲ್ಲೇ ಹಾದಿ ಜೀವಜಾಲ' ಹಾಡು ಹಾಗೂ ಆ ಸಮಯದಲ್ಲಿ ಅಪ್ಪು ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಳ್ಳುವ ದೃಶ್ಯ ವೀಕ್ಷಕರ ಕಣ್ಣಂಚಲ್ಲಿ ನೀರು ತರಿಸಿತ್ತು. ಇನ್ನು 'ನಾವಾಡುವ ನುಡಿಯೇ' ಹಾಡು ಇರಲಿದೆ ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯೂ ಆಗಿತ್ತು. ಇನ್ನು ಚಿತ್ರದ ಈ ಹಾಡುಗಳನ್ನು ಚಿತ್ರತಂಡ ಬಿಡುಗಡೆಗೊಳಿಸಿರಲಿಲ್ಲ. ಆದರೆ ಇದೀಗ ಹಾಡುಗಳನ್ನು ಬಿಡುಗಡೆ ಮಾಡಲು ಮುಂದಾಗಿರುವ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದ್ದು ಚಿತ್ರದ ಹಾಡುಗಳಿಗಾಗಿ ಕಾಯುತ್ತಿದ್ದವರಿಗೆ ಖುಷಿಯ ಸುದ್ದಿಯನ್ನು ನೀಡಿದೆ

ಹಾಡುಗಳು ಎಲ್ಲಿ ಲಭ್ಯ?
ಇನ್ನು ಇಂದು ( ನವೆಂಬರ್ 10 ) ಸಂಜೆಯಿಂದ ಗಂಧದ ಗುಡಿ ಚಿತ್ರದ ಎಲ್ಲಾ ಐದು ಹಾಡುಗಳನ್ನು ಎಲ್ಲಾ ಆಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್‌ನಲ್ಲಿಯೂ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಘೋಷಣೆಯನ್ನೂ ಸಹ ಮಾಡಿದೆ. ವಿಂಕ್ ಮ್ಯೂಸಿಕ್, ಸ್ಪಾಟಿಫೈ, ಜಿಯೊ ಸಾವ್ನ್ ಮ್ಯೂಸಿಕ್, ಹಂಗಾಮಾ, ಯುಟ್ಯೂಬ್ ಮ್ಯೂಸಿಕ್ ಹಾಗೂ ಅಮೆಜಾನ್ ಮ್ಯೂಸಿಕ್ ಸೇರಿದಂತೆ ಮುಂತಾದ ಆಡಿಯೊ ಅಪ್ಲಿಕೇಶನ್‌ಗಳಲ್ಲಿ ಗಂಧದ ಗುಡಿ ಚಿತ್ರದ ಎಲ್ಲಾ ಐದು ಹಾಡುಗಳನ್ನು ಕೇಳಬಹುದಾಗಿದೆ.

ಹಾಡುಗಳ ಪಟ್ಟಿ ಮತ್ತು ಹಾಡಿದವರು
ಗಂಧದ ಗುಡಿ ಚಿತ್ರದ ಹಾಡುಗಳು ಮತ್ತು ಗಾಯಕರ ಪಟ್ಟಿ ಈ ಕೆಳಕಂಡಂತಿದೆ
ನಾವಾಡುವ ನುಡಿಯೇ ರಿಪ್ರೈಸ್ - ವಿಜಯ್ ಪ್ರಕಾಶ್
ಕಾವಲುಗಾರ - ಸಂಜಿತ್ ಹೆಗ್ಡೆ
ಅಲೆಮಾರಿ ಜೊತೆ - ನವೀನ್ ಸಜ್ಜು
ಅಲೆಯ ಕರೆ ( ಅಲ್ಲೇ ಹಾದಿ ಜೀವಜಾಲ ) ಪುರುಷ ವರ್ಷನ್ - ಅಜನೀಶ್ ಬಿ ಲೋಕನಾಥ್
ಅಲೆಯ ಕರೆ ( ಅಲ್ಲೇ ಹಾದಿ ಜೀವಜಾಲ ) ಮಹಿಳಾ ವರ್ಷನ್ - ಸಿ ಆರ್ ಬಾಬಿ

ಅಪ್ಪು ಧನಿಯಲ್ಲಿಲ್ಲ 'ನಾವಾಡುವ ನುಡಿಯೇ'
ಇನ್ನು ಗಂಧದ ಗುಡಿ ಬಿಡುಗಡೆಗೂ ಮುನ್ನವೇ ನಾವಾಡುವ ನುಡಿಯೇ ಕನ್ನಡ ನುಡಿ ಜನಪ್ರಿಯ ಗೀತೆಯನ್ನು ಪುನೀತ್ ರಾಜ್‌ಕುಮಾರ್ ಹಾಡಿದ್ದಾರೆ ಎಂಬ ಸುದ್ದಿ ಇತ್ತು. ನಂತರ ಅಪ್ಪು ಚಿತ್ರೀಕರಣದ ವೇಳೆ ಗುನುಗಿರುವ ಹಾಡಿನ ಸಾಲುಗಳನ್ನು ತೆಗೆದುಕೊಂಡು ಹಾಡನ್ನು ಸಂಯೋಜಿಸಲಾಗಿದೆ ಎಂಬ ಸುದ್ದಿಯೂ ಸಹ ಹೊರಬಿದ್ದಿತ್ತು. ಆದರೆ ಈ ಹಾಡಿಗೆ ವಿಜಯ್ ಪ್ರಕಾಶ್ ದನಿ ನೀಡಿದ್ದರು ಹಾಗೂ ಚಿತ್ರದಲ್ಲಿ ಈ ಹಾಡು ಇರಲೂ ಇಲ್ಲ. ಆದರೆ ಈ ಹಾಡು ಸ್ಟ್ರೀಮಿಂಗ್ ಅಪ್ಲಿಕೇಶನ್‌ನಲ್ಲಿ ಕೇಳಲು ಲಭ್ಯವಿರಲಿದೆ.


Click it and Unblock the Notifications











